ಮಹಾರಾಷ್ಟ್ರ ಸಿಎಂ ಘೋಷಣೆ ಆಗಬಹುದು ಎಂಬ ನಿರೀಕ್ಷೆಗಳು ಹುಸಿ : ಇನ್ನೂ ಸಸ್ಪೆನ್ಸ್‌

| Published : Dec 03 2024, 12:33 AM IST / Updated: Dec 03 2024, 06:52 AM IST

ಸಾರಾಂಶ

ಮಹಾರಾಷ್ಟ್ರ ಸಿಎಂ ಘೋಷಣೆ ಸೋಮವಾರ ಆಗಬಹುದು ಎಂಬ ನಿರೀಕ್ಷೆಗಳು ಹುಸಿಯಾಗಿದ್ದು, ಸಸ್ಪೆನ್ಸ್‌ ಮುಂದುವರಿದಿದೆ. ಬುಧವಾರ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದ್ದು, ಆ ಬಳಿಕ ಮುಖ್ಯಮಂತ್ರಿ ಯಾರೆಂಬ ಘೋಷಣೆ ಆಗಲಿದೆ ಎಂದು ಪಕ್ಷದ ಉನ್ನತ ನಾಯಕರು ಹೇಳಿದ್ದಾರೆ.

 ಮುಂಬೈ :  ಮಹಾರಾಷ್ಟ್ರ ಸಿಎಂ ಘೋಷಣೆ ಸೋಮವಾರ ಆಗಬಹುದು ಎಂಬ ನಿರೀಕ್ಷೆಗಳು ಹುಸಿಯಾಗಿದ್ದು, ಸಸ್ಪೆನ್ಸ್‌ ಮುಂದುವರಿದಿದೆ. ಬುಧವಾರ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದ್ದು, ಆ ಬಳಿಕ ಮುಖ್ಯಮಂತ್ರಿ ಯಾರೆಂಬ ಘೋಷಣೆ ಆಗಲಿದೆ ಎಂದು ಪಕ್ಷದ ಉನ್ನತ ನಾಯಕರು ಹೇಳಿದ್ದಾರೆ.

ಸೋಮವಾರ ನಿರ್ಗಮಿತ ಸಿಎಂ, ಶಿವಸೇನೆ ನಾಯಕ ಏಕನಾಥ ಶಿಂಧೆ, ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಹಾಗೂ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್‌ ನಡುವೆ ಸಭೆ ನಡೆಯಬೇಕಿತ್ತು. ಆದರೆ ಶಿಂಧೆ ಅನಾರೋಗ್ಯದ ನಿಮಿತ್ತ ಅವರ ಥಾಣೆ ನಿವಾಸದಲ್ಲೇ ಉಳಿದುಕೊಂಡರು. ಅಲ್ಲದೆ, ಸಂಪುಟದ ಬಗ್ಗೆ ಕೇಂದ್ರ ಬಿಜೆಪಿ ವರಿಷ್ಠರ ಜತೆ ಚರ್ಚೆಗೆ ಅಜಿತ್‌ ಪವಾರ್‌ ದಿಲ್ಲಿಗೆ ತೆರಳಿದರು. ಹೀಗಾಗಿ ಮುಖ್ಯ ಸಭೆ ನಡೆಯಲಿಲ್ಲ. ಆದರೂ ರಾತ್ರಿ ವಿಡಿಯೋ ಕಾಲ್‌ನಲ್ಲಿ ಮೂವರೂ ಮಾತಾಡಿಕೊಂಡರು ಎಂದು ಮೂಲಗಳು ಹೇಳಿವೆ. ಇದಕ್ಕೂ ಮುನ್ನ ಶಿಂಧೆ ಫಡ್ನವೀಸ್ ಕರೆ ಮಾಡಿ ವೈಯಕ್ತಿಕವಾಗಿ ಆರೋಗ್ಯ ವಿಚಾರಿಸಿದ್ದರು.

ಮೂಲಗಳ ಪ್ರಕಾರ ಶಿವಸೇನೆಗೆ ಗೃಹ ಸಚಿವ ಹುದ್ದೆ ಬೇಕು ಎಂದು ಶಿಂಧೆ ಪಟ್ಟು ಹಿಡಿದಿದ್ದಾರೆ. ಈ ಹುದ್ದೆ ಮೇಲೆ ಬಿಜೆಪಿ, ಎನ್‌ಸಿಪಿ ಕಣ್ಣೂ ಇದೆ. ಇದು ಬಿಕ್ಕಟ್ಟಿಗೆ ಕಾರಣವಾಗಿದೆ.

ವೀಕ್ಷಕರ ನೇಮಕ:

ಈ ನಡುವೆ ಬುಧವಾರ ಬಿಜೆಪಿ ಶಾಸಕಾಂಗ ಸಭೆ ನಿಗದಿಯಾಗಿದ್ದು, ಕೇಂದ್ರೀಯ ವೀಕ್ಷಕರಾಗಿ ನಿರ್ಮಲಾ ಸೀತಾರಾಮನ್‌, ವಿಜಯ ರೂಪಾನಿ ನೇಮಕಗೊಂಡಿದ್ದಾರೆ.

ಬುಧವಾರವೇ ಸಿಎಂ ಘೋಷಣೆ:

ಏತನ್ಮಧ್ಯೆ ಉನ್ನತ ಬಿಜೆಪಿ ನಾಯಕರೊಬ್ಬರು ಮಾತನಾಡಿ, ‘ಬುಧವಾರ ಶಾಸಕಾಂಗ ಸಭೆ ನಂತರವೇ ಸಿಎಂ ಹೆಸರು ಘೋಷಣೆ ಆಗಲಿದೆ’ ಎಂದಿದ್ದಾರೆ. ಸಿಎಂ ಹುದ್ದೆಗೆ ಫಡ್ನವೀಸ್‌ ಮುಂಚೂಣಿಯಲ್ಲಿದ್ದಾರೆ.

ಡಿಸಿಎಂ ಹುದ್ದೆ ಮೇಲೆ ಕಣ್ಣಿಲ್ಲ- ಶಿಂಧೆ ಪುತ್ರ:

ಶಿಂಧೆ ಪುತ್ರ ಶ್ರೀಕಾಂತ ಶಿಂಧೆ ಮಾತನಾಡಿ, ‘ನಾನು ಡಿಸಿಎಂ ಹುದ್ದೆ ಕೇಳಿಲ್ಲ. ಅದರ ಆಸೆಯೂ ನನಗಿಲ್ಲ. ನನಗೆ ಪಕ್ಷದ ಸಂಘಟನೆ ಮಾತ್ರ ಮುಖ್ಯ’ ಎಂದಿದ್ದಾರೆ.

ರಾಜಕೀಯ ಎಂಬುದು ಅತೃಪ್ತ ಆತ್ಮಗಳ ಸಮುದ್ರ: ಗಡ್ಕರಿ

ನಾಗ್ಪುರ: ‘ರಾಜಕೀಯ ಎಂಬುದು ಅತೃಪ್ತ ಆತ್ಮಗಳಿರುವ ಸಮುದ್ರವಿದ್ದಂತೆ. ರಾಜಕಾರಣಿಗಳು ಯಾವತ್ತೂ ತಾವು ಇರುವ ಸ್ಥಾನಮಾನದ ಬಗ್ಗೆ ತೃಪ್ತಿ ಪಡಲ್ಲ. ಅವರಿಗೂ ಇನ್ನೂ ಉನ್ನತ ಪದವಿಗೆ ಏರಲು ಹಾತೊರೆಯುತ್ತಿರುತ್ತಾರೆ’ ಎಂದು ಸೋಮವಾರ ಕೇಂದ್ರ ಸಚಿವ ನಿತಿನ್‌ ಗಡ್ಕರಿ ವ್ಯಾಖ್ಯಾನಿಸಿದ್ದಾರೆ.ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಗಡ್ಕರಿ, ’ಪುರಸಭೆ ಸದಸ್ಯನಾದವನು ತನಗೆ ಶಾಸಕನಾಗುವ ಅವಕಾಶ ಸಿಗಲಿಲ್ಲ ಎಂದು ದುಃಖಿಸಿದರೆ, ಶಾಸಕನಾದವನು ತನಗೆ ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ದುಃಖಿಸುತ್ತಾನೆ. ಮಂತ್ರಿ ಆದವನು ಒಳ್ಳೆಯ ಇಲಾಖೆ ಸಿಗಲಿಲ್ಲ ಎಂದು ಬೇಸರ ವ್ಯಕ್ತ ಪಡಿಸುತ್ತಾನೆ. ಈ ರೀತಿ ರಾಜಕಾರಣಿಗಳು ಉನ್ನತ ಸ್ಥಾನಕ್ಕೆ ಏರಲು ಹಾತೊರೆಯುತ್ತಾರೆ’ ಎಂದು ಎಂದರು,