ನಾಯಿಮರಿಯನ್ನು ಎತ್ತಿಕೊಂಡ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಫೋಟೊ ವೈರಲ್‌

| Published : Aug 24 2024, 01:23 AM IST / Updated: Aug 24 2024, 05:40 AM IST

ಸಾರಾಂಶ

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಮುದ್ದು ನಾಯಿಮರಿ ನಾರ್ರಿಯನ್ನು ಬೆನ್ನ ಮೇಲೆ ಎತ್ತಿಕೊಂಡಿರುವ ಚಿತ್ರ ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ

ನವದೆಹಲಿ :  ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಮುದ್ದು ನಾಯಿಮರಿ ನಾರ್ರಿಯನ್ನು ಬೆನ್ನ ಮೇಲೆ ಎತ್ತಿಕೊಂಡಿರುವ ಚಿತ್ರ ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಲೋಕಸಭೆಯ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ತಾಯಿ, ನಾಯಿಮರಿಯ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ‘ಅಮ್ಮನ ಮೆಚ್ಚಿನ ನಾಯಿ ನಾರ್ರಿ’ ಎಂದು ಹಂಚಿಕೊಂಡಿದ್ದಾರೆ.

==

ಆಕಸ್ಮಿಕವಾಗಿ ಪಾಕ್‌ ಗಡಿ ಪ್ರವೇಶಿಸಿದ ಭಾರತೀಯ ಸೇನೆಯ ಮಿನಿ ಡ್ರೋನ್‌

ನವದೆಹಲಿ: ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಮಿನಿ ಯುದ್ಧತಂತ್ರದ ಡ್ರೋನ್ ಶುಕ್ರವಾರ ಆಕಸ್ಮಿಕವಾಗಿ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ದಾಡಿ ಪಾಕಿಸ್ತಾನದ ಭೂಪ್ರದೇಶದಲ್ಲಿ ಬಿದ್ದಿದೆ. ಶುಕ್ರವಾರ ಬೆಳಗ್ಗೆ 9.25ರ ಸಮಯದಲ್ಲಿ ಭಾರತದ ಭೂಪ್ರದೇಶದಲ್ಲಿ ತರಬೇತಿ ಕಾರ್ಯಾಚರಣೆ ವೇಳೆ ಮಿನಿ ಯುಎವಿ ಡ್ರೋನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ನಿಯಂತ್ರಣ ಕಳೆದುಕೊಂಡು ಭಾರತದ ಭಿಂಬರ್ ಗಲಿ ಸೆಕ್ಟರ್‌ನಿಂದ ಪಾಕಿಸ್ತಾನದ ನಿಕಿಯಾಲ್ ಸೆಕ್ಟರ್‌ ಕಡೆ ಚಲಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಡ್ರೋನ್‌ ಅನ್ನು ಪಾಕಿಸ್ತಾನಿ ಪಡೆಗಳು ವಶಪಡಿಸಿಕೊಂಡಿವೆ ಎಂದು ವರದಿಗಳು ಬಂದಿವೆ. ಈಗಾಗಲೇ ಸೇನೆಯು ಡ್ರೋನ್ ಅನ್ನು ಹಿಂದಿರುಗಿಸುವಂತೆ ಪಾಕಿಸ್ತಾನಿ ಸೇನೆಗೆ ಹಾಟ್‌ಲೈನ್‌ನಲ್ಲಿ ಸಂದೇಶವನ್ನು ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

==

ನೇಪಾಳದಲ್ಲಿ ನದಿಗೆ ಉರುಳಿದ ಬಸ್‌: 27 ಭಾರತೀಯ ಪ್ರವಾಸಿಗರ ಸಾವು

ಕಾಠ್ಮಂಡು: 43 ಭಾರತೀಯ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಉತ್ತರಪ್ರದೇಶದ ಬಸ್ಸೊಂದು ನೇಪಾಳದಲ್ಲಿ ನದಿಗೆ ಉರುಳಿ ಸಂಭವಿಸಿದ ದುರ್ಘಟನೆಯಲ್ಲಿ 27 ಜನರು ಸಾವನ್ನಪ್ಪಿದ್ದಾರೆ. ಶುಕ್ರವಾರ ಸಂಭವಿಸಿದ ಈ ದುರ್ಘಟನೆಯಲ್ಲಿ 16 ಜನರು ಗಾಯಗೊಂಡಿದ್ದು ಅವರನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರವಾಸಿಗರೆಲ್ಲಾ ಮಹಾರಾಷ್ಟ್ರ ಮೂಲದವರಾಗಿದ್ದಾರೆ.

ಘಟನಾ ಸ್ಥಳಕ್ಕೆ ನೇಪಾಳ ಸರ್ಕಾರ ಕಾಪ್ಟರ್‌ ರವಾನಿಸುವ ಮೂಲಕ ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಿದ್ದರೆ, ಇತ್ತ ಉತ್ತರಪ್ರದೇಶ ಸರ್ಕಾರ ರಾಜ್ಯ ವಿಪತ್ತು ನಿರ್ವಹಣಾ ತಂಡವನ್ನು ರವಾನಿಸಿದೆ.ಮಹಾರಾಷ್ಟ್ರದ 104 ಜನರ ತಂಡವೊಂದು 10 ದಿನಗಳ ಪ್ರವಾಸಕ್ಕಾಗಿ ಮೂರು ಬಸ್‌ಗಳಲ್ಲಿ ನೇಪಾಳಕ್ಕೆ ಆಗಮಿಸಿತ್ತು. ಹೀಗೆ ಆಗಮಿಸಿದ್ದ ಪ್ರವಾಸಿಗರ ತಂಡ ಶುಕ್ರವಾರ ಬೆಳಗ್ಗೆ ಪ್ರವಾಸಿ ತಾಣ ಪೊಖಾರಾದಿಂದ ರಾಜಧಾನಿ ಕಾಠ್ಮಂಡುವಿನತ್ತ ಪ್ರಯಾಣ ಕೈಗೊಂಡಿತ್ತು.

ಆದರೆ ತನಹುನ್ ಜಿಲ್ಲೆಯ ಆಯ್ನಾ ಪಹರ ಹೆದ್ದಾರಿಯಲ್ಲಿ ಸಾಗುವ ವೇಳೆ ಒಂದು ಬಸ್‌ ಚಾಲಕನ ನಿಯಂತ್ರಣ ತಪ್ಪಿ 150 ಮೀ ಆಳದಲ್ಲಿರುವ ಮರ್ಶ್ಯಾಂಡಿ ನದಿಗೆ ಉರುಳಿಬಿದ್ದಿದೆ. ಅಪಘಾತದ ತೀವ್ರತೆಗೆ ಬಸ್‌ ಸಂಪೂರ್ಣ ನಜ್ಜುಗುಜ್ಜಾಗಿದ್ದು 27 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

==

ಅಸ್ಸಾಂ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ರಾಜ್ಯವ್ಯಾಪಿ ಪ್ರತಿಭಟನೆ

ಗುವಾಹಟಿ: ಅಸ್ಸಾಂನ ನಗಾವ್‌ನಲ್ಲಿ 14 ವರ್ಷದ ಅಪ್ರಾಪ್ತೆಯ ಮೇಲೆ ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿದ ಹೇಯ ಘಟನೆ ಗುರುವಾರ ರಾತ್ರಿ ನಡೆದಿದೆ. ಇದನ್ನು ವಿರೋಧಿಸಿ ರಾಜ್ಯದ ಬೀದಿಗಳಲ್ಲಿ ಜನ ಪ್ರತಿಭಟನೆಗಿಳಿದಿದ್ದಾರೆ.ಸಂತ್ರಸ್ತೆ ಟ್ಯೂಷನ್‌ನಿಂದ ಸೈಕಲ್‌ನಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಆಕೆಯನ್ನು ಸುತ್ತುವರೆದ ಮೂವರು ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾರೆ. ನಂತರ ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯ ಬದಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಆಕೆಯನ್ನು ಆ ಸ್ಥಿತಿಯಲ್ಲಿ ಕಂಡ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ‘ಹಿಂದೂ ಅಪ್ರಾಪ್ತೆ ಮೇಲೆ ಇಂತಹ ಹೀನ ಕೃತ್ಯವೆಸಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಲೋಕಸಭಾ ಚುನಾವಣೆಯ ಬಳಿಕ ಒಂದು ಸಮುದಾಯದ ಜನ ಇಂತಹ ಕೃತ್ಯಗಳನ್ನು ಎಸಗುವುದರಲ್ಲಿ ಸಕ್ರಿಯರಾಗಿದ್ದಾರೆ. ಕಳೆದೆರಡು ತಿಂಗಳುಗಳಲ್ಲಿ ಮಹಿಳೆಯರ ವಿರುದ್ಧ ನಡೆದ 23ನೇ ಅಪರಾಧ ಇದಾಗಿದೆ’ ಎಂದು ಶರ್ಮಾ ಹೇಳಿದ್ದಾರೆ.ಪ್ರಕರಣದ ಸಂಬಂಧ ಈಗಾಗಲೇ ಒಬ್ಬನನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

==

ನಕಲಿ ಎನ್‌ಸಿಸಿ ಕ್ಯಾಂಪಲ್ಲಿ ಲೈಂಗಿಕ ದೌರ್ಜನ್ಯ ಕೇಸಿನ ಪ್ರಮಖ ಆರೋಪಿ ಆತ್ಮಹತ್ಯೆ

ಕೃಷ್ಣಗಿರಿ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಕಲಿ ಎನ್‌ಸಿಸಿ ಕ್ಯಾಂಪ್‌ನಲ್ಲಿ ಹಲವು ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿವರಾಮನ್‌ ಆತ್ಮಹತ್ಯೆ ಮಾಡಿಕೊಂಡ ಆರೋಪಿ. ಆ.19 ರಂದು ಶಿವರಾಮನ್‌ನನ್ನು ಬಂಧಿಸುವುದಕ್ಕೂ ಮುನ್ನ ಆತ ಇಲಿ ಪಾಷಾಣ ಸೇವಿಸಿದ್ದ. ಚಿಕಿತ್ಸೆಗಾಗಿ ತಕ್ಷಣ ಆತನನ್ನು ಕೃಷ್ಣಗಿರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಆತನ ಕಾಲಿನ ಮೂಳೆ ಮುರಿದಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಸೇಲಂನ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದಾನೆ. ಈ ಪ್ರಕರಣ ಸಂಬಂಧ ಶಾಲೆಯ ಪ್ರಾಂಶುಪಾಲ, ಇಬ್ಬರು ಶಿಕ್ಷಕರು, ಕ್ಯಾಂಪ್‌ ಆಯೋಜಕರು ಸೇರಿ 11 ಮಂದಿಯನ್ನು ಬಂಧಿಸಲಾಗಿದೆ.