ಗಡಿಯನ್ನೇ ತಿರುಚಿದ್ದ ಗಣಿ ರೆಡ್ಡಿಗೆ 7 ವರ್ಷ ಜೈಲು

| Published : May 07 2025, 12:45 AM IST

ಸಾರಾಂಶ

ಓಬುಳಾಪುರಂ ಕಂಪನಿಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೈದರಾಬಾದ್‌ನ ನಾಂಪಲ್ಲಿ ಸಿಬಿಐ ನ್ಯಾಯಾಲಯವು ಕರ್ನಾಟಕದ ಗಂಗಾವತಿ ಶಾಸಕ, ಮಾಜಿ ಸಚಿವ, ‘ಗಣಿ ಧಣಿ’ ಗಾಲಿ ಜನಾರ್ದನ ರೆಡ್ಡಿಗೆ ಶಾಕ್‌ ನೀಡಿದೆ. ಸುಮಾರು 14 ವರ್ಷಗಳಷ್ಟು ಹಳೆಯ ಪ್ರಕರಣದಲ್ಲಿ ರೆಡ್ಡಿ ಸೇರಿ ನಾಲ್ವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

- ಓಬುಳಾಪುರಂ ಅಕ್ರಮ ಗಣಿಗಾರಿಕೆ ಕೇಸ್‌ । ಹೈದರಾಬಾದ್‌ ಸಿಬಿಐ ಕೋರ್ಟ್‌ ತೀರ್ಪು, ರೆಡ್ಡಿ ಮತ್ತೆ ಜೈಲಿಗೆ- ಕರ್ನಾಟಕ- ಆಂಧ್ರ ಗಡಿ ತಿರುಚಿ ಅಕ್ರಮ ಗಣಿಗಾರಿಕೆ ನಡೆಸಿ 884 ಕೋಟಿ ರು. ನಷ್ಟ ಮಾಡಿದ್ದ ಪ್ರಕರಣ

=

ಏನಿದು ಪ್ರಕರಣ?- ಆಂಧ್ರಪ್ರದೇಶದ ಮಲಪನಗುಡಿಯ 68.05 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ರೆಡ್ಡಿಗೆ ಅಲ್ಲಿನ ಸರ್ಕಾರದ ಅನುಮತಿ ಸಿಕ್ಕಿತ್ತು- ಆದರೆ ಕರ್ನಾಟಕ- ಆಂಧ್ರ ಗಡಿಯನ್ನೇ ರೆಡ್ಡಿ ಕಂಪನಿ ಬದಲಿಸಿತ್ತು. ಆಂಧ್ರದಲ್ಲಿ ಅನುಮತಿ ಪಡೆದು ಕರ್ನಾಟಕದಲ್ಲಿ ಗಣಿಗಾರಿಕೆ ನಡೆಸಿತ್ತು- ತಮಗೆ ಸಿಕ್ಕಿರುವ ಪ್ರದೇಶದಲ್ಲಿ ರೆಡ್ಡಿ ಕಂಪನಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದೆ ಎಂದು ಟಪಾಲ್‌ ಗಣೇಶ್‌ ದೂರು ನೀಡಿದ್ದರು- ಆಂಧ್ರ ಸರ್ಕಾರ 3 ಐಎಫ್‌ಎಸ್ ಅಧಿಕಾರಿಗಳ ತಂಡ ರಚಿಸಿ ವರದಿಯನ್ನು ಪಡೆದಿತ್ತು. ಆ ವರದಿಯಲ್ಲಿ ಅಕ್ರಮ ಸಾಬೀತಾಗಿತ್ತು- ಬಳಿಕ ಆಂಧ್ರ ಸರ್ಕಾರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು. 2011ರ ಸೆ.5ರಂದು ರೆಡ್ಡಿ ಅವರನ್ನು ಸಿಬಿಐ ಬಂಧಿಸಿತ್ತು

--

ತೀರ್ಪು ಘೋಷಣೆ ಬಳಿಕ ರೆಡ್ಡಿ ಕಣ್ಣೀರುಹೈದರಾಬಾದ್: ಇಲ್ಲಿನ ನಾಂಪಲ್ಲಿ ನ್ಯಾಯಾಲಯ ಜನಾರ್ದನ ರಡ್ಡಿ ಅವರಿಗೆ 7 ವರ್ಷ ಶಿಕ್ಷೆ ಘೋಷಿಸುತ್ತಿದ್ದಂತೆಯೇ ಅವರು ಕಣ್ಣೀರು ಹಾಕಿದರು. ‘ಈಗಾಗಲೇ ನಾನು 3.5 ವರ್ಷ ಶಿಕ್ಷೆ ಅನುಭವಿಸಿರುವೆ. ಜನಪ್ರತಿನಿಧಿಯಾಗಿ ಕೆಲಸ ಮಾಡಿರುವೆ’ ಎಂದು ಕೋರ್ಟ್‌ ಮುಂದೆ ಹೇಳಿದರು. ಆಗ ನ್ಯಾಯಾಲಯವು ನೀವು ಇನ್ನಷ್ಟು ಶಿಕ್ಷೆಗೆ ಅರ್ಹರಿದ್ದೀರಿ ಎಂದು ಹೇಳಿತು.

--

ರೆಡ್ಡಿ ಶಾಸಕತ್ವ ರದ್ದಾಗುತ್ತಾ?ಕ್ರಿಮಿನಲ್‌ ಅಪರಾಧ ಪ್ರಕರಣಗಳಲ್ಲಿ 2 ವರ್ಷಕ್ಕಿಂತ ಮೇಲ್ಪಟ್ಟು ಶಿಕ್ಷೆಯಾದವರ ಶಾಸನಸಭೆ ಸದಸ್ಯತ್ವ ತನ್ನಿಂತಾನೆ ರದ್ದಾಗಲಿದೆ. ಇದೀಗ ಜನಾರ್ದನ ರೆಡ್ಡಿಗೆ 7 ವರ್ಷ ಶಿಕ್ಷೆಯಾಗಿದೆ. ಅವರು ಹೈಕೋರ್ಟ್‌ ಮೊರೆ ಹೋಗಲು ಸಜ್ಜಾಗಿದ್ದಾರೆ. ಒಂದು ವೇಳೆ ನ್ಯಾಯಾಲಯ ಸಿಬಿಐ ಕೋರ್ಟ್ ತೀರ್ಪಿಗೆ ತಡೆ ನೀಡದೇ ಹೋದರೆ, ಶಾಸಕತ್ವಕ್ಕೆ ಕುತ್ತು ಬರಲಿದೆ.

--

14 ವರ್ಷ ಬಳಿಕ

ಮತ್ತೆ ಜೈಲಿಗೆ

2011ರ ಸೆ.5ರಂದು ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಅಕ್ರಮ ಗಣಿಗಾರಿಕೆ ಕೇಸಲ್ಲಿ ಬಂಧಿಸಿತ್ತು. ಬಳಿಕ ಅವರು ಮೂರೂವರೆ ವರ್ಷ ಜೈಲಿನಲ್ಲಿದ್ದರು. ಇದೀಗ 14 ವರ್ಷ ಬಳಿಕ ಮತ್ತೆ ಜೈಲು ಸೇರಿದ್ದಾರೆ.

---

ಹೈದರಾಬಾದ್‌: ಓಬುಳಾಪುರಂ ಕಂಪನಿಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೈದರಾಬಾದ್‌ನ ನಾಂಪಲ್ಲಿ ಸಿಬಿಐ ನ್ಯಾಯಾಲಯವು ಕರ್ನಾಟಕದ ಗಂಗಾವತಿ ಶಾಸಕ, ಮಾಜಿ ಸಚಿವ, ‘ಗಣಿ ಧಣಿ’ ಗಾಲಿ ಜನಾರ್ದನ ರೆಡ್ಡಿಗೆ ಶಾಕ್‌ ನೀಡಿದೆ. ಸುಮಾರು 14 ವರ್ಷಗಳಷ್ಟು ಹಳೆಯ ಪ್ರಕರಣದಲ್ಲಿ ರೆಡ್ಡಿ ಸೇರಿ ನಾಲ್ವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ತೀರ್ಪು ಪ್ರಕಟವಾದ ಬೆನ್ನಲ್ಲೇ ಕೋರ್ಟ್‌ನಲ್ಲಿ ಹಾಜರಿದ್ದ ಜನಾರ್ದನ ರೆಡ್ಡಿ ಸೇರಿ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಜೈಲಿಗೆ ಕಳಿಸಲಾಗಿದೆ.

ಈ ನಡುವೆ ಸಿಬಿಐ ಕೋರ್ಟ್‌ನ ತೀರ್ಪು ಪ್ರಶ್ನಿಸಿ ಬುಧವಾರ ತೆಲಂಗಾಣ ಹೈಕೋರ್ಟ್‌ಗೆ ರೆಡ್ಡಿ ಪರ ವಕೀಲರು ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಒಂದು ವೇಳೆ ಹೈಕೋರ್ಟು ರೆಡ್ಡಿ ಶಿಕ್ಷೆಗೆ ತಕ್ಷಣವೇ ತಡೆ ನೀಡದಿದ್ದರೆ, ಅವರ ಶಾಸಕ ಸ್ಥಾನ ಅನರ್ಹವಾಗಲಿದೆ. 2 ಅಥವಾ 2ಕ್ಕಿಂತ ಹೆಚ್ಚು ವರ್ಷ ಕ್ರಿಮಿನಲ್‌ ಕೇಸಲ್ಲಿ ದೋಷಿ ಆದ ಜನಪ್ರತಿನಿಧಿಗಳು ಶಾಸನ ಸಭೆಯಿಂದ ಅನರ್ಹರಾಗುವ ಕಾನೂನಿದೆ.

ಇತರರೂ ದೋಷಿ:

ರೆಡ್ಡಿ ಅವರಲ್ಲದೆ ಅವರ ಭಾವ ಮತ್ತು ಓಬುಳಾಪುರಂ ಅದಿರು ಕಂಪನಿ (ಒಎಂಸಿ) ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ (ಎ1), ಆಗಿನ ಗಣಿಗಾರಿಕೆ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ವಿ.ಡಿ.ರಾಜಗೋಪಾಲ್‌ (ಎ3) ಮತ್ತು ರೆಡ್ಡಿ ಆಪ್ತ ಸಹಾಯಕ ಮಹಫೂಜ್‌ ಅಲಿ ಖಾನ್‌ (ಎ7) ದೋಷಿಗಳು ಎಂದು ಘೋಷಿಸಿದೆ. ಓಬುಳಾಪುರಂ ಅದಿರು ಕಂಪನಿಗೆ 1 ಲಕ್ಷ ದಂಡ ವಿಧಿಸಿರುವ ಕೋರ್ಟ್‌, ಉಳಿದವರಿಗೆ ತಲಾ 10 ಸಾವಿರ ರು. ದಂಡ ವಿಧಿಸಿದೆ.

ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾ.ಟಿ.ರಘು ಅವರು, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಮಾಜಿ ಸಚಿವೆ ಸಬಿತಾ ಇಂದ್ರ ರೆಡ್ಡಿ ಮತ್ತು ಮಾಜಿ ಅಧಿಕಾರಿ ಕುರೂಪಾನಂದನ್‌ ಅವರನ್ನು ಖುಲಾಸೆಗೊಳಿಸಿದ್ದಾರೆ.

ಶಿಕ್ಷೆ ವಿರೋಧಿಸಿದ ರೆಡ್ಡಿ:

ವಿಚಾರಣೆ ವೇಳೆ ಜನಾರ್ದನ ರೆಡ್ಡಿ ಅವರು, ‘ಈಗಾಗಲೇ ನಾನು 3.5 ವರ್ಷ ಶಿಕ್ಷೆ ಅನುಭವಿಸಿರುವೆ. ಜನಪ್ರತಿನಿಧಿಯಾಗಿ ಕೆಲಸ ಮಾಡಿರುವೆ’ ಎಂದು ಕೋರ್ಟ್‌ ಮುಂದೆ ಹೇಳಿದರು. ಆಗ ನ್ಯಾಯಾಲಯವು ನೀವು ಇನ್ನಷ್ಟು ಶಿಕ್ಷೆಗೆ ಅರ್ಹರಿದ್ದೀರಿ ಎಂದು ಹೇಳಿತು.

ಪ್ರಕರಣದ ಹಿನ್ನೆಲೆ:

ಕರ್ನಾಟಕ ಮತ್ತು ಆಂಧ್ರದ ಗಡಿಯಲ್ಲಿರುವ ಓಬುಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದ ಕೇಸ್ ಇದಾಗಿದೆ. ಆಂಧ್ರ ಮತ್ತು ಕರ್ನಾಟಕ ಗಡಿಯಲ್ಲಿರುವ ಬಳ್ಳಾರಿ ಮೀಸಲು ಅರಣ್ಯದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿ ಗಡಿಯನ್ನು ಬದಲಾಯಿಸಿದ ಆರೋಪವನ್ನು ಓಬುಳಾಪುರಂ ಗಣಿ ಕಂಪನಿ ಮುಖ್ಯಸ್ಥರಾಗಿದ್ದ ಜನಾರ್ದನ ರೆಡ್ಡಿ ಹಾಗೂ ಇತರ ಆರೋಪಿಗಳ ಮೇಲೆ ಹೊರಿಸಲಾಗಿತ್ತು. ಈ ಮೂಲಕ 2007 ಮತ್ತು 2009ರ ನಡುವೆ ನಡೆದ ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ 884 ಕೋಟಿ ರು. ನಷ್ಟವಾಗಿದೆ ಎಂದು ಸಿಬಿಐ ಪರ ವಕೀಲರು ಆರೋಪಿಸಿದ್ದರು.

2009ರಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಮೊದಲ ಕೇಸ್‌ ದಾಖಲಾಗಿದ್ದು, ಆಗ 8 ಮಂದಿ ವಿರುದ್ಧ ಆರೋಪ ಹೊರಿಸಲಾಗಿತ್ತು. ಇದರಲ್ಲಿ ಐದು ಮಂದಿ ಆರೋಪಿಗಳೆಂದು ನ್ಯಾಯಾಲಯ ಘೋಷಿಸಿತ್ತು. ಇವರಲ್ಲಿ ಆರ್‌.ಲಿಂಗಾರೆಡ್ಡಿ ಮೃತಪಟ್ಟಿದ್ದು, ಮತ್ತೊಬ್ಬ ಆರೋಪಿ ಗಣಿ ಇಲಾಖೆಯ ಮಾಜಿ ಪ್ರಧಾನ ಕಾರ್ಯದರ್ಶಿ ವೈ.ಶ್ರೀಲಕ್ಷ್ಮಿ ಅವರನ್ನು ತೆಲಂಗಾಣ ನ್ಯಾಯಾಲಯವು 2022ರಲ್ಲಿ ಪ್ರಕರಣದಿಂದ ಬಿಡುಗಡೆ ಮಾಡಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಡಿ.3, 2011ರಂದು ಮೊದಲ ಚಾರ್ಜ್‌ಶೀಟ್‌ ಸಲ್ಲಿಸಿತ್ತು. ಆ ಬಳಿಕ ಜನಾರ್ದನ ರೆಡ್ಡಿ, ರಾಜಗೋಪಾಲ, ದಿ.ಆರ್‌.ಲಿಂಗಾರೆಡ್ಡಿ ಮತ್ತು ಓಬುಳಾಪುರಂ ಗಣಿ ಕಂಪನಿ ಮೇಲೆ 3 ಪೂರಕ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ 3400ಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೀಲಿಸಿರುವ ಸಿಬಿಐ, 219 ಮಂದಿ ಸಾಕ್ಷ್ಯಗಳ ವಿಚಾರಣೆ ನಡೆಸಿ ಚಾರ್ಜ್‌ಶೀಟ್‌ ಹಾಕಿತ್ತು.

2011ರಲ್ಲಿ ಸೆರೆಯಾಗಿದ್ದ ರೆಡ್ಡಿ:

ಜನಾರ್ದನ ರೆಡ್ಡಿ ಅವರು 2011ರಲ್ಲಿ ಗಣಿ ಅಕ್ರಮ ಸಂಬಂಧ ಸಿಬಿಐನಿಂದ ಬಂಧನಕ್ಕೊಳಗಾಗಿದ್ದರು. 2015ರಲ್ಲಿ ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಆ ಬ‍ಳಿಕ ಕಲ್ಯಾಣ ಪ್ರಗತಿ ಪಕ್ಷ ಕಟ್ಟಿದ್ದ ಅವರು ಗಂಗಾವತಿ ಕ್ಷೇತ್ರದಿಂದ ಚುನಾವಣೆಗೆ ನಿಂತು ಶಾಸಕರಾಗಿ ಆಯ್ಕೆಯಾಗಿದ್ದರು. ಕಳೆದ ವರ್ಷವಷ್ಟೇ ಅವರು ವಾಪಸ್‌ ಬಿಜೆಪಿ ಸಹ ಸದಸ್ಯರಾಗಿ ಮಾತೃಪಕ್ಷಕ್ಕೆ ಮರಳಿದ್ದರು.

--