ಬಾಡಿಗೆ ತಾಯ್ತನದ ಪ್ರಕರಣದಲ್ಲಿ ವೀರ್ಯ ಅಥವಾ ಅಂಡಾಣು ದಾನ ಮಾಡಿದವರಿಗೆ ಮಕ್ಕಳ ಮೇಲೆ ಹಕ್ಕಿಲ್ಲ: ಕೋರ್ಟ್‌

| Published : Aug 14 2024, 12:48 AM IST / Updated: Aug 14 2024, 08:39 AM IST

ಬಾಡಿಗೆ ತಾಯ್ತನದ ಪ್ರಕರಣದಲ್ಲಿ ವೀರ್ಯ ಅಥವಾ ಅಂಡಾಣು ದಾನ ಮಾಡಿದವರಿಗೆ ಮಕ್ಕಳ ಮೇಲೆ ಹಕ್ಕಿಲ್ಲ: ಕೋರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

‘ಬಾಡಿಗೆ ತಾಯ್ತನದ ಪ್ರಕರಣದಲ್ಲಿ ವೀರ್ಯ ಅಥವಾ ಅಂಡಾಣು ದಾನ ಮಾಡಿದ ವ್ಯಕ್ತಿಗಳು, ನಂತರ ಜನಿಸುವ ಮಕ್ಕಳ ಮೇಲೆ ಜೈವಿಕ ಹಕ್ಕು ಸಾಧಿಸುವಂತಿಲ್ಲ’ ಎಂದು ಬಾಂಬೆ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಮುಂಬೈ: ‘ಬಾಡಿಗೆ ತಾಯ್ತನದ ಪ್ರಕರಣದಲ್ಲಿ ವೀರ್ಯ ಅಥವಾ ಅಂಡಾಣು ದಾನ ಮಾಡಿದ ವ್ಯಕ್ತಿಗಳು, ನಂತರ ಜನಿಸುವ ಮಕ್ಕಳ ಮೇಲೆ ಜೈವಿಕ ಹಕ್ಕು ಸಾಧಿಸುವಂತಿಲ್ಲ’ ಎಂದು ಬಾಂಬೆ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಇದೇ ವೇಳೆ, ಅಂಡಾಣು ದಾನಿಯ ಅಡ್ಡಿಯಿಂದಾಗಿ ಮಕ್ಕಳ ಭೇಟಿಯಿಂದ ವಂಚಿತವಾಗಿದ್ದ ತಾಯಿಗೆ, ಆಕೆಯ 5 ವರ್ಷದ ಅವಳಿ ಮಕ್ಕಳನ್ನು ಭೇಟಿ ಆಗಲು ಅವಕಾಶ ನೀಡಿದೆ.

ಏನಿದು ಪ್ರಕರಣ?:ಮಹಿಳೆಯೊಬ್ಬರು ತಮಗೆ ಮಕ್ಕಳಾಗದ ಹಿನ್ನೆಲೆಯಲ್ಲಿ ತಮ್ಮ ಸೋದರಿಯ ಅಂಡಾಣು ದಾನ ಪಡೆದು ಗರ್ಭ ಧರಿಸಿ ಅವಳಿ ಮಕ್ಕಳ ಹೆತ್ತಿದ್ದರು. ಇದಾದ ಕೆಲ ಸಮಯದಲ್ಲೇ ಸೋದರಿ ಕುಟುಂಬ ಅಪಘಾತಕ್ಕೆ ತುತ್ತಾಗಿತ್ತು. ಈ ವೇಳೆ ಆಕೆಯ ಪತಿ ಮತ್ತು ಮಕ್ಕಳು ಸಾವನ್ನಪ್ಪಿದ್ದರು. ಹೀಗಾಗಿ ಆಕೆ ತನ್ನ ಅಕ್ಕನ ಮನೆಯಲ್ಲೇ ವಾಸವಿದ್ದರು.

ಇದಾದ ಕೆಲ ಸಮಯದಲ್ಲಿ ಪತ್ನಿಯೊಂದಿಗೆ ವಿರಸದ ಕಾರಣ, ಅವಳಿ ಮಕ್ಕಳ ತಂದೆ ಹೇಳದೇ ಕೇಳದೇ ತನ್ನ ಅವಳಿ ಮಕ್ಕಳೊಂದಿಗೆ ಮನೆಬಿಟ್ಟು ಹೋಗಿ ಬೇರೊಂದು ಮನೆಯಲ್ಲಿ ವಾಸ ಆರಂಭಿಸಿದ್ದರು. ಜೊತೆಗೆ ಅಂಡಾಣು ದಾನ ಮಾಡಿದ್ದ ಸೋದರಿ ಕೂಡಾ ಅದೇ ಮನೆ ಸೇರಿಕೊಂಡಿದ್ದಳು. ಬಳಿಕ ನಿಜವಾದ ತಾಯಿಗೆ ಮಕ್ಕಳನ್ನು ಭೇಟಿ ಮಾಡುವ ಅವಕಾಶ ನಿರಾಕರಿಸಲಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಮಕ್ಕಳ ತಾಯಿ ಕೋರ್ಟ್‌ ಮೆಟ್ಟಿಲೇರಿದ್ದರು. ಈ ವೇಳೆ ಅವಳಿ ಮಕ್ಕಳ ತಂದೆ, ‘ಮಕ್ಕಳಿಗೆ ಅಂಡಾಣು ದಾನ ಮಾಡಿದ್ದ ಕಾರಣ ತನ್ನ ಪತ್ನಿಯ ಸೋದರಿಗೂ ಮಕ್ಕಳ ಮೇಲೆ ಜೈವಿಕ ಹಕ್ಕಿದೆ. ಪತ್ನಿಗೆ ಮಕ್ಕಳ ಮೇಲೆ ಯಾವುದೇ ಹಕ್ಕಿಲ್ಲ’ ಎಂದು ವಾದಿಸಿದ್ದರು. ಆದರೆ ಈ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ, ಹೆಚ್ಚೆಂದರೆ ಆಕೆ ಆನುವಂಶಿಕ ತಾಯಿ ಆಗಬಹುದೇ ಹೊರತೂ ಜೈವಿಕ ಹಕ್ಕನ್ನು ಸಾಧಿಸುವಂತಿಲ್ಲ ಎಂದು ಹೇಳಿ ತಾಯಿಗೆ ಮಕ್ಕಳನ್ನು ಭೇಟಿ ಮಾಡುವ ಅವಕಾಶ ಕಲ್ಪಿಸಿದೆ.