ಮಿಥುನ್‌ ಚಕ್ರವರ್ತಿ ರೋಡ್ ಶೋ ಮೇಲೆ ಬೂಟು ಎಸೆತ

| Published : May 22 2024, 12:46 AM IST

ಸಾರಾಂಶ

ಬಿಜೆಪಿ ನಾಯಕ ಮಿಥುನ್‌ ಚಕ್ರವರ್ತಿ ನಡೆಸುತ್ತಿದ್ದ ರೋಡ್ ಶೋ ಮೇಲೆ ಬೂಟು ಎಸೆತ ನಡೆದಿದ್ದು, ಅದೃಷ್ಟವಶಾತ್‌ ಮಿಥುನ್, ಅಭ್ಯರ್ಥಿ ಅಗ್ನಿಮಿತ್ರ ಪೌಲ್‌ ಅಪಾಯದಿಂದ ಪಾರಾಗಿದ್ದಾರೆ.

ಕೋಲ್ಕತಾ: ಮತದಾನಕ್ಕೆ ನಾಲ್ಕೇ ದಿನಗಳಿರುವಾಗ ಪಶ್ಚಿಮ ಬಂಗಾಳದ ಮೇದಿನೀಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಗ್ನಿಮಿತ್ರ ಪೌಲ್‌ ಹಾಗೂ ಹಿರಿಯ ನಾಯಕ ಹಾಗೂ ನಟ ಮಿಥುನ್‌ ಚಕ್ರವರ್ತಿ ಪಾಲ್ಗೊಂಡಿದ್ದ ರೋಡ್‌ಶೋ ಮೇಲೆ ದುಷ್ಕರ್ಮಿಗಳು ಇಟ್ಟಿಗೆ ಎಸೆದು ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಬಿಜೆಪಿ ಅಭ್ಯರ್ಥಿ, ನಟಿ ಅಗ್ನಿಮಿತ್ರ ಪೌಲ್‌ ಮತ್ತು ಮಿಥುನ್‌ ಚಕ್ರವರ್ತಿ ಅಪಾಯದಿಂದ ಪಾರಾಗಿದ್ದಾರೆ.

ರೋಡ್‌ಶೋ ನಡೆಯುತ್ತಿರುವಾಗ ಕೆಲವು ಮಂದಿ ಬಿಜೆಪಿ ಕಾರ್ಯಕರ್ತರ ಮೇಲೆ ಇಟ್ಟಿಗೆ, ನೀರಿನ ಬಾಟಲ್‌ ಹಾಗೂ ಶೂ ಎಸೆಯಲಾರಂಭಿಸಿದರು. ಬಳಿಕ ಬಿಜೆಪಿ ಕಾರ್ಯಕರ್ತರು ಹಾಗೂ ಎಸೆದವರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಉದ್ವಿಗ್ನವಾಯಿತು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ನಡುವೆ ಬಿಜೆಪಿಗರು ದಾಳಿ ಮಾಡಿದ್ದು, ಟಿಎಂಸಿ ಕಾರ್ಯಕರ್ತರು ಎಂಬುದಾಗಿ ಆರೋಪಿಸಿದ್ದಾರೆ.

ಮೇದಿನೀಪುರದಲ್ಲಿ ಮೇ 25ರಂದು ಮತದಾನ ನಡೆಯಲಿದ್ದು, ಬಿಜೆಪಿಯಿಂದ ನಟಿ ಅಗ್ನಿಮಿತ್ರ ಪೌಲ್‌, ಟಿಎಂಸಿಯಿಂದ ನಟಿ ಜೂನ್‌ ಮಾಲಿಯಾ ಹಾಗೂ ಸಿಪಿಐನ ಬಿಪ್ಲಬ್‌ ದತ್ತ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.