ಇಂಡಿಗೋ ವಿಮಾನದಲ್ಲಿ ನಿಂತು ಪ್ರಯಾಣಿಸುತ್ತಿದ್ದ ವ್ಯಕ್ತಿ ಪತ್ತೆಯಾಗಿದ್ದು, ಮರಳಿ ಬಂದು ಪ್ರಯಾಣಿಕನನ್ನು ಇಳಿಸಿದ ಪೈಲಟ್‌ ಮತ್ತೊಮ್ಮೆ ವಿಮಾನವನ್ನು ಟೇಕಾಫ್‌ ಮಾಡಿದ್ದಾರೆ.

ಮುಂಬೈ: ಬಸ್‌, ರೈಲುಗಳಲ್ಲಿ ಪ್ರಯಾಣಿಕರು ನಿಂತು ಪ್ರಯಾಣಿಸುವುದು ಸಹಜ. ಅದರೆ, ವಾರಾಣಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ನಿಂತು ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನವನ್ನು ಮರಳಿ ತಂದು ಆತನನ್ನು ಇಳಿಸಿದ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ವಿಮಾನಕ್ಕೆ ಟಿಕೆಟ್‌ ಬುಕಿಂಗ್‌ ಮಾಡುವಾಗ ಏರ್‌ಲೈನ್ಸ್‌ ಸಿಬ್ಬಂದಿ ಹೆಚ್ಚುವರಿ ಪ್ರಯಾಣಿಕನಿಗೂ ಟಿಕೆಟ್‌ ನೀಡಿದ್ದರು. ವಿಮಾನ (6ಇ 6543) ಟೇಕಾಫ್‌ ಆಗಲು ಮಂಗಳವಾರ ಬೆಳಿಗ್ಗೆ 7.50ಕ್ಕೆ ರನ್‌ವೇಗೆ ಹೋಗುತ್ತಿದ್ದಾಗ ಆತ ಹಿಂಬದಿಯ ಬಾಗಿಲಿನ ಬಳಿ ನಿಂತಿದ್ದ. ಅದು ವಿಮಾನದ ಸಿಬ್ಬಂದಿಯೊಬ್ಬರ ಕಣ್ಣಿಗೆ ಬಿದ್ದು ಪೈಲಟ್‌ಗೆ ತಿಳಿಸಿದರು. ಪೈಲಟ್‌ ಕೂಡಲೇ ವಿಮಾನವನ್ನು ಮರಳಿ ಏರೋಬ್ರಿಜ್‌ಗೆ ತಂದು ಆತನನ್ನು ಕೆಳಗೆ ಇಳಿಸಿದರು. ನಂತರ ವಿಮಾನ ಟೇಕಾಫ್‌ ಆಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆಯಿಂದಾಗಿ ವಿಮಾನ ಒಂದು ತಾಸು ತಡವಾಯಿತು. ಘಟನೆಗೆ ಇಂಡಿಗೋ ಏರ್‌ಲೈನ್ಸ್‌ ವಿಷಾದ ವ್ಯಕ್ತಪಡಿಸಿದೆ. ಸೀಟು ಖಾಲಿಯಿಟ್ಟುಕೊಂಡು ವಿಮಾನಗಳು ಹಾರಾಟ ನಡೆಸುವುದನ್ನು ತಪ್ಪಿಸಲು ಏರ್‌ಲೈನ್ಸ್‌ಗಳು ಕೆಲವೊಮ್ಮೆ ಹೆಚ್ಚುವರಿ ಟಿಕೆಟ್‌ ನೀಡುತ್ತವೆ. ಆದರೆ ಟಿಕೆಟ್‌ ಪಡೆದ ಎಲ್ಲರೂ ಬಂದುಬಿಟ್ಟರೆ ಹೀಗೆ ಆಗುತ್ತದೆ ಎಂದು ಹೇಳಲಾಗಿದೆ.