ಸಾರಾಂಶ
3064 ಕೋಟಿ ರು.ಮೊತ್ತದ ಗಂಗಾ ನದಿಗೆ ಷಟ್ಪಥ ಸೇತುವೆ ನಿರ್ಮಿಸುವ ಯೋಜನೆಗೆ ಕೇಂದ್ರ ಸಂಪುಟ ಸಮಿತಿ ಅನುಮೋದನೆ ನೀಡಿದ್ದು, ಬಿಹಾರದ ಪಟನಾದ ಬಳಿ 4.56 ಕಿ.ಮೀ ಉದ್ದದ ಸೇತುವೆಯನ್ನು ನಿರ್ಮಿಸಲು ಯೋಜಿಸಲಾಗಿದೆ.
ನವದೆಹಲಿ: ಬಿಹಾರದಲ್ಲಿ ಗಂಗಾ ನದಿಗೆ ಅಡ್ಡಲಾಗಿ 4.56 ಕಿ.ಮೀ ಉದ್ದದ ಷಟ್ಪಥ ಸೇತುವೆಯನ್ನು ನಿರ್ಮಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.ಒಟ್ಟು 3,064.45 ಕೋಟಿ ರು. ಅಂದಾಜು ವೆಚ್ಚದ ಕಾಮಗಾರಿಯನ್ನು ಆರಂಭಿಸಿದ ದಿನದಿಂದ 42 ತಿಂಗಳೊಳಗೆ ಮುಗಿಸಲು ಗಡುವು ಹಾಕಿಕೊಳ್ಳಲಾಗಿದೆ. ಈ ಸೇತುವೆಯು ದಿಘಾ ಮತ್ತು ಸೋನೆಪುರವನ್ನು ಸಂಪರ್ಕಿಸಲಿದ್ದು, ರಾಜಧಾನಿ ಪಟನಾದಿಂದ ಸುವರ್ಣ ಚತುಷ್ಪಥ ಹೆದ್ದಾರಿಗೆ ನೇರ ಸಂಪರ್ಕವನ್ನೂ ಕಲ್ಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಉಪಸಮಿತಿಯು, ಬುದ್ಧ ಸರ್ಕ್ಯೂಟ್‌ನ ಭಾಗವಾದ ಯೋಜನೆಗೆ ಅನುಮೋದನೆ ನೀಡಿದೆ.
ಪ್ರಸ್ತುತ ಉಭಯ ಪಟ್ಟಣಗಳ ನಡುವೆ ರಸ್ತೆ ಮತ್ತು ರೈಲು ಸೇತುವೆಯಿದ್ದು, ಅದರಲ್ಲಿ ಕೇವಲ ಸಣ್ಣ ಮೋಟಾರು ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಸೇತುವೆ ನಿರ್ಮಾಣದಿಂದ ರಸ್ತೆಯ ಮೂಲಕ ಭಾರೀ ಗಾತ್ರದ ಸರಕು ವಾಹನಗಳನ್ನು ಈ ಮಾರ್ಗದಲ್ಲಿ ಸಾಗಿಸಿ ಸಮಯ, ಇಂಧನ ಮತ್ತು ಹಣದ ಉಳಿತಾಯ ಮಾಡಬಹುದಾಗಿದೆ.