ಮೇ 31ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶ

| Published : May 16 2024, 12:48 AM IST / Updated: May 16 2024, 07:03 AM IST

ಸಾರಾಂಶ

ದೇಶದ ಕೃಷಿ ಚಟುವಟಿಕೆ ಮತ್ತು ಆರ್ಥಿಕತೆಯ ಜೀವನಾಡಿಯಾಗಿರುವ ಮುಂಗಾರು ಮಾರುತಗಳು ಮೇ 31ರ ವೇಳೆಗೆ ದೇಶದ ದಕ್ಷಿಣದ ತುತ್ತತುದಿಯ ರಾಜ್ಯವಾದ ಕೇರಳದ ಕರಾವಳಿಯನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ.

ನವದೆಹಲಿ: ದೇಶದ ಕೃಷಿ ಚಟುವಟಿಕೆ ಮತ್ತು ಆರ್ಥಿಕತೆಯ ಜೀವನಾಡಿಯಾಗಿರುವ ಮುಂಗಾರು ಮಾರುತಗಳು ಮೇ 31ರ ವೇಳೆಗೆ ದೇಶದ ದಕ್ಷಿಣದ ತುತ್ತತುದಿಯ ರಾಜ್ಯವಾದ ಕೇರಳದ ಕರಾವಳಿಯನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ.

ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಹವಾಮಾನ ಇಲಾಖೆ, ‘ಈ ವರ್ಷ ನೈಋತ್ಯ ಮುಂಗಾರು ಮೇ 31ರ ವೇಳೆಗೆ ಕೇರಳ ಪ್ರವೇಶಿಸುವ ಸಂಭವವಿದೆ. ಈ ದಿನಾಂಕದಲ್ಲಿ 4 ದಿನ ಹಿಂದು-ಮುಂದು ಆಗಬಹುದು. ಈ ಬಾರಿ ಮುಂಗಾರು ಮುಂಚಿತವಾಗೇನು ಪ್ರವೇಶ ಮಾಡುತ್ತಿಲ್ಲ. ಸಾಮಾನ್ಯವಾಗಿ ಜೂ.1ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶಿಸುವ ವಾಡಿಕೆ ಹೊಂದಿದ್ದು, ಅದೇ ಸಮಯವೇ ಈ ವರ್ಷವೂ ಪಾಲನೆಯಾಗಬಹುದು’ ಎಂದು ಹೇಳಿದೆ.

ಜೂನ್‌- ಸೆಪ್ಟೆಂಬರ್‌ ಅವಧಿಯಲ್ಲಿ ದೇಶದಲ್ಲಿ ಮಳೆ ಸುರಿಸುವ ಮುಂಗಾರು ಮಾರುತಗಳ ಈ ಬಾರಿ ದೀರ್ಘಕಾಲೀನ ಸರಾಸರಿಗಿಂತ ಹೆಚ್ಚಿ ಮಳೆ ಸುರಿಸಬಹುದು ಎಂದು ಕಳೆದ ತಿಂಗಳು ಹವಾಮಾನ ಇಲಾಖೆ ಶುಭ ಸುದ್ದಿ ನೀಡಿತ್ತು.ನೈಋತ್ಯ ಮಾನ್ಸೂನ್ ಭಾರತಕ್ಕೆ ಪ್ರಮುಖ ಮಳೆಯನ್ನು ತರುವ ಕಾಲ. ಇದು ದೇಶದ ವಾರ್ಷಿಕ ಮಳೆಯ ಬಹುಪಾಲನ್ನು ಒದಗಿಸುತ್ತದೆ. ಈ ಅವಧಿಯಲ್ಲಿ ಖಾರೀಫ್ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ಜೂನ್ ಮತ್ತು ಜುಲೈ ತಿಂಗಳ ಅವಧಿಯ ನೈಋತ್ಯ ಮಾನ್ಸೂನ್ ಅತಿ ಮಹತ್ವದ್ದು ಅಂತಲೇ ಪರಿಗಣಿಸಲಾಗುತ್ತದೆ. ನೈಋತ್ಯದಿಂದ ಬೀಸುವ ಮಾನ್ಸೂನ್ ಸಾಮಾನ್ಯವಾಗಿ ಜೂನ್‌ನಲ್ಲಿ ಆರಂಭವಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಕೊನೆಗೊಳ್ಳುತ್ತದೆ.

ಕಳೆದ ವರ್ಷ ಎಷ್ಟು ಮಳೆ ಬಂದಿತ್ತು:  2023ರಲ್ಲಿ ಜೂ.8ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶ ಮಾಡಿದ್ದವು. ಅಂದರೆ ಸಾಮಾನ್ಯ ಪ್ರವೇಶದ ದಿನಕ್ಕಿಂತ 7 ದಿನ ವಿಳಂಬವಾಗಿ ಆಗಮನವಾಗಿತ್ತು. ಕಳೆದ ವರ್ಷ ದೇಶದಲ್ಲಿ ದೀರ್ಘಕಾಲೀನ ಸರಾಸರಿಯ ಶೇ.93ರಷ್ಟು ಮಳೆ ಸುರಿದಿತ್ತು.