ಸಾರಾಂಶ
ಗ್ಯಾಂಗ್ಟಕ್ : ಸಿಕ್ಕಿಂ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, 32 ವಿಧಾನಸಭಾ ಕ್ಷೇತ್ರಗಳ ಪೈಕಿ ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಭರ್ಜರಿ 31 ಸ್ಥಾನಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ತನ್ನ ಪಾರಮ್ಯ ಮುಂದುವರೆಸಿದೆ. ಮತ್ತೊಂದೆಡೆ ಪ್ರಮುಖ ಪ್ರತಿಪಕ್ಷವಾಗಿದ್ದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಂ) ಕೇವಲ 1 ಸ್ಥಾನಕ್ಕೆ ಸೀಮಿತವಾಗಿದೆ.
ಕಳೆದ ವಿಧಾನಸಭೆಯಲ್ಲಿ 12 ಸ್ಥಾನ ಹೊಂದಿದ್ದ ಬಿಜೆಪಿ ಈ ಸಲ ಒಂದೂ ಸ್ಥಾನ ಗೆಲ್ಲದೇ ಧೂಳಿಪಟವಾಗಿದೆ. ಕಾಂಗ್ರೆಸ್ ಕೂಡ ಶೂನ್ಯ ಸಂಪಾದಿಸಿದೆ.
ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾದ ಮತಎಣಿಕೆಯಲ್ಲಿ ಮೊದಲಿನಿಂದಲೂ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮುನ್ನಡೆ ಸಾಧಿಸಿತ್ತಾದರೂ ಈ ರೀತಿ 30ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇರಲಿಲ್ಲ. ಆದರೆ ಮೂರನೇ ಹಂತದ ಮತ ಎಣಿಕೆ ನಂತರ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಎಸ್‌ಕೆಎಂ ಪಕ್ಷದ ಹುರಿಯಾಳುಗಳೇ ಮುನ್ನಡೆ ಸಾಧಿಸುತ್ತಾ ಸಾಗಿ ಗೆಲುವು ಸಾಧಿಸಿದರು.
ಪ್ರಮುಖವಾಗಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಸೊರೆಂಗ್ ಚಾಕುಂಗ್ ಮತ್ತು ರ್‍ಹೆನಾಕ್ ಕ್ಷೇತ್ರಗಳಲ್ಲಿ 7 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಮತ್ತೊಂದೆಡೆ ಅವರ ಪತ್ನಿ ಕೃಷ್ಣಾ ರಾಯ್ ಅವರು ನಾಮ್‌ಚಿ-ಸಿಂಗಿತಾಂಗ್ ಕ್ಷೇತ್ರದಲ್ಲಿ ಎಸ್‌ಡಿಎಂ ಪ್ರತಿಸ್ಪರ್ಧಿ ಬಿಮಲ್ ರಾಯ್ ವಿರುದ್ಧ ತುರುಸಿನ ಸ್ಪರ್ಧೆಯಲ್ಲಿ 5 ಸಾವಿರ ಮತಗಳಿಂದ ಜಯಭೇರಿ ಬಾರಿಸಿದರು.
ಸಿಕ್ಕಿಂ ರಾಜ್ಯದ 32 ವಿಧಾನಸಭಾ ಕ್ಷೇತ್ರಗಳಿಗೆ ಏ.19ರಂದು ಏಕಕಾಲದಲ್ಲಿ ಮತದಾನ ನಡೆದಿತ್ತು.
ಫುಟ್ಬಾಲಿಗ ಭುಟಿಯಾಗೆ 6ನೇ ಸೋಲು
ಗ್ಯಾಂಗ್ಟಕ್: ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ ಚುನಾವಣಾ ಸೋಲಿನ ಪರಂಪರೆ ಮುಂದುವರೆದಿದ್ದು, ಬಾರ್ಫಂಗ್ ಕ್ಷೇತ್ರದಲ್ಲಿ ಎಸ್‌ಕೆಎಂ ಅಭ್ಯರ್ಥಿಯ ವಿರುದ್ಧ 4 ಸಾವಿರಕ್ಕೂ ಅಧಿಕ ಮತಗಳಿಂದ ಪರಾಭವಗೊಂಡಿದ್ದಾರೆ. ಪ್ರಸ್ತುತ ಅವರು ಎಸ್‌ಡಿಎಫ್ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಇದು 10 ವರ್ಷದಲ್ಲಿ ಅವರ 6ನೇ ಸೋಲು.
ಮಾಜಿ ಸಿಎಂ ಚಾಮ್ಲಿಂಗ್‌ಗೆ 2ರಲ್ಲೂ ಸೋಲು
ಗ್ಯಾಂಗ್ಟಕ್: ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್) ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಅಚ್ಚರಿಯ ರೀತಿಯಲ್ಲಿ ಎರಡೂ ಕಡೆ ಸೋಲುಂಡಿದ್ದಾರೆ. ಅವರ ಪಕ್ಷವು ಕೇವಲ 1 ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದೆ.
ಸಿಕ್ಕಿಂ ವಿಧಾನಸಭೆ (ಒಟ್ಟು ಸ್ಥಾನ 32/ಬಹುಮತಕ್ಕೆ 17)
ಪಕ್ಷ2024 2019 ವ್ಯತ್ಯಾಸ
ಎಸ್‌ಕೆಎಂ3117+14
ಎಸ್‌ಡಿಎಫ್115-14