ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಮತ್ತೆ ಹಿಂಸೆ 6 ಮನೆಗಳಿಗೆ ಬೆಂಕಿ, ಗ್ರಾಮಸ್ಥರ ಮೇಲೆ ದಾಳಿ

| Published : Nov 09 2024, 01:08 AM IST / Updated: Nov 09 2024, 04:53 AM IST

ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಮತ್ತೆ ಹಿಂಸೆ 6 ಮನೆಗಳಿಗೆ ಬೆಂಕಿ, ಗ್ರಾಮಸ್ಥರ ಮೇಲೆ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಗುರುವಾರ ಮತ್ತೆ ಹಿಂಸಾಚಾರ ನಡೆಸಿದೆ. ಶಸ್ತ್ರ ಸಜ್ಜಿತ ಉಗ್ರರ ಗುಂಪೊಂದು ಜಿರಿಬಾಂ ಜಿಲ್ಲೆಯ ಗ್ರಾಮವೊಂದರ ಮೇಲೆ ಗುರುವಾರ ತಡರಾತ್ರಿ ದಾಳಿ ನಡೆಸಿದೆ.

ಇಂಫಾಲ: ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಗುರುವಾರ ಮತ್ತೆ ಹಿಂಸಾಚಾರ ನಡೆಸಿದೆ. ಶಸ್ತ್ರ ಸಜ್ಜಿತ ಉಗ್ರರ ಗುಂಪೊಂದು ಜಿರಿಬಾಂ ಜಿಲ್ಲೆಯ ಗ್ರಾಮವೊಂದರ ಮೇಲೆ ಗುರುವಾರ ತಡರಾತ್ರಿ ದಾಳಿ ನಡೆಸಿದೆ. 

ಈ ವೇಳೆ 6 ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಹಲವು ಗ್ರಾಮಸ್ಥರ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಗ್ರಾಮಸ್ಥರು ತಮ್ಮ ಪ್ರಾಣ ಉಳಿಸಿಕೊಳ್ಳಲು ಅರಣ್ಯ ಪ್ರದೇಶಗಳಿಗೆ ಓಡಿ ಹೋಗಿದ್ದಾರೆ. ದಾಳಿಯಲ್ಲಿ ತಮ್ಮ ಸಮುದಾಯದ ಮಹಿಳೆಯೊಬ್ಬರನ್ನು ಹತ್ಯೆ ಮಾಡಲಾಗಿದೆ ಕುಕಿ ಸಮುದಾಯದ ಆರೋಪಿಸಿದೆ. ಆದರೆ ಪೊಲೀಸರು ಇದನ್ನು ಖಚಿತಪಡಿಸಿಲ್ಲ . ಕಳೆದ ವರ್ಷ ಮೇ ತಿಂಗಳಲ್ಲಿ ಆರಂಭವಾದ ಈ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಗಂಭೀರ ಹವಾಮಾನಕ್ಕೆ 9 ತಿಂಗಳಲ್ಲಿ 3200 ಸಾವು

ನವದೆಹಲಿ: ಭಾರತದಲ್ಲಿ 2024ರ 9 ತಿಂಗಳ ಅವಧಿಯಲ್ಲಿ ಗಂಭೀರ ಹವಾಮಾನದ ವಿವಿಧ ಘಟನೆಗಳಿಗೆ 3200 ಮಂದಿ ಸಾವನ್ನಪ್ಪಿದ್ದಾರೆ. 2.3 ಲಕ್ಷ ಮನೆಗಳು ಹಾನಿಗೊಳಗಾಗಿವೆ ಎಂದು ವರದಿಯೊಂದು ಹೇಳಿದೆ. ದೆಹಲಿ ಮೂಲದ ಸೆಂಟರ್ ಫಾರ್‌ ಸೈನ್ಸ್‌ ಆ್ಯಂಡ್‌ ಎನ್ವಿರಾನ್‌ಮೆಂಟ್‌ (ಸಿಎಸ್‌ಇ) ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ 9 ತಿಂಗಳಲ್ಲಿ ಶೇ.93ರಷ್ಟು ಅಂದರೆ 274 ದಿನಗಳ ಪೈಕಿ 255 ದಿನಗಳಲ್ಲಿ ಗಂಭೀರ ಹವಾಮಾನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ಪರಿಣಾಮ 3,238 ಮಂದಿ ಸಾವನ್ನಪ್ಪಿದ್ದಾರೆ. 32 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಗಳು, 2.35 ಲಕ್ಷ ಮನೆಗಳು ನಾಶವಾಗಿದೆ. ಜೊತೆಗೆ 9,457 ಜಾನುವಾರುಗಳು ಸಾವನ್ನಪ್ಪಿವೆ ಎಂದಿದೆ. ದೇಶದಲ್ಲಿ ಅತಿ ಹೆಚ್ಚು ಸಾವಿನ ಪಟ್ಟಿಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ.

ಆಯುಷ್ಮಾನ್‌ ಯೋಜನೆಗೆ ಆಯುರ್ವೇದ, ಯೋಗ ಕೋರಿ ಸುಪ್ರೀಂಗೆ ಅರ್ಜಿ

ನವದೆಹಲಿ: ಆಯುಷ್ಮಾನ್‌ ಭಾರತ್‌ ವಿಮಾ ಯೋಜನೆಯಡಿ ಆಯುರ್ವೇದ ಹಾಗೂ ಯೋಗ ಸೇರ್ಪಡೆಗೆ ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿಯ ಕುರಿತು ಉತ್ತರಿಸುವಂತೆ ಸುಪ್ರೀಂ ಕೋರ್ಟ್‌ ಕೇಂದ್ರಕ್ಕೆ ನೋಟಿಸ್‌ ಜಾರಿ ಮಾಡಿದೆ.ಈ ಸೇರ್ಪಡೆಯಿಂದಾಗಿ ದೇಶದ ಜನರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೌಲಭ್ಯಗಳು ಹಾಗೂ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ದೊರಕುತ್ತದೆ. ಜೊತೆಗೆ ಆಯುರ್ವೇದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅನೇಕರಿಗೆ ಉದ್ಯೋಗ ಲಭಿಸಲಿದೆ ಎಂದು ವಕೀಲ ಅಶ್ವಿನಿ ಕುಮಾರ್‌ ಉಪಾಧ್ಯಾಯ್‌ ಸಲ್ಲಿಸಿದ್ದ ಮನವಿಯನ್ನಾಧರಿಸಿ ನ್ಯಾ। ಡಿ.ವೈ. ಚಂದ್ರಚೂಡ್‌ ನೇತೃತ್ವದ ತ್ರಿಸದಸ್ಯ ಪೀಠ ನೋಟಿಸ್‌ ಜಾರಿಗೊಳಿಸಿದೆ.

ಆಯುಶ್ಮಾನ್‌ ಯೋಜನೆಯುವ ಕೇವಲ ಅಲೋಪಥಿಕ್‌ ಆಸ್ಪತ್ರೆ ಹಾಗೂ ಔಷಧಾಲಯಗಳನ್ನು ಒಳಗೊಂಡಿದ್ದು,ವಿದೇಶಿಗರು ಸೃಷ್ಟಿಸಿದ ನೀತಿಗಳಿಂದಾಗಿ ಭಾರತದ ಸ್ವದೇಶಿ ಚಿಕಿತ್ಸಾ ವಿಧಾನಗಳಾದ ಆಯುರ್ವೇದ, ಯೋಗ, ನಾಚುರೋಪತಿ, ಸಿದ್ಧ, ಉನಾನಿ, ಹೋಮಿಯೋಪತಿಗಳು ಮೂಲೆಗುಂಪಾಗುತ್ತಿವೆ ಎಂದು ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ನಟ ಸಲ್ಮಾನ್‌ ಖಾನ್‌ಗೆ ಮತ್ತೆ ಕೊಲೆ ಬೆದರಿಕೆ, 5 ಕೋಟಿ ರು. ಬೇಡಿಕೆ

ಮುಂಬೈ: ನಟ ಸಲ್ಮಾನ್ ಖಾನ್‌ಗೆ ಮತ್ತೊಂದು ಕೊಲೆ ಬೆದರಿಕೆ ಹಾಕಲಾಗಿದೆ. ಗುರುವಾರ ತಡರಾತ್ರಿ ಮುಂಬೈ ಸಂಚಾರ ಪೊಲೀಸರ ವಾಟ್ಸಾಪ್‌ ಸಹಾಯವಾಣಿಗೆ 5 ಕೋಟಿ ರು. ನೀಡದಿದ್ದರೇ ಸಲ್ಮಾನ್‌ ಖಾನ್‌ ಅವರನ್ನು ಕೊಲ್ಲುವುದಾಗಿ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಬಿಷ್ಣೋಯಿ ಗ್ಯಾಂಗ್‌ ಪರವಾಗಿ ಈ ಬೆದರಿಕೆ ಹಾಕಲಾಗುತ್ತಿದೆ ಎಂದು ಸಂದೇಶದಲ್ಲಿ ಹೇಳಲಾಗಿದೆ. 

ಈ ಬಗ್ಗೆ ವರ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇತ್ತೀಚೆಗೆ ಸಲ್ಮಾನ್‌ ಕೊಲೆ ಮಾಡುವುದಾಗಿ ಸಂಚಾರಿ ಪೊಲೀಸರ ಸಹಾಯವಾಣಿಗೆ ಅನೇಕ ಬೆದರಿಕೆ ಸಂದೇಶಗಳು ಬಂದಿದ್ದವು. ಗುರುವಾರ ಶಾರುಖ್‌ ಖಾನ್‌ ಅವರನ್ನು ಕೊಲೆ ಮಾಡುವುದಾಗಿ ಛತ್ತೀಸ್‌ಗಢದ ವಕೀಲರ ಫೋನ್‌ ಮೂಲಕ ಬೆದರಿಕೆ ಹಾಕಲಾಗಿತ್ತು.