ಸಾರಾಂಶ
ಪುಣೆ : ಹನ್ನೊಂದು ವರ್ಷಗಳ ಹಿಂದೆ ಮಹಾರಾಷ್ಟ್ರದ ಪುಣೆಯಲ್ಲಿ ಸಂಭವಿಸಿದ್ದ ವಿಚಾರವಾದಿ ಹಾಗೂ ಮೂಢನಂಬಿಕೆ ವಿರೋಧಿ ಹೋರಾಟಗಾರ ಡಾ.ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿರುವ ವಿಶೇಷ ನ್ಯಾಯಾಲಯ, ಇಬ್ಬರು ಹಂತಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸಾಕ್ಷ್ಯಗಳ ಕೊರತೆಯಿಂದ ಮೂವರನ್ನು ಖುಲಾಸೆಗೊಳಿಸಿದೆ.
ಕಿಕ್ಕಿರಿದ ಕೋರ್ಟ್ ಹಾಲ್‌ನಲ್ಲಿ ಶುಕ್ರವಾರ ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಪಿ.ಪಿ.ಜಾಧವ್, ಆರೋಪಿ ಸಚಿನ್ ಆಂದುರೆ ಹಾಗೂ ಶರದ್ ಕಲಾಸ್ಕರ್ ಅವರು ದಾಭೋಲ್ಕರ್ ಅವರನ್ನು ಹತ್ಯೆಗೈದಿರುವುದನ್ನು ಸಿಬಿಐ ಸಾಬೀತುಪಡಿಸಿದೆ. ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5 ಲಕ್ಷ ರು. ದಂಡ ವಿಧಿಸಲಾಗುವುದು. ಇನ್ನಿತರ ಮೂವರು ಆರೋಪಿಗಳಾದ ವೀರೇಂದ್ರಸಿನ್ಹ ತಾವ್ಡೆ, ಸಂಜೀವ್ ಪುಣಾಲೇಕರ್ ಹಾಗೂ ವಿಕ್ರಂ ಭಾವೆ ವಿರುದ್ಧದ ಆರೋಪ ಸಾಬೀತುಪಡಿಸುವಲ್ಲಿ ಸಿಬಿಐ ವಿಫಲವಾಗಿದೆ. ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ತಿಳಿಸಿದರು.
ವಾಯುವಿಹಾರಕ್ಕೆ ತೆರಳಿದ್ದಾಗ ಗುಂಡಿಕ್ಕಿ ಹತ್ಯೆ:
2013ರ ಆ.20ರಂದು ಪುಣೆಯ ಓಂಕಾರೇಶ್ವರ ಸೇತುವೆ ಮೇಲೆ ಬೆಳಗಿನ ವಾಯುವಿಹಾರಕ್ಕೆ ಡಾ.ನರೇಂದ್ರ ದಾಭೋಲ್ಕರ್ (67) ತೆರಳಿದ್ದಾಗ ಎರಡು ಬೈಕ್‌ನಲ್ಲಿ ಬಂದ ಹಂತಕರು ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. 2015ರಲ್ಲಿ ಸಂಭವಿಸಿದ ಮಹಾರಾಷ್ಟ್ರದ ಇನ್ನೊಬ್ಬ ವಿಚಾರವಾದಿ ಗೋವಿಂದ ಪಾನ್ಸರೆ ಹತ್ಯೆ, ಅದೇ ವರ್ಷ ಸಂಭವಿಸಿದ ಕರ್ನಾಟಕದ ವಿಚಾರವಾದಿ ಡಾ.ಎಂ.ಎಂ.ಕಲಬುರ್ಗಿ ಹಾಗೂ 2017ರಲ್ಲಿ ಸಂಭವಿಸಿದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗಳ ಸರಣಿಯಲ್ಲಿ ದಾಭೋಲ್ಕರ್ ಹತ್ಯೆ ಮೊದಲನೆಯದಾಗಿತ್ತು. ಈ ಹತ್ಯೆಗಳು ವಿಚಾರವಾದಿಗಳ ವಲಯದಲ್ಲಿ ಆತಂಕ ಸೃಷ್ಟಿಸಿದ್ದವು. ಪಾನ್ಸರೆ, ಕಲಬುರ್ಗಿ ಹಾಗೂ ಗೌರಿ ಹತ್ಯೆ ಪ್ರಕರಣಗಳ ವಿಚಾರಣೆ ಇನ್ನೂ ನಡೆಯುತ್ತಿದೆ.
ಭಯೋತ್ಪಾದನೆ ಆರೋಪದಿಂದ ಖುಲಾಸೆ:
ದಾಭೋಲ್ಕರ್ ಹಂತಕರ ವಿರುದ್ಧ ಪೊಲೀಸರು ಹೊರಿಸಿದ್ದ ಭಯೋತ್ಪಾದನೆಯ ಆರೋಪಗಳನ್ನು ಕೋರ್ಟ್ ತಿರಸ್ಕರಿಸಿದೆ. ಕೊಲೆ ಮತ್ತು ಕೊಲೆಯ ಉದ್ದೇಶದ ಆರೋಪಗಳನ್ನು ಮಾತ್ರ ಕೋರ್ಟ್ ಒಪ್ಪಿಕೊಂಡಿದೆ.
ತೀರ್ಪಿಗೆ ಪ್ರತಿಕ್ರಿಯಿಸಿರುವ ದಾಭೋಲ್ಕರ್ ಮಕ್ಕಳು, ‘ಹತ್ಯೆಯ ಮಾಸ್ಟರ್‌ಮೈಂಡ್‌ಗಳು ಇನ್ನೂ ತಪ್ಪಿಸಿಕೊಂಡಿದ್ದಾರೆ. ನಾವು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ’ ಎಂದು ತಿಳಿಸಿದ್ದಾರೆ.