ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ತಾರೆಯರಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ

| N/A | Published : Mar 01 2025, 01:01 AM IST / Updated: Mar 01 2025, 07:13 AM IST

Kiara Sidharth

ಸಾರಾಂಶ

ಖ್ಯಾತ ಬಾಲಿವುಡ್ ತಾರೆಯರಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಿಯಾರಾ ಶುಕ್ರವಾರ ತಾವು ಗರ್ಭಿಣಿ ಎಂದು ಘೋಷಿಸಿದ್ದಾರೆ.

ಮುಂಬೈ: ಖ್ಯಾತ ಬಾಲಿವುಡ್ ತಾರೆಯರಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಿಯಾರಾ ಶುಕ್ರವಾರ ತಾವು ಗರ್ಭಿಣಿ ಎಂದು ಘೋಷಿಸಿದ್ದಾರೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬರೆದಿರುವ ದಂಪತಿ, ‘ನಮ್ಮ ಜೀವನದ ಶ್ರೇಷ್ಠ ಉಡುಗೊರೆ. ಶೀಘ್ರದಲ್ಲೇ ಬರಲಿದೆ’ ಎಂದು ಮಗುವಿನ ಸಾಕ್ಸ್‌ ಚಿತ್ರವನ್ನು ಹಾಕಿ ಅಡಿಶೀರ್ಷಿಕೆ ಬರೆದಿದ್ದಾರೆ.ದಂಪತಿಗಳು ಪೋಸ್ಟ್ ಹಾಕಿದ ತಕ್ಷಣವೇ ಬಿ-ಟೌನ್ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಅಭಿನಂದನೆ ಮಹಾಪೂರವನ್ನೇ ಹರಿಸಿದ್ದಾರೆ.

ಇಬ್ಬರೂ 2023ರ ಫೆಬ್ರವರಿಯಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ವಿವಾಹವಾಗಿದ್ದರು.

ಅನಂತ್‌ ಅಂಬಾನಿ ಅವರ ವನತಾರಾಗೆ ರಾಷ್ಟ್ರೀಯ ಪ್ರಾಣಿ ಮಿತ್ರ ಪ್ರಶಸ್ತಿ

ಜಾಮ್‌ನಗರ (ಗುಜರಾತ್): ಆನೆಗಳು ಸೇರಿದಂತೆ ವನ್ಯಮೃಗಗಳ ರಕ್ಷಣೆ ಮತ್ತು ಪುನರುಜ್ಜೀವನಕ್ಕಾಗಿ ರಿಲಯನ್ಸ್‌ ಸಂಸ್ಥೆಯ ಅನಂತ್‌ ಅಂಬಾನಿ ಅವರ ತೆರೆದಿರುವ ‘ವನತಾರಾ’ಕ್ಕೆ ಕೇಂದ್ರ ಸರ್ಕಾರವು ಪ್ರತಿಷ್ಠಿತ ರಾಷ್ಟ್ರೀಯ ಪ್ರಾಣಿ ಮಿತ್ರ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ವಂತಾರ ಅಡಿಯಲ್ಲಿ ಆನೆಗಳ ರಕ್ಷಣೆ, ಚಿಕಿತ್ಸೆ ಮತ್ತು ಜೀವಿತಾವಧಿಯ ಆರೈಕೆಗೆ ಮೀಸಲಾಗಿರುವ ರಾಧೆ ಕೃಷ್ಣ ಟೆಂಪಲ್ ಎಲೆಫೆಂಟ್ ವೆಲ್ ಫೇರ್ ಟ್ರಸ್ಟ್ (RKTEWT)ನ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ದೆಹಲಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಭಾರತ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಕಂಗನಾ ವಿರುದ್ಧ ಅಖ್ತರ್‌ ಮಾನಹಾನಿ ದಾವೆ ವಾಪಸ್‌

ಪಿಟಿಐ ಮುಂಬೈನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಾಣಾವತ್‌ ವಿರುದ್ಧ ಚಿತ್ರ ಸಾಹಿತಿ ಜಾವೇದ್ ಅಖ್ತರ್‌ ಹೂಡಿದ್ದ ಮಾನಹಾನಿ ಮೊಕದ್ದಮೆ ಸುಖಾಂತ್ಯಗೊಂಡಿದೆ. ಶುಕ್ರವಾರ ಮುಂಬೈ ಕೋರ್ಟ್‌ ಮುಂದೆ ಹಾಜರಾದ ಕಂಗನಾ ಹಾಗೂ ಅಖ್ತರ್‌ ಪರಸ್ಪರರ ವಿರುದ್ಧ ದೂರು ವಾಪಸ್ ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ.‘ಜಾವೇದ್‌ ವಿರುದ್ಧ ತಪ್ಪು ಕಲ್ಪನೆಯಿಂದ ನಾನು ಆರೋಪ ಮಾಡಿದ್ದೆ. ಹೀಗಾಗಿ ಅವರಿಗೆ ಆದ ಆನಾನುಕೂಲಕ್ಕೆ ವಿಷಾದ ವ್ಯಕ್ತಪಡಿಸುವೆ’ ಎಂದು ಕಂಗನಾ ಹೇಳಿದ್ದಾರೆ ಹಾಗೂ ಜಾವೇದ್‌ ನನ್ನ ಚಾರಿತ್ರ್ಯಕ್ಕೆ ಧಕ್ಕೆ ತಂದರು ಎಂದು ನೀಡಿದ್ದ ದೂರು ಹಿಂಪಡೆಯುವುದಾಗಿ ತಿಳಿಸಿದ್ದಾರೆ. ಇದರ ನಡುವೆ ಕಂಗನಾ ವಿರುದ್ಧದ ದಾವೆ ಹಿಂಪಡೆಯುವೆ ಎಂದು ಅಖ್ತರ್‌ ತಿಳಿಸಿದ್ದಾರೆ. ಬಳಿಕ ಕೋರ್ಟ್‌ನಲ್ಲಿ ಇಬ್ಬರೂ ನಗುತ್ತ ಪೋಸ್ ನೀಡಿದ್ದಾರೆ.2020ರಲ್ಲಿ ‘ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಪ್ರಕರಣದಲ್ಲಿ ನನ್ನ ಹೆಸರನ್ನು ಕಂಗನಾ ಎಳೆದು ತಂದು ಅವಹೇಳನಕಾರಿ ಹೇಳಿಕೆ ನೀಡಿದ್ದರು’ ಎಂದು ಅಖ್ತರ್‌ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ 2016ರಲ್ಲಿ ಜಾವೇದ್‌ ನನ್ನ ಚಾರಿತ್ರ್ಯಕ್ಕೆ ಧಕ್ಕೆ ತಂದಿದ್ದರು ಎಂದು ಕಂಗನಾ ದೂರಿದ್ದರು.

ಈ ವರ್ಷದ ಮೇ 5ರಂದು ಮೈಕ್ರೋಸಾಫ್ಟ್‌ ಸ್ಕೈಪ್‌ ಬಂದ್

ವಾಷಿಂಗ್ಟನ್‌: ವಿಡಿಯೋ ಕಾಲ್‌ಗೆ ಬಳಸಲಾಗುತ್ತಿದ್ದ ‘ಸ್ಕೈಪ್’ ಅನ್ನು ಇದೇ ಮೇ 5ರಿಂದ ಮುಚ್ಚುವುದಾಗಿ ಮೈಕ್ರೋಸಾಫ್ಟ್‌ ಘೋಷಿಸಿದೆ. ‘ಮೇ 2025 ರಿಂದ ಸ್ಕೈಪ್ ಇನ್ನು ಮುಂದೆ ಲಭ್ಯವಿರುವುದಿಲ್ಲ. ನಿಮ್ಮ ಖಾತೆಯನ್ನು ಏನು ಮಾಡಬೇಕು ಎಂದು ಇನ್ನು 10 ವಾರದಲ್ಲಿ ನಿರ್ಧರಿಸಿ’ ಎಂದು ಅದು ಹೇಳಿದೆ. 14 ವರ್ಷ ಹಿಂದೆ ಸ್ಕೈಪ್‌ ಆರಂಭವಾಗಿತ್ತು. ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ 30 ಕೋಟಿ ಬಳಕೆದಾರರು ಸ್ಕೈಪ್‌ಗೆ ಇದ್ದರು. ಅದರ ಸಂಖ್ಯೆ ಈಗ 3.6 ಕೋಟಿ ಇಳಿದಿದೆ.