ಸಾರಾಂಶ
ಶಿಮ್ಲಾ: ಹಿಮಾಚಲ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅವಧಿ ಏ.2ಕ್ಕೆ ಮುಕ್ತಾಯವಾಗಲಿದ್ದು, ಈ ಸೀಟು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಅವರ ಪಾಲಾಗುವ ಸಾಧ್ಯತೆಗಳಿವೆ.
ಈ ಬಗ್ಗೆ ಮಾತನಾಡಿರುವ ರಾಜ್ಯ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಭಾ ಸಿಂಗ್, ‘ಈ ವಿಷಯದ ಕುರಿತಾಗಿ ನಾವು ಕಾಂಗ್ರೆಸ್‌ನ ಹಿರಿಯ ನಾಯಕರಾದ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಾದ್ರಾ ಅವರ ಜೊತೆ ಮಾತನಾಡುತ್ತೇವೆ. ಅವರು ಇಷ್ಟಪಟ್ಟರೆ ಈ ಸ್ಥಾನ ಅವರಿಗೆ ಪಾಲಾಗಲಿದೆ’ ಎಂದು ಹೇಳಿದ್ದಾರೆ.
ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ರಾಜ್ಯಸಭಾ ಚುನಾವಣೆ ನಡೆದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಸಾಧ್ಯತೆಗಳು ದಟ್ಟವಾಗಿವೆ.
ಸೋನಿಯಾ ಹಾಲಿ ಲೋಕಸಭೆ ಸದಸ್ಯೆ ಆಗಿದ್ದರೂ 2024ರ ಲೋಕಸಭೆ ಚುನಾವಣೆಯಲ್ಲಿ ವಯಸ್ಸಿನ ಕಾರಣ ಸ್ಪರ್ಧಿಸುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
ಹಿಮಾಚಲಪ್ರದೇಶದ ಒಂದು ಸೀಟು ಸೇರಿದಂತೆ ಈ ವರ್ಷ ಒಟ್ಟು 56 ರಾಜ್ಯಸಭಾ ಸ್ಥಾನಗಳು ತೆರವಾಗಲಿವೆ. 2018ರಲ್ಲಿ ಹಿಮಾಚಲ ಪ್ರದೇಶದಿಂದ ಜೆ.ಪಿ.ನಡ್ಡಾ ರಾಜ್ಯಸಭೆಗೆ ಆಯ್ಕೆಯಾಗಿದ್ದರು.