ಸಾರಾಂಶ
ನವದೆಹಲಿ: ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ತೆರಳಿ ಐತಿಹಾಸಿಕ ಯಾನ ಮುಗಿಸಿ ಭೂಮಿಗೆ ಹಿಂದಿರುಗಿದ್ದ ಗಗನಯಾತ್ರಿ ಶುಭಾಂಶು ಶುಕ್ಲಾ, ಭಾನುವಾರ ತಾಯ್ನಾಡು ಭಾರತಕ್ಕೆ ಆಗಮಿಸಿದರು.
ಭಾನುವಾರ ಮುಂಜಾನೆ ಅಮೆರಿಕದಿಂದ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹಾಗೂ ಇಸ್ರೋ ಮುಖ್ಯಸ್ಥ ವಿ. ನಾರಾಯಣ್ ಆತ್ಮೀಯವಾಗಿ ಬರಮಾಡಿಕೊಂಡರು. ಪತ್ನಿ ಕಾಮ್ನಾ ಹಾಗೂ ಪುತ್ರ ಕಿಯಾಶ್ ಸುಮಾರು ಒಂದು ವರ್ಷದ ಬಳಿಕ ಶುಕ್ಲಾರನ್ನು ಕಂಡು ಸಂಭ್ರಮಪಟ್ಟರು. ಬಹುದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಭಾರತೀಯರು ತಿರಂಗಾ ಹಾರಿಸಿ, ಡ್ರಂಗಳನ್ನು ಬಾರಿಸಿ ಭವ್ಯ ಸ್ವಾಗತ ಕೋರಿದರು.
ಮೋದಿ ಭೇಟಿ:
ಶುಕ್ಲಾ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಆ ಬಳಿಕ ತಮ್ಮ ಹುಟ್ಟೂರು ಉತ್ತರ ಪ್ರದೇಶದ ಲಖನೌಗೆ ತೆರಳಲಿದ್ದಾರೆ. ಆ.22-23ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನದ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಸೋಮವಾರ ಲೋಕಸಭಾ ಕಲಾಪದಲ್ಲಿ ಶುಕ್ಲಾ ಅವರ ಸಾಧನೆ ಕುರಿತು ಮಾತನಾಡುವ ನಿರೀಕ್ಷೆ ಇದೆ.
ಆಕ್ಸಿಯೋಂ-4 ಮಿಷನ್ ಭಾಗವಾಗಿ ಜೂ.25ರಿಂದ ಜು.15ರವರೆಗೆ ಐಎಸ್‌ಎಸ್‌ನಲ್ಲಿ ಕಳೆದಿದ್ದ ಶುಕ್ಲಾ, ಹಲವು ಯಶಸ್ವಿ ಪ್ರಯೋಗಗಳನ್ನು ನಡೆಸಿ ಭೂಮಿಗೆ ಹಿಂದಿರುಗಿದ್ದಾರೆ. ರಾಕೇಶ್ ಶರ್ಮಾ ಬಳಿಕ, ಬಾಹ್ಯಾಕಾಶಕ್ಕೆ ತೆರಳಿದ 2ನೇ ಭಾರತೀಯ ಎಂಬ ಇತಿಹಾಸ ಬರೆದಿದ್ದಾರೆ.