ಸಾರಾಂಶ
ಚೆನ್ನೈ: ಲೋಕಸಭಾ ಕ್ಷೇತ್ರ ಮರುವಿಂಗಡಣೆಯನ್ನು ತೀವ್ರವಾಗಿ ವಿರೋಧಿಸುತ್ತಿರುವ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಇದಕ್ಕೆ ಬೆಂಬಲ ಯಾಚಿಸುವ ಸಲುವಾಗಿ ಕರ್ನಾಟಕ ಸೇರಿ 7 ರಾಜ್ಯಗಳಿಗೆ ತಮ್ಮ ನಾಯಕರನ್ನು ಕಳುಹಿಸಸಲು ನಿರ್ಧರಿಸಿದ್ದಾರೆ.
ಇದರ ಭಾಗವಾಗಿ ಎನ್‌ಡಿಎಯೇತರರ ಆಡಳಿತವಿರುವ ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಪಂಜಾಬ್, ತೆಲಂಗಾಣ ಹಾಗೂ ಬಿಜೆಪಿ ಸರ್ಕಾರವಿರುವ ಒಡಿಶಾಗೆ ಡಿಎಂಕೆಯ ಹಿರಿಯ ನಾಯಕರು ತೆರಳಲಿದ್ದಾರೆ. ಇತ್ತೀಚೆಗೆ ಸ್ಟಾಲಿನ್ ಕೆಲ ರಾಜ್ಯಗಳ ಸಿಎಂಗಳಿಗೆ ಪತ್ರವನ್ನೂ ಬರೆದಿದ್ದರು.
ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರಗಳ ಮರುವಿಂಗಡಣೆಯಿಂದಾಗಿ ತಮಿಳುನಾಡು ಸೇರಿ, ಕುಟುಂಬ ಯೋಜನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ ರಾಜ್ಯಗಳ ಲೋಕಸಭಾ ಸ್ಥಾನಗಳು ಕಡಿಮೆಯಾಗಿ ಅನ್ಯಾಯವಾಗುತ್ತದೆ ಎಂದು ಡಿಎಂಕೆ ಆರೋಪಿಸುತ್ತಿದೆ.
ಹೋಳಿ ದಿನ ಮುಸ್ಲಿಮರು ಮನೇಲೇ ಇರಿ: ಬಿಹಾರ ಶಾಸಕ ವಿವಾದ
ಪಟನಾ: ‘ಈ ವರ್ಷ ಶುಕ್ರವಾರದಂದೇ ಹೋಳಿ ಬಂದಿರುವುದರಿಂದ ಮುಸ್ಲಿಮರು ಮನೆಯಲ್ಲಿಯೇ ಇರಿ. ಹಿಂದೂಗಳು ಹಬ್ಬವನ್ನು ಯಾವುದೇ ಅಡೆತಡೆಯಿಲ್ಲದೆ ನಡೆಸಲು ಅವಕಾಶ ನೀಡಿ’ ಎಂದು ಬಿಹಾರದ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಬಚೌಲ್ ವಿವಾದಿತ ಹೇಳಿಕೆ ನೀಡಿದ್ದಾರೆ.ಸೋಮವಾರ ಮಾತನಾಡಿದ ಅವರು, ‘ವರ್ಷದಲ್ಲಿ 52 ಜುಮ್ಮಾ (ಶುಕ್ರವಾರ) ಬರುತ್ತವೆ. ಅದರಲ್ಲಿ ಹೋಳಿ ಒಮ್ಮೆ ಮಾತ್ರ ಬರುತ್ತದೆ. ಹೋಳಿ ಆಚರಣೆ ವೇಳೆ ಅವರ ಮೇಲೆ ಬಣ್ಣ ಹಾಕಿದರೆ ಅದು ದೊಡ್ಡ ಅಪರಾಧ ಎಂದು ಬಿಂಬಿಸಬಾರದು. ಅವರಿಗೆ ಒಂದು ವೇಳೆ ಇದು ಸಮಸ್ಯೆಯಿದ್ದರೆ ಮನೆಯಲ್ಲಿಯೇ ಇರಿ. ಇದು ಕೋಮು ಸಾಮರಸ್ಯ ಕಾಪಾಡಲು ಬಹುಮುಖ್ಯ’ ಎಂದರು.
ಇದಲ್ಲದೆ, ‘ಮುಸ್ಲಿಮರದ್ದು ದ್ವಿಮುಖ ನೀತಿ. ಅವರು ಬಣ್ಣ ಮಾರಿ ಹಣ ಸಂಪಾದಿಸಲು ಖುಷಿ ಪಡುತ್ತಾರೆ. ಆದರೆ ಒಂದು ಸ್ವಲ್ಪ ಬಣ್ಣ ಬಟ್ಟೆ ಮೇಲೆ ಬಿದ್ದಾಗ ಸಿಟ್ಟಿಗೇಳುತ್ತಾರೆ’ ಎಂದರು.
ಹಿಂದೂಗಳ ಅಂಗಡಿಯಲ್ಲಷ್ಟೇ ಮಟನ್ ಖರೀದಿಸಿ: ಮಹಾ ಸಚಿವ
ಮುಂಬೈ: ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಅವರು ಹಿಂದೂಗಳಿಂದ ಮಾತ್ರ ನಡೆಸಲ್ಪಡುವ ಮಟನ್ ಅಂಗಡಿಗಳಲ್ಲಿ ಮಟನ್ ಖರೀದಿಸುವಂತೆ ಜನತೆಗೆ ಮನವಿ ಮಾಡಿದ್ದಾರೆ. ಇದಕ್ಕಾಗಿ ‘ಮಲ್ಹಾರ್ ಪ್ರಮಾಣೀಕರಣ’ (ಮಲ್ಹಾರ್ ಸರ್ಟಿಫಿಕೇಟ್) ಉಪಕ್ರಮವನ್ನು ಘೋಷಿಸಿದ ಅವರು, ‘ಮಲ್ಹಾರ್ ಪ್ರಮಾಣೀಕರಣ ಲಭ್ಯವಿಲ್ಲದ ಸ್ಥಳಗಳಿಂದ ಮಟನ್ ಖರೀದಿಸಬೇಡಿ’ ಎಂದು ಜನರನ್ನು ಒತ್ತಾಯಿಸಿದ್ದಾರೆ. ಈ ಪ್ರಯತ್ನವು ಹಿಂದೂ ಸಮುದಾಯದ ಯುವಕರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುತ್ತದೆ ಈ ಮಟನ್‌ನಲ್ಲಿ ಯಾವುದೇ ಕಲಬೆರಕೆ ಕಂಡುಬರುವುದಿಲ್ಲ’ ಎಂದಿದ್ದಾರೆ. ಇದು ಒಂದು ನಿರ್ದಿಷ್ಟ ಕೋಮಿನ ಹಲಾಲ್ ಸರ್ಟಿಫಿಕಶನ್ ವಿರುದ್ಧದ ಆಂದೋಲನವಾಗಿದೆ.