ಶರಬತ್‌ ಜಿಹಾದ್‌ ಪೋಸ್ಟ್‌ಗಳ ಹಿಂಪಡೆವೆ: ಬಾಬಾ ರಾಮದೇವ್‌

| Published : Apr 23 2025, 12:33 AM IST

ಸಾರಾಂಶ

ಪತಂಜಲಿಯ ಪಾನೀಯದ ಪ್ರಚಾರದ ವೇಳೆ ರೂಹ್‌ ಅಫ್ಜಾ ಪಾನೀಯ ‘ಶರಬತ್‌ ಜಿಹಾದ್‌’ ಮಾಡುತ್ತಿದೆ ಎಂಬ ತಮ್ಮ ಹೇಳಿಕೆಯ ಎಲ್ಲಾ ವಿಡಿಯೋ ಹಾಗೂ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳನ್ನು ಹಿಂಪಡೆಯುವುದಾಗಿ ಯೋಗಗುರು ಬಾಬಾ ರಾಮ್‌ದೇವ್‌ ಅವರು ಘೋಷಿಸಿದ್ದಾರೆ.

-ರೂಹ್‌ ಅಫ್ಜಾ ಹಣದಿಂದ ಮಸೀದಿ ನಿರ್ಮಾಣ ಎಂದ್ದ ಬಾಬಾ-ಇದು ಆತ್ಮಸಾಕ್ಷಿಯನ್ನೇ ಅಲುಗಿಸುವಂತಹದ್ದು: ಕೋರ್ಟ್‌ ಕಿಡಿನವದೆಹಲಿ: ಪತಂಜಲಿಯ ಪಾನೀಯದ ಪ್ರಚಾರದ ವೇಳೆ ರೂಹ್‌ ಅಫ್ಜಾ ಪಾನೀಯ ‘ಶರಬತ್‌ ಜಿಹಾದ್‌’ ಮಾಡುತ್ತಿದೆ ಎಂಬ ತಮ್ಮ ಹೇಳಿಕೆಯ ಎಲ್ಲಾ ವಿಡಿಯೋ ಹಾಗೂ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳನ್ನು ಹಿಂಪಡೆಯುವುದಾಗಿ ಯೋಗಗುರು ಬಾಬಾ ರಾಮ್‌ದೇವ್‌ ಅವರು ಘೋಷಿಸಿದ್ದಾರೆ.

ರಾಂದೇವ್‌ ಅವರ ಹೇಳಿಕೆ ಆತ್ಮಸಾಕ್ಷಿಯನ್ನೇ ಅಲುಗಿಸುವಂತಹದ್ದು ಮತ್ತು ಅಸಮರ್ಥನೀಯ ಎಂದು ದೆಹಲಿ ಹೈಕೋರ್ಟ್‌ ಹೇಳಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ. ಇತ್ತೀಚೆಗೆ ಪತಂಜಲಿಯ ‘ಗುಲಾಬ್‌ ಶರಬತ್‌’ನ ಪ್ರಚಾರ ಮಾಡುತ್ತಾ ರಾಮ್‌ದೇವ್‌, ‘ಹಂದರ್ದ್‌ನ ರೂಹ್‌ ಅಫ್ಜಾ ಶರಬತ್ತಿನಿಂದ ಸಂಪಾದಿಸಿದ ಹಣದಲ್ಲಿ ಮದರಸಾ ಮತ್ತು ಮಸೀದಿಗಳನ್ನು ನಿರ್ಮಿಸಿ ಶರಬತ್‌ ಜಿಹಾದ್‌ ನಡೆಸಲಾಗುತ್ತಿದೆ’ ಎಂದಿದ್ದರು. ಬಳಿಕ ತಾವು ಯಾವುದೇ ಬ್ರ್ಯಾಂಡ್‌ ಅಥವಾ ಸಮುದಾಯದ ಹೆಸರನ್ನು ಉಲ್ಲೇಖಿಸಿರಲಿಲ್ಲ ಎಂದೂ ಸಮರ್ಥಿಸಿಕೊಂಡಿದ್ದರು. ಇದನ್ನು ಕೋರ್ಟ್‌ನಲ್ಲಿ ವಿರೋಧಿಸಿದ್ದ ಹಂದರ್ದ್‌, ‘ಈ ರೀತಿಯ ದ್ವೇಷಭರಿತ ಭಾಷಣ ಅವಹೇಳನಕಾರಿಯಾಗಿದ್ದು, ಕೋಮು ವಿಭಜನೆಯನ್ನು ಸೃಷ್ಟಿಸಬಹುದು. ಅವರು (ರಾಮದೇವ್) ತಮ್ಮ ವ್ಯವಹಾರ ಮುಂದುವರೆಸಿಕೊಂಡು ಹೋಗುವ ಬದಲು ನಮಗೇಕೆ ತೊಂದರೆ ಕೊಡಬೇಕು?’ ಎಂದು ಪ್ರಶ್ನಿಸಿತ್ತು. ಇದಕ್ಕೆ ಕೋರ್ಟಿಗೆ ಉತ್ತರಿಸಿರುವ ಬಾಬಾ, ‘ಹೇಳಿಕೆಗೆ ಸಂಬಂಧಿಸಿದ ಎಲ್ಲಾ ಮಾದರಿಯ ಜಾಹೀರಾತು ಮತ್ತು ಪೋಸ್ಟ್‌ಗಳನ್ನು ತೆಗೆದುಹಾಕುತ್ತೇವೆ’ ಎಂದಿದ್ದಾರೆ. ಬಳಿಕ, ತಮ್ಮ ಪ್ರತಿಸ್ಪರ್ಧಿಗಳ ಉತ್ಪನ್ನಗಳ ಬಗ್ಗೆ ಭವಿಷ್ಯದಲ್ಲಿ ಅಂತಹ ಯಾವುದೇ ಹೇಳಿಕೆ, ಜಾಹೀರಾತು ನೀಡುವುದಿಲ್ಲ ಎಂದು 5 ದಿನಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ರಾಮ್‌ದೇವ್ ಅವರಿಗೆ ಕೋರ್ಟ್‌ ಸೂಚಿಸಿದೆ.