ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅಸ್ವಸ್ಥ: ದಿಲ್ಲಿಯ ಗಂಗಾರಾಂ ಆಸ್ಪತ್ರೆಗೆ ದಾಖಲು

| N/A | Published : Feb 21 2025, 12:45 AM IST / Updated: Feb 21 2025, 04:51 AM IST

Sonia Gandhi

ಸಾರಾಂಶ

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (78) ಅಸ್ವಸ್ಥರಾಗಿದ್ದು, ದಿಲ್ಲಿಯ ಗಂಗಾರಾಂ ಆಸ್ಪತ್ರೆಗೆ ಗುರುವಾರ ಬೆಳಗ್ಗೆ ದಾಖಲಿಸಲಾಗಿದೆ. ಅನಾರೋಗ್ಯದ ಕಾರಣ ತಿಳಿದುಬಂದಿಲ್ಲ. ಆದರೆ ಶುಕ್ರವಾರ ಅವರನ್ನು ಡಿಸ್‌ಚಾರ್ಜ್‌ ಮಾಡಲಾಗುವುದು. ಅವರ ಮೇಲೆ ವೈದ್ಯರ ತಂಡ ನಿಗಾ ಇರಿಸಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ನವದೆಹಲಿ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (78) ಅಸ್ವಸ್ಥರಾಗಿದ್ದು, ದಿಲ್ಲಿಯ ಗಂಗಾರಾಂ ಆಸ್ಪತ್ರೆಗೆ ಗುರುವಾರ ಬೆಳಗ್ಗೆ ದಾಖಲಿಸಲಾಗಿದೆ. ಅನಾರೋಗ್ಯದ ಕಾರಣ ತಿಳಿದುಬಂದಿಲ್ಲ. ಆದರೆ ಶುಕ್ರವಾರ ಅವರನ್ನು ಡಿಸ್‌ಚಾರ್ಜ್‌ ಮಾಡಲಾಗುವುದು. ಅವರ ಮೇಲೆ ವೈದ್ಯರ ತಂಡ ನಿಗಾ ಇರಿಸಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಚಿನ್ನ ಮತ್ತೆ ಗಗನಕ್ಕೆ: ದಿಲ್ಲೀಲಿ 10 ಗ್ರಾಂಗೆ ₹89450 ಬೆಲೆ, ದಾಖಲೆ

ನವದೆಹಲಿ: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ದಿನಂಪ್ರತಿ ಏರುಗತಿಯಲ್ಲಿದ್ದು, ಗುರುವಾರವೂ ಸಹ ಇದು ಮುಂದುವರಿದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ 24 ಕ್ಯಾರಟ್‌ ಚಿನ್ನ 89,450 ರು.ಗೆ ಹೆಚ್ಚಳವಾಗಿದೆ. 22 ಕ್ಯಾರಟ್‌ ಚಿನ್ನದ ಬೆಲೆ 89,050 ರು.ಗೆ ತಲುಪಿದೆ. ಇನ್ನು ಬೆಳ್ಳಿ ಬೆಲೆ 700 ರು. ಹೆಚ್ಚಳವಾಗಿದ್ದು, 1 ಲಕ್ಷದ 300 ರು.ಗೆ ಏರಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ತೆರಿಗೆ ನಿರ್ಧಾರದಿಂದಾಗಿ ಚಿನ್ನದ ಬೆಲೆಯನ್ನು ವಿಪರೀತ ಏರಿಕೆ ಕಾಣುತ್ತಿದೆ. ಜೊತೆಗೆ ಸ್ಥಳೀಯ ಮಾರುಕಟ್ಟೆಯಲ್ಲಿನ ಬೇಡಿಕೆಯೂ ಸಹ ಇದಕ್ಕೆ ಕಾರಣವಾಗಿದೆ.

ಉ.ಪ್ರ.: ಜಾಣ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿ

ಲಖನೌ: ಉಚಿತ ಭರವಸೆಗಳ ಭರಾಟೆ ನಡುವೆ ಉತ್ತರ ಪ್ರದೇಶದ ಸರ್ಕಾರ ಗುರುವಾರ 8,08,736.6 ಕೋಟಿ ರು.ಗಳ ಬಜೆಟ್ ಮಂಡಿಸಿದ್ದು, ರಾಜ್ಯದ ಪ್ರತಿ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಉಚಿತ ಸ್ಕೂಟಿ ನೀಡುವ ಯೋಜನೆ ಘೋಷಿಸಲಾಗಿದೆ. ಮತ್ತೊಂದೆಡೆ ಉಜ್ವಲಾ ಯೋಜನೆಯಡಿ 2 ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವುದಾಗಿಯೂ ಸರ್ಕಾರ ಘೋಷಿಸಿದೆ.

ಸ್ಕೂಟಿ ನೀಡುವ ಯೋಜನೆಗೆ ‘ಮಹಾರಾಣಿ ಲಕ್ಷ್ಮೀಬಾಯಿ ಯೋಜನೆ’ ಎಂದು ಹೆಸರಿಸಿದ್ದಾರೆ. ಈ ಯೋಜನೆಗಾಗಿ 400 ಕೋಟು ರು.ಗಳನ್ನು ಮೀಸಲಿಡಲಾಗಿದೆ.ರಾಜ್ಯದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿ ಒದಗಿಸುವುದಾಗಿ 2022ರ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಬಿಜೆಪಿ ಭರವಸೆ ನೀಡಿತ್ತು.

ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆಗೆ ಜೀವ ಬೆದರಿಕೆ

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಕಾರನ್ನು ಸ್ಫೋಟಿಸುವುದಾಗಿ ಮುಂಬೈ ಪೊಲೀಸರಿಗೆ ಗುರುವಾರ ಬೆಳಿಗ್ಗೆ ಅನಾಮಧೇಯ ಕರೆಗಳು ಬಂದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಗೋರೆಗಾಂವ್, ಜೆ. ಜೆ. ಮಾರ್ಗ್ ಪೊಲೀಸ್ ಠಾಣೆ ಮತ್ತು ರಾಜ್ಯ ಸರ್ಕಾರದ ಪ್ರಧಾನ ಕಚೇರಿ ಮಂತ್ರಾಲಯದ ನಿಯಂತ್ರಣ ಕೊಠಡಿಗೆ ಕರೆಗಳು ಬಂದಿವೆ. ಕರೆ ಮಾಡಿದ ವ್ಯಕ್ತಿ ಶಿಂಧೆಯವರ ಕಾರನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಕುರಿತು ತನಿಖೆ ನಡೆಯುತ್ತಿದೆ’ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಸಿಎಂ ದೇವೇಂದ್ರ ಫಡ್ನವೀಸ್, ಡಿಸಿಎಂ ಏಕನಾಥ್ ಶಿಂಧೆ ನಡುವೆ ಶೀತಲ ಸಮರ ನಡೆಯುತ್ತಿದ್ದು, ಬುಧವಾರವಷ್ಟೆ ಶಿಂಧೆ ಬಣದ 20ಕ್ಕೂ ಹೆಚ್ಚು ಶಾಸಕರಿಗೆ ಒದಗಿಸಲಾಗಿದ್ದ ವೈ ಪ್ಲಸ್ ಭದ್ರತೆಯನ್ನು ಕಡಿತಗೊಳಿಸಲಾಗಿತ್ತು.

ಮಹಾರಾಷ್ಟ್ರ ಕೃಷಿ ಸಚಿವ ಕೊಕಾಟೆಗೆ 2 ವರ್ಷ ಜೈಲು

ನಾಸಿಕ್: 30 ವರ್ಷಗಳ ಹಿಂದೆ ಸರ್ಕಾರಿ ಕೋಟಾದಡಿಯಲ್ಲಿ ಫ್ಲ್ಯಾ ಟ್‌ಗಳನ್ನು ಪಡೆಯಲು ನಕಲಿ ದಾಖಲೆ ಸಲ್ಲಿಸಿದ ಪ್ರಕರಣದಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಗುರುವಾರ ರಾಜ್ಯ ಕೃಷಿ ಸಚಿವ ಮತ್ತು ಎನ್‌ಸಿಪಿ ನಾಯಕ ಮಾಣಿಕ್‌ರಾವ್ ಕೊಕಾಟೆ ಅವರಿಗೆ 2 ವರ್ಷ ಜೈಲುಶಿಕ್ಷೆ ಮತ್ತು 50,000 ರು. ದಂಡ ವಿಧಿಸಿದೆ. ಇದರ ಬೆನ್ನಲ್ಲೇ ಅವರಿಗೆ ಜಾಮೀನು ಲಭಿಸಿದೆ.

ಮಾಜಿ ಸಚಿವ ದಿ. ಟಿ.ಎಸ್. ದಿಘೋಲೆ ಅವರ ದೂರಿನ ಮೇರೆಗೆ 1995ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಅವರ ಸಹೋದರ ಸುನಿಲ್ ಕೊಕಾಟೆ ಕೂಡ ದೋಷಿ ಎಂದು ಸಾಬೀತಾಗಿದೆ.ತೀರ್ಪಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೊಕಾಟೆ, ‘ನಾನು ಪ್ರಕರಣದಲ್ಲಿ ಜಾಮೀನು ಪಡೆದಿದ್ದೇನೆ ಮತ್ತು ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ.

ಶಾಸಕತ್ವ ನಷ್ಟ?:2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆ ಆದರ ಜನಪ್ರತಿನಿಧಿಗಳು ಶಾಸಕ ಹಾಗೂ ಸಚಿವಗಿರಿಯಿಂದ ಅನರ್ಹರಾಗುತ್ತಾರೆ. ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದರೆ ಮಾತ್ರ ಅನರ್ಹತೆಯಿಂದ ಬಚಾವಾಗುತ್ತಾರೆ.

ಮಣಿಪುರ: ಲೂಟಿ ಹೊಡೆದ ಶಸ್ತ್ರಾಸ್ತ್ರ ವಾಪಸಿಗೆ 7 ದಿನ ಗಡುವು

ಇಂಫಾಲ್: ಗಲಭೆಪೀಡಿತ ಮಣಿಪುರದ ಜನ 7 ದಿನಗಳ ಒಳಗೆ ತಾವು ಲೂಟಿ ಮಾಡಿದ ಮತ್ತು ಅಕ್ರಮವಾಗಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಸ್ವಯಂಪ್ರೇರಣೆಯಿಂದ ಒಪ್ಪಿಸಬೇಕು. ಈ ಅವಧಿಯಲ್ಲಿ ಶಸ್ತ್ರಾಸ್ತ್ರ ತ್ಯಜಿಸುವವರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಸೂಚಿಸಿದ್ದಾರೆ.7 ದಿನಗಳಲ್ಲಿ ಮರಳಿಸದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಿದ್ದಾರೆ.

ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ಜನಾಂಗೀಯ ಹಿಂಸೆ ಮಣಿಪುರವನ್ನು ಪ್ರಕ್ಷುಬ್ದಗೊಳಿಸಿದೆ. ಗಲಭೆ ವೇಳೆ ಜನರು ಭಾರಿ ಪ್ರಮಾಣದಲ್ಲಿ ಭದ್ರತಾ ಪಡೆಗಳ ಶಸ್ತ್ರಾಸ್ತ್ರ ಲೂಟಿ ಮಾಡಿದ್ದರು.++++

ಸಿಎಂ ಬಿರೇನ್ ಸಿಂಗ್ ರಾಜೀನಾಮೆ ಬಳಿಕ, ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡ ವಾರದಲ್ಲೇ ಶಾಂತಿ ಸ್ಥಾಪನೆಗಾಗಿ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.