ಸಾರಾಂಶ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಜು.10 ರಂದು ದೆಹಲಿಯಲ್ಲಿ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಸುರ್ಜೇವಾಲಾ ಅವರು ಒಟ್ಟು ಆರು ದಿನಗಳ ಕಾಲ ರಾಜ್ಯದ ನೂರಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಶಾಸಕರ ದೂರು- ದುಮ್ಮಾನ ಆಲಿಸಿದ ಬಳಿಕ ದೆಹಲಿಯಲ್ಲಿ ಈ ಸಭೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಭೆ ಬಗ್ಗೆ ಕುತೂಹಲ ಕೆರಳಿದೆ.
ರಾಜ್ಯದ 7-8 ನಿಗಮ-ಮಂಡಳಿಗಳ ಅಧ್ಯಕ್ಷರು ಹಾಗೂ ಸದಸ್ಯರ ಹುದ್ದೆಗಳ ನೇಮಕದ ನೆಪದಲ್ಲಿ ಮೂರೂ ಪ್ರಮುಖ ನಾಯಕರು ಸಭೆ ಸೇರಲಿದ್ದಾರೆ. ಈ ವೇಳೆ ನಿಗಮ-ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರ ನೇಮಕದ ಜತೆಗೆ ಇತರೆ ಪಕ್ಷ ಸಂಘಟನೆ ಮತ್ತು ಸರ್ಕಾರದ ಆಡಳಿತ ವೈಖರಿ ಕುರಿತು ಸಹ ಚರ್ಚೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಆದರೆ, ಸುರ್ಜೇವಾಲಾ ಅವರು ಜು.7ರಂದು ಸೋಮವಾರದಿಂದ ಬುಧವಾರದವರೆಗೆ ಕೆಪಿಸಿಸಿ ಕಚೇರಿಯಲ್ಲಿ 61 ಮಂದಿ ಶಾಸಕರೊಂದಿಗೆ ಸಭೆ ನಡೆಸುತ್ತಿದ್ದಾರೆ. ಇದಕ್ಕೂ ಹಿಂದಿನ ವಾರ 42 ಮಂದಿ ಶಾಸಕರೊಂದಿಗೆ ಸಭೆ ನಡೆಸಿದ್ದರು. ಒಟ್ಟು 103 ಮಂದಿ ಶಾಸಕರ ಕ್ಷೇತ್ರದ ಸಮಸ್ಯೆ, ಸಚಿವರ ಅಸಹಕಾರ ಹಾಗೂ ಸರ್ಕಾರದಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಲಿಖಿತ ವರದಿ ಸಿದ್ಧಪಡಿಸಿಕೊಳ್ಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ದೆಹಲಿ ಸಭೆ ಮಹತ್ವ ಪಡೆದುಕೊಂಡಿದೆ. ದೆಹಲಿಯಲ್ಲಿ ಭೇಟಿಯಾಗಲಿರುವ ಕಾರಣಕ್ಕಾಗಿಯೇ ಮಂಗಳವಾರ ಬೆಂಗಳೂರಿನಲ್ಲಿ ಸುರ್ಜೇವಾಲಾ ಅವರನ್ನು ಭೇಟಿ ಮಾಡಬೇಕಾಗಿದ್ದ ಸಿದ್ದರಾಮಯ್ಯ ಅವರು ಭೇಟಿ ಮಾಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಸುರ್ಜೇವಾಲಾ ಅವರ ಎರಡನೇ ಹಂತದ ಅಹವಾಲು ಆಲಿಕೆ ಕಾರ್ಯಕ್ರಮ ಆರಂಭ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಶಾಸಕರ ಅಸಮಾಧಾನ ಶಮನಗೊಳಿಸುವ ಪ್ರಯತ್ನವಾಗಿ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಎರಡನೇ ಹಂತದ ಅಹವಾಲು ಆಲಿಕೆ ಕಾರ್ಯಕ್ರಮ ಆರಂಭಿಸಿದ್ದು, ಸೋಮವಾರ 20ಕ್ಕೂ ಹೆಚ್ಚು ಮಂದಿ ಶಾಸಕರು ತಮ್ಮ ದೂರು ಹಾಗೂ ಅಹವಾಲು ಸಲ್ಲಿಸಿದ್ದಾರೆ.ಇಂದು ಡಿಸಿಎಂ, ನಾಳೆ ಸಿಎಂ ದಿಲ್ಲಿಗೆ
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಜಲಶಕ್ತಿ ಸಚಿವರ ಭೇಟಿಗಾಗಿ ಮಂಗಳವಾರ ದೆಹಲಿಗೆ ತೆರಳಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಅವರನ್ನು ಭೇಟಿ ಆಗಲು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರರಾಜಧಾನಿಗೆ ಪ್ರಯಾಣ ಬೆಳೆಸಲಿದ್ದಾರೆ.