ಷೇರುಪೇಟೆಯಲ್ಲಿ ನಿನ್ನೆಯೇ ವಿಜಯೋತ್ಸವ!

| Published : Jun 04 2024, 12:31 AM IST / Updated: Jun 04 2024, 07:35 AM IST

ಷೇರುಪೇಟೆಯಲ್ಲಿ ನಿನ್ನೆಯೇ ವಿಜಯೋತ್ಸವ!
Share this Article
  • FB
  • TW
  • Linkdin
  • Email

ಸಾರಾಂಶ

ಸೆನ್ಸೆಕ್ಸ್‌ 2507 ಅಂಕ ಜಿಗಿತ ಕಂಡಿದ್ದು, 5 ವರ್ಷದ ಗರಿಷ್ಠ ಒಂದು ದಿನದ ಏರಿಕೆಯ ದಾಖಲೆ ನಿರ್ಮಿಸಿದೆ. ಇದರಿಂದಾಗಿ ಷೇರುದಾರರಿಗೆ ₹13 ಲಕ್ಷ ಕೋಟಿ ಲಾಭವಾಗಿದೆ.

ನವದೆಹಲಿ: ‘ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ. ಮೋದಿ ಮೂರನೇ ಬಾರಿ ಪ್ರಧಾನಿಯಾಗಲಿದ್ದಾರೆ’ ಎಂಬ ಚುನಾವಣೋತ್ತರ ಸಮೀಕ್ಷಾ ವರದಿಗಳು ಬಾಂಬೆ ಷೇರುಪೇಟೆಗೆ ಭರ್ಜರಿ ಕಿಕ್‌ ನೀಡಿವೆ. 

‘ಮೋದಿ ಸರ್ಕಾರ ಆರ್ಥಿಕತೆ ಉತ್ತೇಜನಕ್ಕೆ ಮತ್ತಷ್ಟು ಕ್ರಮ ಕೈಗೊಳ್ಳಲಿದೆ’ ಎಂಬ ನಿರೀಕ್ಷೆಯಲ್ಲಿ ಸೆನ್ಸೆಕ್ಸ್‌ ಸೋಮವಾರ 2507 ಅಂಕಗಳ ಭಾರೀ ಏರಿಕೆ ಕಂಡು ದಾಖಲೆಯ 76468 ಅಂಕಗಳಲ್ಲಿ ಮುಕ್ತಾಯವಾಗಿದೆ.ಇದು 2019ರ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕಂಡುಬಂದ ಸೆನ್ಸೆಕ್ಸ್‌ನ ಗರಿಷ್ಠ ದೈನಂದಿನ ಏರಿಕೆಯಾಗಿದೆ. ಪರಿಣಾಮ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 13.78 ಲಕ್ಷ ಕೋಟಿ ರು. ಹೆಚ್ಚಳವಾಗಿದೆ.

2777ರವರೆಗೂ ಏರಿತ್ತು:ಸೋಮವಾರ ದಿನದ ಆರಂಭದಲ್ಲೇ 2600 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್‌ ಒಂದು ಹಂತದಲ್ಲಿ 2777 ಅಂಕಗಳವರೆಗೂ ಏರಿಕೆ ಕಂಡಿತ್ತಾದರೂ, ಬಳಿಕ ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಮುಂದಾದ ಹಿನ್ನೆಲೆಯಲ್ಲಿ ಅಲ್ಪ ಇಳಿಕೆ ಕಂಡು 2507 ಅಂಕಗಳ ಏರಿಕೆಯೊಂದಿಗೆ 76468 ಅಂಕಗಳಲ್ಲಿ ಮುಕ್ತಾಯವಾಯಿತು. ಇದು ಸೂಚ್ಯಂಕದ ಇದುವರೆಗೆ ಗರಿಷ್ಠ ಮುಕ್ತಾಯದ ದಾಖಲೆಯಾಗಿದೆ.ಇನ್ನು ನಿಫ್ಟಿ ಕೂಡ 733 ಅಂಕ ಏರಿಕೆ ಕಂಡು 23263ರಲ್ಲಿ ಅಂತ್ಯಗೊಂಡಿತು. ಇದು ಕೂಡಾ ಮುಕ್ತಾಯದ ಹೊಸ ದಾಖಲೆ.

ಸಾರ್ವಜನಿಕ ವಲಯದ ಕಂಪನಿಗಳು, ಬ್ಲ್ಯೂಚಿಪ್‌ ಕಂಪನಿಗಳಾದ ರಿಲಯನ್ಸ್‌, ಐಸಿಐಸಿಐ, ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌, ಅದಾನಿ ಗ್ರೂಪ್‌ನ ಕಂಪನಿಯ ಷೇರುಗಳು ಶೇ.12ರಿಂದ ಶೇ.16ರವರೆಗೆ ಭಾರೀ ಏರಿಕೆ ಕಂಡವು.