ನಟ ಸಲ್ಮಾನ್‌ಖಾನ್‌ ಬಳಿಕ ಇದೀಗ ಮತ್ತೊಬ್ಬ ಖ್ಯಾತ ನಟ ಶಾರುಖ್‌ ಖಾನ್‌ಗೂ ಕೊಲೆ ಬೆದರಿಕೆ

| Published : Nov 07 2024, 11:50 PM IST / Updated: Nov 08 2024, 05:15 AM IST

ಸಾರಾಂಶ

ನಟ ಸಲ್ಮಾನ್‌ಖಾನ್‌ ಬಳಿಕ ಇದೀಗ ಮತ್ತೊಬ್ಬ ಖ್ಯಾತ ನಟ ಶಾರುಖ್‌ ಖಾನ್‌ಗೂ ಕೊಲೆ ಬೆದರಿಕೆ ಹಾಕಲಾಗಿದೆ.

ಮುಂಬೈ: ನಟ ಸಲ್ಮಾನ್‌ಖಾನ್‌ ಬಳಿಕ ಇದೀಗ ಮತ್ತೊಬ್ಬ ಖ್ಯಾತ ನಟ ಶಾರುಖ್‌ ಖಾನ್‌ಗೂ ಕೊಲೆ ಬೆದರಿಕೆ ಹಾಕಲಾಗಿದೆ.

ಛತ್ತೀಸ್‌ಗಢದ ರಾಜಧಾನಿ ರಾಯಪುರದ ವಕೀಲರೊಬ್ಬರ ಮೊಬೈಲ್‌ ಮೂಲಕ ಗುರುವಾರ ಮುಂಬೈನ ಬಾಂದ್ರಾ ಪೊಲೀಸ್‌ ಠಾಣೆಗೆ ನ.5ರಂದು ಈ ಬೆದರಿಕೆ ಕರೆ ಮಾಡಲಾಗಿದೆ. ಅದರಲ್ಲಿ 50 ಲಕ್ಷ ರು. ಕೊಡದೇ ಇದ್ದರೆ ಶಾರುಖ್‌ ಖಾನ್‌ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.

ಮೊಬೈಲ್‌ ಕರೆ ಬಂದ ಮೂಲ ಪತ್ತೆ ಹಚ್ಚಿದಾಗ ಅದು ರಾಯ್‌ಪುರದ ಫೈಜಾನ್‌ ಖಾನ್ ಎಂಬ ವಕೀಲರಿಗೆ ಸೇರಿದ್ದು ಎಂದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ಸೂಚಿಸಿದ್ದಾರೆ.

ಆದರೆ, ಫೈಜಾನ್‌ ಅವರನ್ನು ರಾಯ್‌ಪುರ ಪೊಲೀಸರು ಕೂಡಾ ವಿಚಾರಣೆ ನಡೆಸಿದ್ದು, ಈ ವೇಳೆ, ‘ನ.2ರಂದೇ ತನ್ನ ಫೋನ್‌ ಕಳುವಾಗಿದ್ದು, ನಾನು ಇದರ ಬಗ್ಗೆ ದೂರು ನೀಡಿದ್ದೇನೆ’ ಎಂದು ತಿಳಿಸಿದ್ದಾರೆ.

ಮುಂದಿನ ವಕ್ಫ್‌ ಸಭೆಗಳಿಗೆ ಬಹಿಷ್ಕಾರ: ವಿಪಕ್ಷ ಸದಸ್ಯರ ನಿರ್ಧಾರ

ಕೋಲ್ಕತಾ: ವಕ್ಫ್‌ (ತಿದ್ದುಪಡಿ) ಮಸೂದೆ ಕುರಿತು ಚರ್ಚಿಸಲು ರಚಿಸಲಾಗಿರುವ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಂಬಿಕಾ ಪಾಲ್‌ ಮನಸೋಇಚ್ಛೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ವಿಪಕ್ಷಗಳ ಸದಸ್ಯರು ಮುಂದಿನ ಸಭೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಿಎಂಸಿ ಸಂಸದ ಕಲ್ಯಾಣ್‌ ಬ್ಯಾನರ್ಜಿ, ‘ಪಾಲ್‌ ತಮಗೆ ಇಷ್ಟ ಬಂದಂತೆ ಕೆಲಸ ಮಾಡುತ್ತಿದ್ದಾರೆ. ಗುವಾಹಟಿ, ಭುವನೇಶ್ವರ, ಕೋಲ್ಕತಾ, ಪಟನಾಗಳಲ್ಲಿ ನಡೆಯಲಿರುವ ಸಭೆಗಳನ್ನು 6 ದಿನ ನಡೆಸುವ ವೇಳಾಪಟ್ಟಿ ತಯಾರಿಸಿದ್ದಾರೆ. ಆದ್ದರಿಂದ ಸಮಿತಿಯ ಸಭೆಗಳನ್ನು ಬಹಿಷ್ಕರಿಸಲು ವಿಕಪ್ಷಗಳ ಸದಸ್ಯರು ನಿರ್ಧರಿಸಿದ್ದು, ಮುಂದಿನ ನಡೆಯನ್ನು ಒಟ್ಟಾಗಿ ನಿರ್ಧರಿಸಲಿದ್ದೇವೆ’ ಎಂದರು.ನ.5ರಂದು ಈ ಬಗ್ಗೆ ಲೋಕಸಭೆ ಸ್ಪೀಕರ್‌ಗೆ ವೇಳಾಪಟ್ಟಿಯನ್ನು ಮುಂದೂಡಿ, ವಾರಕ್ಕೆ 1 ದಿನ ಅಥವಾ ಸತತ 2 ದಿನ ಸಭೆ ನಡೆಸಲು ಕೋರಿದ್ದೆವು. ಆದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.

ಸುನಿತಾ ವಿಲಿಯಮ್ಸ್‌ ಸ್ವಸ್ಥ: ನಾಸಾ ಸ್ಪಷ್ಟನೆ

ವಾಷಿಂಗ್ಟನ್‌: ಅಂತರಿಕ್ಷ ಕೇಂದ್ರದಲ್ಲಿರುವ ಭಾರತ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂಬ ವರದಿಗಳನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನಿರಾಕರಿಸಿದೆ ಹಾಗೂ ಎಲ್ಲ ಗಗನಯಾತ್ರಿಗಳು ಉತ್ತಮ ಆರೋಗ್ಯದಲ್ಲಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಎಲ್ಲ ನಾಸಾ ಗಗನಯಾತ್ರಿಗಳು ವಾಡಿಕೆಯ ವೈದ್ಯಕೀಯ ಮೌಲ್ಯಮಾಪನಗಳಿಗೆ ಒಳಗಾಗುತ್ತಾರೆ. ಎಲ್ಲರೂ ಆರೋಗ್ಯದಿಂದ ಇದ್ದಾರೆ ಎಂದು ಅದು ಹೇಳಿದೆ.ವಿಲಿಯಮ್ಸ್‌ ಅಂತರಿಕ್ಷ ಕೇಂದ್ರದಲ್ಲಿ ದೀರ್ಘಕಾಲ ಉಳಿದುಕೊಂಡ ನಂತರ ಅಸ್ವಸ್ಥರಾಗಿದ್ದಾರೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿದ್ದವು.

ಯುಪಿಯಲ್ಲಿ ಮತ್ತೊಂದು ರೈಲು ದುಷ್ಕೃತ್ಯಕ್ಕೆ ಯತ್ನ

ಬಲ್ಲಿಯಾ (ಉ.ಪ್ರ.)

ದೇಶದಲ್ಲಿ ರೈಲು ದುಷ್ಕೃತ್ಯದ ಯತ್ನಗಳು ಮುಂದುವರಿದಿದ್ದು, ಉತ್ತರ ಪ್ರದೇಶದಲ್ಲಿ ರೈಲಿನ ಸಿಗ್ನಲ್‌ಗೆ ಬಟ್ಟೆ ಮುಚ್ಚಿ ಅದನ್ನು ಚಾಲಕನಿಗೆ ಕಾಣದಂತೆ ಮಾಡಿದ್ದ ಘಟನೆ ನಡೆದಿದೆ.ಫರೂಖಾಬಾದ್‌ನಿಂದ ಬಿಹಾರದ ಛಪ್ರಾದತ್ತ ಸಂಚರಿಸುತ್ತಿದ್ದ ಉತ್ಸರ್ಗ್‌ ಎಕ್ಸ್‌ಪ್ರೆಸ್‌, ಬಲ್ಲಿಯಾ ಬಳಿಯ ರೆಯೋತಿ ನಿಲ್ದಾಣಕ್ಕೆ ಬುಧವಾರ ಬೆಳಿಗ್ಗೆ ಬಂದಿತ್ತು. ರೈಲು ಅಲ್ಲಿಂದ ನಿರ್ಗಮನಕ್ಕೆ ಸಜ್ಜಾದಾಗ ಎಷ್ಟೊತ್ತಾದರೂ ಗ್ರೀನ್‌ ಸಿಗ್ನಲ್‌ ಚಾಲಕನಿಗೆ ಗೋಚರಿಸಲಿಲ್ಲ. ಆಗ ಚಾಲಕನ ದೂರಿನ ಮೇರೆಗೆ ಸ್ಟೇಷನ್‌ ಮಾಸ್ಟರ್‌ ಪರಿಶೀಲಿಸಿದಾಗ ಹಸಿರು ಸಿಗ್ನಲ್‌ ಕಾಣದಂತೆ ಮುಂಭಾಗ ಬಟ್ಟೆ ತುಣಕು ಇಟ್ಟಿದ್ದು ಪತ್ತೆಯಾಗಿದೆ.

ಈ ಬಗ್ಗೆ ಪೊಲೀಸರು ಮಾತನಾಡಿ, ‘ಬಲ್ಲಿಯಾದ ರೆಯೋತಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಸಿಗ್ನಲ್‌ನ ಲೈಟ್‌ಗೆ ಬಟ್ಟೆ ತುಣುಕು ಮುಚ್ಚಿ ದುಷ್ಕೃತ್ಯ ಮಾಡುವ ಯತ್ನ ನಡೆದಿದೆ. ಈ ಸಂಬಂಧ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಹೇಳಿದ್ದಾರೆ.ಸೆ.29 ರಂದು ಲಖನೌ-ಛಪ್ರಾ ಎಕ್ಸ್‌ಪ್ರೆಸ್‌ ಹಳಿ ಮೇಲೆ ಇರಿಸಿದ್ದ ಕಲ್ಲಿನ ಮೇಲೆ ಹರಿದಿತ್ತು. ಇದರ ನಡುವೆ ಇಂಥದ್ದೇ ಹಲವು ಘಟನೆಗಳು ಸಂಭವಿಸಿದ್ದವು.

ಈರುಳ್ಳಿ ಸಗಟು ಬೆಲೆ ₹5400ಗೆ ಏರಿಕೆ: 5 ವರ್ಷದ ಗರಿಷ್ಠ

ನಾಸಿಕ್‌: ಅಡುಗೆ ಮನೆ ಮಿತ್ರ ಈರುಳ್ಳಿ ಬೆಲೆ ಗಗನಕ್ಕೆ ಏರುತ್ತಿದ್ದು, ಮಂಗಳವಾರ ನಾಸಿಕ್‌ನಲ್ಲಿ ಸರಾಸರಿ ಸಗಟು ಬೆಲೆಯು ಕ್ವಿಂಟಲ್‌ಗೆ 5 ವರ್ಷದ ಗರಿಷ್ಠವಾದ 5400 ರು.ಗೆ ತಲುಪಿದೆ.

ಕಳೆದ ಬೇಸಿಗೆಯಲ್ಲಿ ಬೆಳೆದ ಈರುಳ್ಳಿ ದಾಸ್ತಾನು ಖಾಲಿಯಾಗಿದ್ದರ ಜತೆಗೆ ಮುಂಗಾರು ಬೆಳೆ ಆಗಮನದಲ್ಲಿನ ವಿಳಂಬವು ಬೆಲೆ ಏರಿಕೆಗೆ ಕಾರಣವಾಗಿವೆ.ದೇಶದ ಅತಿ ದೊಡ್ಡ ಈರುಳ್ಳಿ ಮಾರುಕಟ್ಟೆಯಾದ ನಾಸಿಕ್‌ನಲ್ಲಿ ಪ್ರತಿ ದಿನಕ್ಕೆ ಅಂದಾಜು 15,000 ಕ್ವಿಂಟಲ್‌ ಈರುಳ್ಳಿ ಆಗಮಿಸುತ್ತದೆ. ಆದರೆ ಬುಧವಾರ ಕೇವಲ 3000 ಕ್ವಿಂಟಲ್‌ ಬಂದಿದ್ದು, ಬೆಲೆ ಏರಿಕೆಗೆ ಬಹುದೊಡ್ಡ ಕಾರಣವಾಗಿದೆ. ಹೀಗಾಗಿ ಕ್ವಿಂಟಲ್‌ ಈರುಳ್ಳಿ ಬೆಲೆಯು ಬುಧವಾರ 3,951 ರು.ನಿಂದ 5400 ರು.ಗೆ ಜಿಗಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೆ 2019ರ ಡಿಸೆಂಬರ್‌ನಲ್ಲಿ ಬೆಲೆ ಏರಿತ್ತು.