ಇಂದು ಮಹಾ ಸಿಎಂ ಸಸ್ಪೆನ್ಸ್‌ ಅಂತ್ಯ

| Published : Dec 04 2024, 12:32 AM IST

ಇಂದು ಮಹಾ ಸಿಎಂ ಸಸ್ಪೆನ್ಸ್‌ ಅಂತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾರಾಷ್ಟ್ರದಲ್ಲಿ ’ಮಹಾಯುತಿ ಕೂಟ’ದಿಂದ ಹೊಸ ಸರ್ಕಾರ ರಚನೆಗೆ ಕಸರತ್ತು ಮುಂದುವರಿದಿದ್ದು, ಮಹತ್ವದ ಬುಧವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

ಮುಂಬೈ: ಮಹಾರಾಷ್ಟ್ರದಲ್ಲಿ ’ಮಹಾಯುತಿ ಕೂಟ’ದಿಂದ ಹೊಸ ಸರ್ಕಾರ ರಚನೆಗೆ ಕಸರತ್ತು ಮುಂದುವರಿದಿದ್ದು, ಮಹತ್ವದ ಬುಧವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ವೇಳೆ ನಾಯಕನ ಆಯ್ಕೆ ನಡೆಯಲಿದ್ದು, ಬಳಿಕ ಸಿಎಂ ಯಾರೆಂಬ ಘೋಷಣೆಯನ್ನು ಬಿಜೆಪಿ ಮಾಡಲಿದೆ.

ಮೂಲಗಳ ಪ್ರಕಾರ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ಮತ್ತೆ ಸಿಎಂ ಆಗವ ಸಾಧ್ಯತೆ ಹೆಚ್ಚಿದೆ. ಕುತೂಹಲದ ವಿಷಯವೆಂದರೆ, ನಿರ್ಗಮಿತ ಸಿಎಂ, ಶಿವಸೇನೆ ನಾಯಕ ಏಕನಾಥ ಶಿಂಧೆ ಅವರು ಡಿಸಿಎಂ ಆಗಲು ಒಪ್ಪಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇವರ ಜತೆಗೆ ಎನ್‌ಸಿಪಿಯ ಅಜಿತ್‌ ಪವಾರ್ ಕೂಡ ಡಿಸಿಎಂ ಪಟ್ಟ ಅಲಂಕರಿಸುವ ಸಂಭವವಿದೆ.

ಶಾಸಕಾಂಗ ನಾಯಕನ ಆಯ್ಕೆ ಆಗುತ್ತಿದ್ದಂತೆಯೇ ಬಿಜೆಪಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದೆ ಎಂದು ಮೂಲಗಳು ಹೇಳಿವೆ.

ಶಿಂಧೆ-ಫಡ್ನವೀಸ್‌ ಭೇಟಿ:

ಅನಾರೋಗ್ಯಕ್ಕೆ ತುತ್ತಾಗಿ ಸ್ವಂತ ಊರು ಥಾಣೆಗೆ ಮರಳಿದ್ದ ಶಿಂಧೆ ಮಂಗಳವಾರ ಮುಂಬೈಗೆ ಮರಳಿದ್ದಾರೆ. ಅವರ ‘ವರ್ಷಾ’ ನಿವಾಸಕ್ಕೆ ಬಂದ ಫಡ್ನವೀಸ್‌ ಅವರು ಶಿಂಧೆ ಜತೆ ಕೆಲ ಹೊತ್ತು ಮಾತುಕತೆ ನಡೆಸಿದರು. ಇದಕ್ಕೂ ಮುನ್ನ ಶಿಂಧೆ ಅವರು ಥಾಣೆ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಪ್ರಮಾಣ ವಚನಕ್ಕೆ ಸಿದ್ಧತೆ:

ಡಿ.5ಕ್ಕೆ ಹೊಸ ಸರ್ಕಾರದ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಮುಂಬೈನ ಅಜಾದ್‌ ಮೈದಾನದಲ್ಲಿ ಈಗಾಗಲೇ ಭರ್ಜರಿ ಸಿದ್ಧತೆ ಆರಂಭವಾಗಿದೆ.ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್‌ ಬವಂಕುಲೆ ದಕ್ಷಿಣ ಮುಂಬೈನಲ್ಲಿ ಅಜಾದ್‌ ಮೈದಾನಕ್ಕೆ ಆಗಮಿಸಿ ಸಿದ್ಧತೆಗಳ ಪರಿಶೀಲನೆ ನಡೆಸಿದರು.

ಇನ್ನು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ನಿರೀಕ್ಷೆಯಿದೆ. ಇದರ ಜೊತೆಗೆ ಕೇಂದ್ರ ಸಚಿವರು, ರಾಜ್ಯಪಾಲರು, ಹೈಕಮಾಂಡ್‌ ನಾಯಕರು, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಸಿಎಂ, ಡಿಸಿಎಂಗಳು ಕೂಡ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

==

ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ಶಿಂಧೆ ಅಸಮಾಧಾನ: ಅಠಾವಳೆ

ನವದೆಹಲಿ: ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಶಿವಸೇನೆ (ಶಿಂಧೆ ಬಣ) ಮುಖ್ಯಸ್ಥ ಏಕನಾಥ್‌ ಶಿಂಧೆ ಅಸಮಾಧಾನಗೊಂಡಿದ್ದಾರೆ ಎಂದು ಮಂಗಳವಾರ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.ಮಂಗಳವಾರ ಮಾತನಾಡಿದ ಅಠಾವಳೆ, ಕಳೆದ ಬಾರಿಯ ಶಿಂಧೆ ಅವರ ಸರ್ಕಾರದಲ್ಲಿ ದೇವೇಂದ್ರ ಫಡ್ನವೀಸ್‌ ಅವರು ಉಪಮುಖ್ಯಮಂತ್ರಿ ಸ್ಥಾನವನ್ನು ಸ್ವೀಕರಿಸಿದ್ದರು. ಅದೇ ರೀತಿ ಈಗ ಶಿಂಧೆ ಅವರು ಕೂಡ ಉಪಮುಖ್ಯಮಂತ್ರಿ ಸ್ಥಾನವನ್ನು ಸ್ವೀಕರಿಸಬೇಕು. ಒಂದು ವೇಳೆ ಈ ರೀತಿ ಮಾಡಲು ಸಿದ್ಧರಿಲ್ಲದಿದ್ದರೆ ಅವರು ಮಹಾಯುತಿ ಅಧ್ಯಕ್ಷರಾಗಿಯೋ ಅಥವಾ ಕೇಂದ್ರಕ್ಕೆ ಬರಬಹುದು ಎಂದು ಸಲಹೆ ನೀಡಿದರು.

==

ಬ್ಯಾಲೆಟ್‌ ಮೂಲಕ ಮರು ಮತದಾನಕ್ಕೆ ಮುಂದಾಗಿದ್ದ ಗ್ರಾಮಸ್ಥರಿಗೆ ಪೊಲೀಸರ ತಡೆಸೊಲ್ಲಾಪುರ: ಇಲ್ಲಿನ ಮಲ್‌ಶ್ರಿಯಾಸ್‌ ವಿಧಾನಸಭೆ ಕ್ಷೇತ್ರದ ಮರ್ಕರವಾಡಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ರಾಮ್‌ ಸಾತ್ಪುತೆಗೆ 843 ಮತ ಬಂದಿದ್ದಕ್ಕೆ ಅಚ್ಚರಿ ಪಟ್ಟ ಗ್ರಾಮಸ್ಥರು, ಇವಿಎಂ ಬಗ್ಗೆ ಸಂದೇಹಿಸಿ ಮಂಗಳವಾರ ಬ್ಯಾಲೆಟ್‌ ಪೇಪರ್‌ ಮೂಲಕ ಮರುಮತದಾನಕ್ಕೆ ಮುಂದಾಗಿದ್ದರು. ಇದಕ್ಕೆ ಪೊಲೀಸರು ತಡೆಯೊಡ್ಡಿದ್ದಾರೆ.ವಿಜೇತ ಅಭ್ಯರ್ಥಿ ಎನ್‌ಸಿಪಿ (ಎಸ್‌ಪಿ) ಉತ್ತಮ್‌ ಜಾನಕರ್‌ ಗ್ರಾಮಸ್ಥರೊಂದಿಗೆ ಮಾತಕತೆ ನಡೆಸಿದ ಬಳಿಕೆ ಅವರು ಮರು ಮತದಾನದ ಆಲೋಚನೆಯನ್ನು ಕೈಬಿಟ್ಟಿದ್ದಾರೆ.

ನ.20 ರಂದು ನಡೆದ ಚುನಾವಣೆಯಲ್ಲಿ ಮರ್ಕರವಾಡಿಯಲ್ಲಿ ಉತ್ತಮ್‌ ಜಾನಕರ್‌ಗೆ 1003 ವೋಟು ಹಾಗೂ ರಾಮ್‌ ಸಾತ್ಪುತೆಗೆ 843 ಮತ ಬಂದಿದ್ದವು. ಇದರಿಂದ ಗ್ರಾಮಸ್ಥರಿಗೆ ಅಚ್ಚರಿಯಾಗಿತ್ತು. 100 ರಿಂದ 150 ಮತ ಬಾರದವನಿಗೆ 843 ವೋಟ್‌ ಬಿದ್ದಿದ್ದು ಹೇಗೆ ಎಂದು ಇವಿಎಂ ಮೇಲೆ ಶಂಕಿಸಿ, ‘ಬ್ಯಾಲೆಟ್‌ ಪೇಪರ್‌ ಮೂಲಕ ಮರುಮತದಾನಕ್ಕೆ ಅವಕಾಶ ಕೊಡಿ, ಆತನಿಗೆ 100 ಮತಗಳೂ ಬೀಳುವುದಿಲ್ಲ ಎಂಬುದನ್ನು ಸಾಬೀತು ಮಾಡುತ್ತೇವೆ’ ಎಂದು ಪಟ್ಟು ಹಿಡಿದಿದ್ದರು.