ಸಾರಾಂಶ
ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ ಮತ್ತು ಬಿಹಾರದಲ್ಲಿ ಸೋಮವಾರ ಬೆಳಗ್ಗೆ ಭಾರೀ ಸದ್ದಿನೊಂದಿಗೆ ಭೂಕಂಪನದ ಅನುಭವವಾಗಿದೆ. ಎರಡೂ ಕಡೆ ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಕಂಪನ ದಾಖಲಾಗಿದೆ. ಇದೇ ಹೊತ್ತಿನಲ್ಲಿ ನೆರೆಯ ಉತ್ತರಪ್ರದೇಶದ ನೋಯ್ಡಾ, ಒಡಿಶಾದಲ್ಲೂ ಭೂಕಂಪನದ ಅನುಭವವಾಗಿದೆ.
ಬಿಹಾರಕ್ಕೆ ಹೋಲಿಸಿದರೆ ದೆಹಲಿಯಲ್ಲಿ ಭೂಕಂಪನದ ತೀವ್ರತೆ ತುಸು ಹೆಚ್ಚಿತ್ತು. ಬೆಳಗ್ಗೆ 5.36ರ ವೇಳೆಗೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ಸುಖನಿದ್ದೆಯಲ್ಲಿದ್ದ ಜನ ತಕ್ಷಣ ಮನೆ, ಅಪಾರ್ಟ್‌ಮೆಂಟ್‌ಗಳಿಂದ ಹೊರಗೋಡಿ ಬಂದಿದ್ದಾರೆ. ಭೂಕಂಪನದ ವೇಳೆ ಹಲವು ಪ್ರದೇಶಗಳಲ್ಲಿ ಭಾರೀ ಸದ್ದು ಕೇಳಿಬಂದ ಕಾರಣ ಜನತೆ ಹಲವು ಗಂಟೆಗಳ ಕಾಲ ಆತಂಕದಿಂದಲೇ ಮನೆಯ ಹೊರಗೇ ನಿಂತಿದ್ದರು.ಹಿಂದೆಯೂ ದೆಹಲಿಯಲ್ಲಿ ಭೂಕಂಪನ ಆಗಿತ್ತಾದರೂ ಈ ಭಾರಿ ಅದರ ತೀವ್ರತೆ ತುಸು ಜಾಸ್ತಿಯೇ ಇತ್ತು. ಭೂಕಂಪನದ ಕೇಂದ್ರ ಬಿಂದು ನಗರದಲ್ಲೇ ಇರುವ ದೌಲಾ ಕೌನ್ ಪ್ರದೇಶದ ದುರ್ಗಾಬಾಯಿ ದೇಶ್‌ಮುಖ್ ಕಾಲೇಜು ವ್ಯಾಪ್ತಿಯಲ್ಲಿತ್ತು. ಅದೇ ರೀತಿ ಈ ಬಾರಿ ಐದು ಕಿ.ಮೀ. ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ. ಸಾಮಾನ್ಯವಾಗಿ ಭೂಮಿಯ 5 ರಿಂದ 10ಕಿ.ಮೀ. ಆಳದಲ್ಲಿ ಸಂಭವಿಸುವ ಭೂಕಂಪನಗಳ ತೀವ್ರತೆ ಹೆಚ್ಚಿರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಭೂಕಂಪನದ ಪರಿಣಾಮ ಮನೆಯ ವಸ್ತುಗಳು, ಕಟ್ಟಡ ಅಲುಗಾಡುವ ದೃಶ್ಯಗಳು ಸಿ.ಸಿ.ಟೀವಿಯಲ್ಲಿ ದಾಖಲಾಗಿದ್ದು, ಜನರಲ್ಲಿ ಭೀತಿ ಸೃಷ್ಟಿಸಿದೆ. ಈ ರೀತಿಯ ಕಂಪನದ ಅನುಭವ ಆಗಿರುವುದು ಇದೇ ಮೊದಲು ಎಂದು ಅನೇಕರು ಹೇಳಿಕೊಂಡಿದ್ದಾರೆ.ದೆಹಲಿ ಬೆನ್ನಲ್ಲೇ ಬಿಹಾರದಲ್ಲಿ ಬೆಳಗ್ಗೆ 8.2ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದೆ. ಸಿವಾನ್ ಜಿಲ್ಲೆಯಲ್ಲಿ 10 ಕಿ.ಮೀ. ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಇತ್ತು. ಇದರಿಂದ ಅಲ್ಲೂ ಜನ ಕೆಲಕಾಲ ಆತಂಕದಿಂದ ಮನೆಗಳಿಂಗ ಹೊರಗೋಡಿ ಬಂದರು.
;Resize=(128,128))
;Resize=(128,128))
;Resize=(128,128))
;Resize=(128,128))