ಸಾರಾಂಶ
ಮುಜಫ್ಫರ್‌ನಗರ (ಉತ್ತರ ಪ್ರದೇಶ) : 32 ವರ್ಷಗಳ ಹಿಂದೆ ಅಯೋಧ್ಯೆ ದಾಳಿ ವೇಳೆ ಮುಚ್ಚಲ್ಪಟ್ಟಿದ್ದ ಉತ್ತರಪ್ರದೇಶದ ಶಿವ ದೇವಾಲಯವೊಂದರ ಬಾಗಿಲನ್ನು ಸೋಮವಾರ ಪುನಃ ತೆಗೆಯಲಾಗಿದೆ. ಈ ವೇಳೆ ನಡೆದ ಮೆರವಣಿಗೆ ಮೇಲೆ ಮುಸ್ಲಿಮರು ಪುಷ್ಪವೃಷ್ಟಿ ಸುರಿಸಿ ಕೋಮು ಸೌಹಾರ್ದತೆ ಮೆರೆದಿದ್ದಾರೆ.
1992ರಲ್ಲಿ ನಡೆದ ಅಯೋಧ್ಯೆ ಬಾಬ್ರಿ ಮಸೀದಿ ಧ್ವಂಸದ ವೇಳೆ ಉತ್ತರ ಪ್ರದೇಶದ ಲುಧಾವಾಲಾ ಎಂಬಲ್ಲಿ ಕೋಮುಗಲಭೆ ಉಂಟಾಗಿತ್ತು. ಆ ವೇಳೆ ಮುಸ್ಲಿಮರು ಹೆಚ್ಚಿರುವ ಪ್ರದೇಶದಲ್ಲಿದ್ದ ಶಿವ ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದ ಕುಟುಂಬವು ವಿಗ್ರಹ, ಶಿವನ ಲಿಂಗವನ್ನು ತೆಗೆದುಕೊಂಡು ವಲಸೆ ಹೊರಟಿತ್ತು. ಬಳಿಕ ದೇಗುಲ ಪೂಜೆ ಕಾಣದೆ ಪಾಳುಬಿದ್ದಿತ್ತು.
ಆದರೆ ಜಿಲ್ಲಾಡಳಿತದ ಶ್ರಮದಿಂದಾಗಿ ಮತ್ತೆ ದೇಗುಲಕ್ಕೆ ಜೀವಕಳೆ ಬಂದಿದ್ದು ದೇವರನ್ನು ಮರು ಪ್ರತಿಷ್ಠಾಪಿಸಲಾಗಿದೆ. ಸೋಮವಾರ ಸ್ವಾಮಿ ಯಶವೀರ್ ಮಹಾರಾಜ್ ಅವರ ನೇತೃತ್ವದಲ್ಲಿ ದೇಗುಲ ಶುದ್ಧೀಕರಣ, ಹೋಮ ಹವನ, ಪೂಜಾ ಕೈಂಕರ್ಯ ನಡೆದವು. ಈ ವೇಳೆ ಮುಸ್ಲಿಮರು ಹಿಂದೂಗಳು ನಡೆಸಿದ ಮೆರವಣಿಗೆ ಮೇಲೆ ಪುಷ್ಪ ಸುರಿಸಿ ಆನಂದದಿಂದ ಸ್ವಾಗತಿಸಿದರು.