ಸಾರಾಂಶ
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ತಾವೇ ಟ್ವೀಟರ್ ಮೇಲೆ ಹೇರಿದ್ದ ನಿಷೇಧವನ್ನು ಉಲ್ಲಂಘಿಸಿರುವ ಪ್ರಧಾನಿ ಶಹಬಾಜ್ ಷರೀಫ್, ಟ್ವೀಟರ್ (ಎಕ್ಸ್) ಮೂಲಕ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಶುಭ ಹಾರೈಸಿದ್ದಾರೆ. ಷರೀಫ್‌ರ ಈ ನಡೆಯನ್ನು ಪಾಕಿಸ್ತಾನ ನಾಗರಿಕರು ಬೂಟಾಟಿಕೆ ಎಂದು ಟೀಕಿಸಿದ್ದಾರೆ.ಬಲೂಚಿಸ್ತಾನದಲ್ಲಿ ಉಗ್ರರು ಟ್ವೀಟರ್ ಮೂಲಕ ದೇಶವಿರೋಧಿ ಸಂದೇಶಗಳನ್ನು ಕಳಿಸಿ ಅಶಾಂತಿ ಸೃಷ್ಟಿಸುತ್ತಿದ್ದಾರೆ ಎಂದು ಟ್ವೀಟರ್ ಮೇಲೆ ನಿಷೇಧ ಹೇರಲಾಗಿತ್ತು.
ಆದರೆ ನಿಷೇಧ ಉಲ್ಲಂಘಿಸಿರುವ ಷರೀಫ್ ವಿಪಿಎನ್ (ವರ್ಚುವಲ್ ಪ್ರೈವೇಟ್ ನೆಟ್ವರ್ಕ್) ವಿಧಾನದ ಮೂಲಕ ಟ್ವೀಟರ್ ಸಂಪರ್ಕ ಪಡೆದಿದ್ದಾರೆ ಹಾಗೂ ‘2ನೇ ಬಾರಿ ಅಮೆರಿಕ ಅಧ್ಯಕ್ಷರಾದ ಟ್ರಂಪ್ ಅವರಿಗೆ ಶುಭಾಶಯ. ಪಾಕ್-ಅಮೆರಿಕ ಬಾಂಧವ್ಯ ಮತ್ತಷ್ಟು ಬಲಗೊಳಿಸೋಣ’ ಎಂದು ಟ್ವೀಟ್ ಮಾಡಿದ್ದಾರೆ.
ಸಾರ್ವಜನಿಕ ನೆಟ್‌ವರ್ಕ್‌ಗಳಲ್ಲಿ ಡೇಟಾವನ್ನು ಸುರಕ್ಷಿತವಾಗಿ ಮತ್ತು ಅನಾಮಧೇಯವಾಗಿ ರವಾನಿಸಲು ವಿಪಿಎನ್‌ಗಳನ್ನು ಬಳಸಲಾಗುತ್ತದೆ. ಇದರಲ್ಲಿ ಬಳಕೆದಾರರ ಹೆಸರು ಮರೆಮಾಚಲಾಗುತ್ತದೆ. ಹೀಗಾಗಿ ಸಂದೇಶದ ಮೂಲ ಪತ್ತೆ ಆಗುವುದಿಲ್ಲ.