ಸಾರಾಂಶ
ಮುಂಬೈ : ಚುನಾವಣಾ ಸೋಲಿನ ಬೆನ್ನಲ್ಲೇ ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ (ಎಂವಿಎ) ಮೈತ್ರಿಕೂಟದಲ್ಲಿ ಬಿರುಕು ಉಂಟಾಗಿದ್ದು, ಕೂಟದಿಂದ ಹೊರಬೀಳುವುದಾಗಿ ಸಮಾಜವಾದಿ ಪಕ್ಷ (ಎಸ್ಪಿ) ಘೋಷಿಸಿದೆ,.
ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಆಪ್ತ ಶಾಸಕ ಮಿಲಿಂದ್ ನಾರ್ವೇಕರ್ ಬಾಬರಿ ಮಸೀದಿ ಧ್ವಂಸ ಮತ್ತು ಸಂಬಂಧಿತ ಪತ್ರಿಕಾ ಜಾಹೀರಾತನ್ನು ಶ್ಲಾಘಿಸಿದ ನಂತರ ಎಸ್ಪಿ ಈ ಘೋಷಣೆ ಮಾಡಿದೆ. ಮಹಾರಾಷ್ಟ್ರದಲ್ಲಿ ಎಸ್ಪಿ ಇಬ್ಬರು ಶಾಸಕರನ್ನು ಹೊಂದಿದೆ.‘ಬಾಬ್ರಿ ಮಸೀದಿ ಕೆಡವಿದ ವರ್ಷಾಚರಣೆ ದಿನವಾದ ಡಿ.6ರಂದು, ಧ್ವಂಸವನ್ನು ಅಭಿನಂದಿಸಿ ಶಿವಸೇನೆ (ಯುಬಿಟಿ) ಪಕ್ಷವು ಪತ್ರಿಕಾ ಜಾಹೀರಾತು ನೀಡಿದೆ. ಠಾಕ್ರೆ ಆಪ್ತರು ಮಸೀದಿ ಧ್ವಂಸ ಶ್ಲಾಘಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ನಾವು ಎಂವಿಎ ಬಿಡುತ್ತಿದ್ದೇವೆ. ಈ ವಿಷಯವನ್ನು ನಮ್ಮ ನೇತಾರ ಅಖಿಲೇಶ್ ಯಾದವ್‌ಗೆ ತಿಳಿಸುತ್ತೇವೆ’ ಎಂದು ಮಹಾರಾಷ್ಟ್ರ ಎಸ್‌ಪಿ ಘಟಕದ ಮುಖ್ಯಸ್ಥ ಅಬು ಅಜ್ಮಿ ಹೇಳಿದರು.
‘ಎಂವಿಎಯಲ್ಲಿ ಯಾರಾದರೂ ಅಂತಹ ಭಾಷೆಯಲ್ಲಿ ಮಾತನಾಡಿದರೆ, ಬಿಜೆಪಿ ಮತ್ತು ಅವರ ನಡುವಿನ ವ್ಯತ್ಯಾಸವೇನು? ನಾವು ಅವರೊಂದಿಗೆ ಏಕೆ ಉಳಿಯಬೇಕು?’ ಅಜ್ಮಿ ಕೇಳಿದರು.