ಜಮ್ಮು ದಾಳಿ ಸಣ್ಣ ವಿಷಯ : ಫಾರೂಖ್‌!

| Published : Jun 13 2024, 12:53 AM IST / Updated: Jun 13 2024, 05:17 AM IST

ಸಾರಾಂಶ

ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರ ದಾಳಿ ಪ್ರಾರಂಭವಾಗಿರುವುದು ಒಂದು ಸಣ್ಣ ವಿಷಯ. ಅದಕ್ಕಾಗಿ ಭಾರತೀಯ ಸೇನೆ ಮಿಲಿಟರಿ ಕಾರ್ಯಾಚರಣೆ ಮೂಲಕ ಪ್ರತಿಕ್ರಿಯೆ ನೀಡಬೇಕಿಲ್ಲ.

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರ ದಾಳಿ ಪ್ರಾರಂಭವಾಗಿರುವುದು ಒಂದು ಸಣ್ಣ ವಿಷಯ. ಅದಕ್ಕಾಗಿ ಭಾರತೀಯ ಸೇನೆ ಮಿಲಿಟರಿ ಕಾರ್ಯಾಚರಣೆ ಮೂಲಕ ಪ್ರತಿಕ್ರಿಯೆ ನೀಡಬೇಕಿಲ್ಲ. ಬದಲು ಭಾರತವು ರಾಜತಾಂತ್ರಿಕ ಮಾತುಕತೆಯ ಮೂಲಕ ಪಾಕಿಸ್ತಾನದೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳಬೇಕು ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್‌ ಅಬ್ದುಲ್ಲಾ ಆಘಾತಕಾರಿ ಹೇಳಿಕೆ ನೀಡಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಫಾರೂಖ್‌, ‘ಜಮ್ಮುವಿನಲ್ಲಿ ದಾಳಿ ನಡೆದಿರುವುದು ಸಣ್ಣ ವಿಷಯ. ಇದನ್ನು ಪಾಕಿಸ್ತಾನದೊಂದಿಗೆ ಮಾತುಕತೆಯ ಮೂಲಕ ಭಾರತ ಪರಿಹರಿಸಿಕೊಳ್ಳುವುದು ಸೂಕ್ತ. ಈಗ ಮಾಡುತ್ತಿರುವಂತೆ ಮಿಲಿಟರಿ ಪ್ರತಿದಾಳಿಯನ್ನು ಮುಂದುವರಿಸಿದರೆ ಮುಂದೆ ಅಮರನಾಥ ಯಾತ್ರೆಯ ವೇಳೆ ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆಗಳು ಹೆಚ್ಚಿರಲಿವೆ’ ಎಂದು ಎಚ್ಚರಿಸಿದ್ದಾರೆ.

ಉಗ್ರ ದಾಳಿ ವೇಳೆ ವಿಪಕ್ಷ ನಾಯಕರ ರಾಜಕೀಯ!

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಉಗ್ರ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿ ‘ಪ್ರಧಾನಿ ಮೋದಿ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಚಿಂತಿಸುವುದನ್ನು ಬಿಟ್ಟು ತಮಗೆ ಶುಭಕೋರಿದವರಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂದು ಚಿಂತಿತರಾಗಿದ್ದಾರೆ’ ಎಂದು ಹರಿಹಾಯ್ದರೆ, ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಉಗ್ರರನ್ನು ಹಿಡಿಯಲು ಸಾಧ್ಯವಾಗದಿದ್ದರೆ ಮೋದಿ ಪ್ರಧಾನಿಯಾಗಲು ಲಾಯಕ್ಕಲ್ಲ ಎಂದು ಹೇಳಿಕೆ ನೀಡಿದ್ದಾರೆ.