ಸಾರಾಂಶ
ನವದೆಹಲಿ: ಖ್ಯಾತ ಬಹುಭಾಷಾ ಗಾಯಕಿ ಶ್ರೇಯಾ ಘೋಷಾಲ್ ಅವರ ಎಕ್ಸ್ (ಟ್ವೀಟರ್) ಖಾತೆ ಹ್ಯಾಕ್ ಆಗಿದ್ದು, ಅದರಿಂದ ಬರುವ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದ ಅವರು ‘ಫೆ.13ರಿಂದಲೂ ತನ್ನ ಖಾತೆ ಹ್ಯಾಕ್ ಆಗಿಯೇ ಇದೆ. ನಾನು ಎಕ್ಸ್ ಟೀಂ ಅನ್ನು ಸಂಪರ್ಕಿಸಲು ಎಲ್ಲ ರೀತಿಯ ಪ್ರಯತ್ನ ಮಾಡಿದ್ದೇನೆ. ಆದರೆ ಕೆಲವು ಆಟೋ ಜನರೇಟೆಡ್ ಮೆಸೇಜ್‌ಗಳ ಹೊರತಾಗಿ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಖಾತೆಯನ್ನು ಡಿಲಿಟ್ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಯಾರೂ ಲಿಂಕ್, ಮೆಸೇಜ್‌ಗಳನ್ನು ನಂಬಿ ಮೋಸ ಹೋಗಬೇಡಿ’ ಎಂದು ತಿಳಿಸಿದ್ದಾರೆ.
ತಿರುಮಲ: ₹44 ಲಕ್ಷ ನೀಡಿದರೆ 1 ದಿನದ ಅನ್ನಪ್ರಸಾದ ಸೇವೆ
ತಿರುಮಲ: ಇಲ್ಲಿನ ವೆಂಕಟೇಶ್ವರ ದೇಗುಲದಲ್ಲಿ ಒಂದು ದಿನಕ್ಕೆ ಅನ್ನದಾನ ಮಾಡಲು ಇಚ್ಛಿಸುವ ಭಕ್ತರಿಗೆ ಟಿಟಿಡಿ ಅವಕಾಶ ಮಾಡಿಕೊಟ್ಟಿದೆ. 44 ಲಕ್ಷ ರು. ಪಾವತಿ ಮಾಡಿದರೆ, ಒಂದು ದಿನ ಅನ್ನದಾನ ಸೇವೆ ಮಾಡಬಹುದಾಗಿದೆ.ಬೆಳಗ್ಗಿನ ತಿಂಡಿಗೆ 10 ಲಕ್ಷ ರು., ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ತಲಾ 17 ಲಕ್ಷ ರು., ಸೇರಿ 44 ಲಕ್ಷ ರು., ಪಾವತಿಸಿದರೆ ಒಂದು ದಿನಕ್ಕೆ ಅವಕಾಶ ದೊರೆಯಲಿದೆ. ಈ ವೇಳೆ ಅನ್ನದಾನದ ದಿನ ದಾನಿಗಳೇ ಖುದ್ದು ಪ್ರಸಾದ ವಿತರಿಸಬಹುದಾಗಿದೆ. ಜೊತೆಗೆ ದಾನಿಗಳ ಹೆಸರನ್ನು ಸಹ ಪ್ರಕಟಿಸಲಾಗುತ್ತದೆ ಎಂದು ಟಿಟಿಡಿ ಪ್ರಕಟಣೆ ತಿಳಿಸಿದೆ.
ಫೆಬ್ರವರಿಯಲ್ಲಿ 1.84 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹ
ನವದೆಹಲಿ: ಫೆಬ್ರವರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಶೇ.9.1ರಷ್ಟು ಹೆಚ್ಚಾಗಿದ್ದು, ಸುಮಾರು 1.84 ಲಕ್ಷ ಕೋಟಿ ರು.ಗೆ ಸಂಗ್ರಹವಾಗಿದೆ.
ದೇಶೀಯ ವಹಿವಾಟು ಮೇಲಿನ ಜಿಎಸ್‌ಟಿ ಸಂಗ್ರಹದಲ್ಲಿ ಶೇ.10.2ರಷ್ಟು ಏರಿಕೆಯಾಗಿ, 1.42 ಲಕ್ಷ ಕೋಟಿ ರು.ಗಳಿಗೆ ತಲುಪಿದೆ. ಆಮದು ಸರಕುಗಳ ಮೇಲಿನ ಸಂಗ್ರಹದಲ್ಲಿ ಶೇ.5.4ರಷ್ಟು ಏರಿಕೆಯಾಗಿದ್ದು, 41,702 ಕೋಟಿ ರು. ತಲುಪಿದೆ. ಒಟ್ಟು 20,889 ಕೋಟಿ ರು. ಮರುಪಾವತಿ ಮಾಡಲಾಗಿದೆ.2024ರ ಫೆಬ್ರವರಿಯಲ್ಲಿ 1.68 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿತ್ತು.
ಶ್ರೀಶೈಲ ಸುರಂಗ ಕುಸಿತ: ಸಿಲುಕಿದ 8ರಲ್ಲಿ ನಾಲ್ವರ ಪತ್ತೆ
ಹೈದರಾಬಾದ್: ತೆಲಂಗಾಣದ ನಾರಗಕರ್ನೂಲ್ ಜಿಲ್ಲೆಯಲ್ಲಿ ಶ್ರೀಶೈಲ ಕಾಲುವೆ ಎಡದಂಡೆ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಒಟ್ಟು 8 ಜನರ ಪೈಕಿ ನಾಲ್ವರು ಎಲ್ಲಿದ್ದಾರೆ ಎಂಬುದನ್ನು ಪತ್ತೆಹಚ್ಚಲಾಗಿದೆ. ಭಾನುವಾರ ಅವರನ್ನು ಹೊರತರುವ ಸಂಭವವಿದೆ ಎಂದು ರಾಜ್ಯ ಅಬಕಾರಿ ಸಚಿವ ಜೂಪಲ್ಲಿ ಕೃಷ್ಣ ರಾವ್ ಹೇಳಿದ್ದಾರೆ.ಶನಿವಾರ ಮಾತನಾಡಿದ ಅವರು, ‘ರಾಡಾರ್ ಮೂಲಕ ನಾಲ್ವರ ಪತ್ತೆಯಾಗಿದ್ದಾರೆ. ಆದರೆ ಅವರು ಜೀವಂತವಾಗಿರುವ ಸಾಧ್ಯತೆ ಕಡಿಮೆದೆ. ಉಳಿದ ನಾಲ್ವರು ಸುರಂಗ ಕೊರೆಯುವ ಯಂತ್ರದ (ಟಿಬಿಎಂ) ಕೆಳಗೆ ಸಿಲುಕಿಕೊಂಡಿರುವ ಸಾಧ್ಯತೆಯಿದೆ’ ಎಂದು ತಿಳಿಸಿದರು.
‘ಸುಮಾರು 11 ಏಜೆನ್ಸಿಗಳ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಕಳೆದ 2 ದಿನಗಳಿಂದ ಕಾರ್ಯದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಭಾನುವಾರ ಸಂಜೆಯೊಳಗೆ ಅವರನ್ನು ಹೊರತರಲಾಗುವುದು’ ಎಂದು ಭರವಸೆ ವ್ಯಕ್ತಪಡಿಸಿದರು.ಈ ನಡುವೆ, ರಾವ್ ಅವರು ನೀರಾವರಿ ಸಚಿವ ಎನ್. ಉತ್ತಮ್ ಕುಮಾರ್ ರೆಡ್ಡಿ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳ ಜತೆ ಸಭೆ ನಡೆಸಿದರು.
19 ಕೇಜಿ ವಾಣಿಜ್ಯ ಸಿಲಿಂಡರ್ ಬೆಲೆ 6 ರು. ಏರಿಕೆ
ನವದೆಹಲಿ: ಮಾ.1ರ ಶನಿವಾರದಿಂದ ಹೋಟೆಲ್‌ಗಳು ಹೆಚ್ಚಾಗಿ ಬಳಸುವ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 6 ರು.ನಷ್ಟು ಹೆಚ್ಚಿಸಲಾಗಿದೆ. ಇದರಿಂದ ಬೆಲೆ 1,797 ರು.ಗಳಿಂದ 1,803 ರು.ಗೆ ಏರಿದೆ. ಆದಾಗ್ಯೂ, 14.2 ಕೆಜಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಬದಲಾಗಿಲ್ಲ.