ಸಾರಾಂಶ
ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗೆ ಹೋದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಬೆಂಗಳೂರಿನಲ್ಲಿರುವ ಯು.ಆರ್. ರಾವ್ ಉಪಗ್ರಹ ಕೇಂದ್ರ (ಯುಆರ್‌ಸಿಎಸ್) ಜತೆ ಹ್ಯಾಮ್ ರೇಡಿಯೋ ಮೂಲಕ ಸಂಪರ್ಕ ಸಾಧಿಸಿ ಮಾತನಾಡಲಿದ್ದಾರೆ.
ನವದೆಹಲಿ: ಬಾಹ್ಯಾಕಾಶಕ್ಕೆ ನೆಗೆದ 2ನೆಯ ಹಾಗೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗೆ ಹೋದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಬೆಂಗಳೂರಿನಲ್ಲಿರುವ ಯು.ಆರ್. ರಾವ್ ಉಪಗ್ರಹ ಕೇಂದ್ರ (ಯುಆರ್‌ಸಿಎಸ್) ಜತೆ ಹ್ಯಾಮ್ ರೇಡಿಯೋ ಮೂಲಕ ಸಂಪರ್ಕ ಸಾಧಿಸಿ ಮಾತನಾಡಲಿದ್ದಾರೆ.
ನಾಸಾದ ಆಕ್ಸಿಯೋಂ-4 ಮಿಷನ್‌ನ ಭಾಗವಾಗಿ ಐಎಸ್‌ಎಸ್‌ಗೆ ಹೋಗಿರುವ ಶುಕ್ಲಾರ ಜು.4ರಂದು ಮಧ್ಯಾಹ್ನ 3:47ಕ್ಕೆ ಹ್ಯಾಮ್ ರೇಡಿಯೋ ಮೂಲಕ ಮಾತನಾಡಲಿದ್ದು, ಇದನ್ನು ದೇಶಾದ್ಯಂತವಿರುವ ಶಾಲಾ ಮಕ್ಕಳು ಕೇಳಿಸಿಕೊಳ್ಳುವ ವ್ಯವಸ್ಥೆಯನ್ನು ಇಸ್ರೋ ಮಾಡಲಿದೆ.
ಈ ಮೂಲಕ, ಮಕ್ಕಳು ಮತ್ತು ವಿಜ್ಞಾನಾಸಕ್ತರು ಭೂಮಿಯಿಂದ ನೇರವಾಗಿ ಬಾಹ್ಯಾಕಾಶದಲ್ಲಿರುವ ವ್ಯಕ್ತಿಯೊಂದಿಗೆ ಮಾತನಾಡಬಹುದು ಹಾಗೂ ಅಲ್ಲಿನ ಜೀವನ, ಪ್ರಯೋಗಗಳು ಇತ್ಯಾದಿಗಳ ಬಗ್ಗೆ ಸಂವಾದ ನಡೆಸಬಹುದು. ಸಾಮಾನ್ಯವಾಗಿ ಐಎಸ್‌ಎಸ್‌ನಲ್ಲಿರುವ ಗಗನಯಾತ್ರಿಗಳು ಹ್ಯಾಮ್ ರೇಡಿಯೋ ಬಳಸಿ ವಿದ್ಯಾರ್ಥಿಗಳು ಮತ್ತು ರೇಡಿಯೋ ಕ್ಲಬ್‌ಗಳ ಜತೆ ಮಾತುಕತೆ ನಡೆಸುತ್ತಿದ್ದಾರೆ. ಈ ಸಾಹಸಕ್ಕೀಗ ಶುಕ್ಲಾ ಮುಂದಾಗಿದ್ದಾರೆ.
ಏನಿದು ಹ್ಯಾಮ್ ರೇಡಿಯೋ?:
ಇಂಟರ್‌ನೆಟ್ ಅಥವಾ ನೆಟ್‌ವರ್ಕ್ ಬದಲು ಹ್ಯಾಮ್ ರೇಡಿಯೋ ಫ್ರೀಕ್ವೆನ್ಸಿಗಳನ್ನು ಬಳಸಿ ಕೆಲಸ ಮಾಡುತ್ತದೆ. ಇದನ್ನು ಸಾಮಾನ್ಯವಾಗಿ ತುರ್ತು ಸಂದರ್ಭಗಳಲ್ಲಿ, ನೆಟ್‌ವರ್ಕ್ ಇರದ ಜಾಗಗಳಲ್ಲಿ ಬಳಸಲಾಗುತ್ತದೆ. ಇದನ್ನು ಬಳಸಲು ಲೈಸೆನ್ಸ್ ಹೊಂದಿರುವುದು ಕಡ್ಡಾಯ.