ಸಾರಾಂಶ
ಲಖನೌ: ಬೇಸಿಗೆಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷ 16 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಚುನಾವಣೆ ಘೋಷಣೆಗೂ ಮುನ್ನವೇ ಪಟ್ಟಿ ಬಿಡುಗಡೆ ಮಾಡಿದ ದೇಶದ ಮೊದಲ ಪಕ್ಷ ಎಂಬ ಖ್ಯಾತಿಗೆ ಎಸ್ಪಿ ಭಾಜನವಾಗಿದೆ.
ಎಸ್‌ಪಿ, ಇಂಡಿಯಾ ಕೂಟದ ಪ್ರಮುಖ ಅಂಗಪಕ್ಷವಾಗಿದ್ದು, ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 11 ಸ್ಥಾನಗಳನ್ನು ಮಿತ್ರಪಕ್ಷ ಕಾಂಗ್ರೆಸ್‌ಗೆ ಬಿಟ್ಟುಕೊಡುವುದಾಗಿ ಹೇಳಿತ್ತು. ಅದರ ಬೆನ್ನಲ್ಲೇ ಪಟ್ಟಿ ಬಿಡುಗಡೆ ಮಾಡಿದೆ.
ಹಾಲಿ ಸಂಸದರಾದ ಎಸ್ಪಿ ನೇತಾರ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್, ರವಿದಾಸ್ ಮೆಹ್ರೋತ್ರಾ ಅವರಿಗೂ ಸ್ಥಾನ ನೀಡಲಾಗಿದೆ. ಡಿಂಪಲ್ ಮೈನ್‌ಪುರಿಯಿಂದ, ಶಫೀಕರ್ ರೆಹಮಾನ್ ಬಾರ್ಕ್ ಅವರು ಸಂಣಲ್‌ನಿಂದ, ರವಿದಾಸ್ ಮೆಹ್ರೋತ್ರಾ ಅವರು ಲಖನೌ ಸೆಂಟ್ರಲ್‌ನಿಂದ ಸ್ಪರ್ಧಿಸಲಿದ್ದಾರೆ.
ಅಲ್ಲದೇ ಹಾಲಿ ಶಾಸಕರಾದ ಕಟೇಹರಿ ಅವರಿಗೆ ಅಂಬೇಡ್ಕರ್ ನಗರ ಜಿಲ್ಲಾ ಕ್ಷೇತ್ರದಿಂದ, ಲಾಲ್ಜಿ ವರ್ಮಾ ಅವರಿಗೆ ಅಂಬೇಡ್ಕರ್ ನಗರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಪಕ್ಷದ ಹಿರಿಯ ನಾಯಕ ರಾಮ್‌ಗೋಪಾಲ್ ಯಾದವ್ ಅವರ ಪುತ್ರ ಅಕ್ಷಯ್ ಯಾದವ್ ಅವರಿಗೆ ಈ ಬಾರಿ ಫಿರೋಜಾಬಾದ್‌ನಿಂದ ಟಿಕೆಟ್ ನೀಡಲಾಗಿದೆ.
ಚಂಡೀಗಢ ಮೇಯರ್ ಚುನಾವಣೆ: ಇಂಡಿಯಾ ಕೂಟಕ್ಕೆ ಸೋಲು, ಬಿಜೆಪಿಗೆ ಜಯ
ಮಂಗಳವಾರ ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮನೋಜ್ ಸೋಂಕರ್ ಅವರು ಆಮ್ ಆದ್ಮಿ ಪಕ್ಷದ (ಆಪ್) ಕುಲದೀಪ್ ಕುಮಾರ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ.
ಇಂಡಿಯಾ ಕೂಟವು (ಆಪ್-ಕಾಂಗ್ರೆಸ್) ಒಂದಾಗಿ ಮೊದಲ ಸಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದವು. ಆದರೆ ಈಗ ಉಂಟಾಗಿರುವ ಸೋಲು ಅವುಗಳಿಗೆ ಹಿನ್ನಡೆಯಾಗಿದೆ.
ಸೋಂಕರ್ 16 ಮತಗಳನ್ನು ಪಡೆದರೆ, ಕುಮಾರ್ 12 ಮತಗಳನ್ನು ಗಳಿಸಿದರು. ಆಪ್ ಹಾಗೂ ಕಾಂಗ್ರೆಸ್‌ನ 8 ಮತಗಳನ್ನು ಕುಲಗೆಟ್ಟಿವೆ ಎಂದು ಸಾರಲಾಯಿತು. ಇಲ್ಲಿ ಆಪ್ 13 ಹಾಗೂ ಕಾಂಗ್ರೆಸ್ 7 ಸೀಟು ಹೊಂದಿದ್ದವು.
ಇದು ವಂಚನೆ, ಹೈಕೋರ್ಟ್‌ಗೆ ಮೊರೆ: ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆ, ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಚುನಾವಣೆಯನ್ನು ವಂಚನೆ ಎಂದು ಕರೆದಿದ್ದಾರೆ.
ಈ ನಡುವೆ ಆಪ್ ಹೈಕೋರ್ಟ್ ಮೊರೆ ಹೋಗುವ ಘೋಷಣೆ ಮಾಡಿದೆ.‘ಚುನಾವಣಾಧಿಕಾರಿಯು ವಿಪಕ್ಷಗಳ ಮತಪತ್ರಗಳ ಮೇಲೆ ಏನೋ ಮಾರ್ಕಿಂಗ್ ಮಾಡುವುದು ಸಿಸಿಟೀವಿಯಲ್ಲಿ ದಾಖಲಾಗಿದೆ.
ಅಧಿಕಾರಿಯು ವಿಪಕ್ಷಗಳ ಮತಗಳನ್ನು ತಾವಾಗೇ ಕುಲಗೆಡುವಂತೆ ಮಾಡಿದ್ದಾರೆ. ಹೀಗಾಗಿ ಚುನಾವಣೆ ಪ್ರಶ್ನಿಸಿ ಕೋರ್ಟ್ ಮೊರೆ ಹೋಗುತ್ತೇವೆ’ ಎಂದು ಆಪ್ ನಾಯಕರು ಹೇಳಿದ್ದಾರೆ.