ಕೇಂದ್ರ ಬಜೆಟ್‌ 2024: ಸ್ಟಾರ್ಟಪ್‌ಗಳಿಗೆ ಇನ್ನೂ ಒಂದು ವರ್ಷ ತೆರಿಗೆ ರಿಯಾಯ್ತಿ

| Published : Feb 02 2024, 01:02 AM IST / Updated: Feb 02 2024, 12:19 PM IST

ಕೇಂದ್ರ ಬಜೆಟ್‌ 2024: ಸ್ಟಾರ್ಟಪ್‌ಗಳಿಗೆ ಇನ್ನೂ ಒಂದು ವರ್ಷ ತೆರಿಗೆ ರಿಯಾಯ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ನವೋದ್ಯಮಗಳನ್ನು ಉತ್ತೇಜಿಸಲು ಈ ಹಿಂದೆ ಅವುಗಳಿಗೆ ನೀಡಿದ್ದ ತೆರಿಗೆ ರಿಯಾಯ್ತಿ ಹಾಗೂ ಪ್ರೋತ್ಸಾಹಕರ ಯೋಜನೆಗಳನ್ನು ಇನ್ನೂ ಒಂದು ವರ್ಷ ಮುಂದುವರೆಸಲಾಗುವುದು ಎಂದು ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದ್ದಾರೆ.

ದೇಶದಲ್ಲಿ ನವೋದ್ಯಮಗಳನ್ನು ಉತ್ತೇಜಿಸಲು ಈ ಹಿಂದೆ ಅವುಗಳಿಗೆ ನೀಡಿದ್ದ ತೆರಿಗೆ ರಿಯಾಯ್ತಿ ಹಾಗೂ ಪ್ರೋತ್ಸಾಹಕರ ಯೋಜನೆಗಳನ್ನು ಇನ್ನೂ ಒಂದು ವರ್ಷ ಮುಂದುವರೆಸಲಾಗುವುದು ಎಂದು ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದ್ದಾರೆ.

‘ಸ್ಟಾರ್ಟಪ್‌ಗಳಿಗೆ ಹಾಗೂ ಸಾವರಿನ್‌ ವೆಲ್ತ್‌ ಅಥವಾ ಪಿಂಚಣಿ ನಿಧಿಗಳು ಮಾಡುವ ಹೂಡಿಕೆಗೆ 2025ರ ಮಾರ್ಚ್‌ ಅಂತ್ಯದವರೆಗೆ ತೆರಿಗೆ ರಿಯಾಯ್ತಿ ಹಾಗೂ ಪ್ರೋತ್ಸಾಹಗಳನ್ನು ವಿಸ್ತರಿಸಲಾಗುವುದು. 

ಕೆಲ ತೆರಿಗೆ ವಿನಾಯ್ತಿಗಳು/ರಿಯಾಯ್ತಿಗಳು ಹಾಗೂ ಪ್ರೋತ್ಸಾಹಕರ ಕ್ರಮಗಳು 2024ರ ಮಾರ್ಚ್‌ ಅಂತ್ಯಕ್ಕೆ ಕೊನೆಗೊಳ್ಳುತ್ತಿದ್ದವು. ತೆರಿಗೆಯಲ್ಲಿ ನಿರಂತರತೆ ಕಾಪಾಡಿಕೊಳ್ಳಲು ಅವುಗಳನ್ನು ಇನ್ನೊಂದು ವರ್ಷ ವಿಸ್ತರಿಸಲಾಗುವುದು’ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಸ್ಟಾರ್ಟಪ್‌ಗಳಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ನಾನಾ ಯೋಜನೆಗಳನ್ನು ಹೊಂದಿದೆ. ಈವರೆಗೆ 1.17 ಲಕ್ಷ ಸ್ಟಾರ್ಟಪ್‌ಗಳಿಗೆ ಸರ್ಕಾರ ಮಾನ್ಯತೆ ನೀಡಿದೆ. 

ಅವುಗಳಲ್ಲಿ ಅರ್ಹ ಸ್ಟಾರ್ಟಪ್‌ಗಳಿಗೆ ಆದಾಯ ತೆರಿಗೆ ಕಡಿತ, ತೆರಿಗೆ ಸಂಬಂಧಿ ಪ್ರೋತ್ಸಾಹ ಮುಂತಾದ ಸೌಕರ್ಯಗಳನ್ನು ‘ಸ್ಟಾರ್ಟಪ್‌ ಇಂಡಿಯಾ’ ಯೋಜನೆಯ ಮೂಲಕ ನೀಡುತ್ತಿದೆ.

ಬಜೆಟ್‌ನಲ್ಲಿ ಸ್ಟಾರ್ಟಪ್‌ಗಳಿಗೆ ನೀಡಿರುವ ಪ್ರೋತ್ಸಾಹಕರ ಕ್ರಮಗಳನ್ನು ಮುಂದುವರೆಸಿರುವುದಕ್ಕೆ ದೇಶದ ನವೋದ್ಯಮಗಳ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ‘ಈ ಬಾರಿಯ ಮಧ್ಯಂತರ ಬಜೆಟ್‌ನಲ್ಲಿ ತೆರಿಗೆ ಪ್ರಸ್ತಾವಗಳಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಸರ್ಕಾರ ಹೇಳಿದೆ. 

ಹೀಗಾಗಿ ನಿರೀಕ್ಷೆಯಂತೆ ಸ್ಟಾರ್ಪಟ್‌ಗಳಿಗೆ ನೀಡುತ್ತಿದ್ದ ಪ್ರೋತ್ಸಾಹವನ್ನು ಒಂದು ವರ್ಷ ವಿಸ್ತರಿಸಿದೆ. ಇದರಿಂದ ಸ್ಟಾರ್ಟಪ್‌ಗಳಿಗೆ ಅನುಕೂಲವಾಗಲಿದೆ’ ಎಂದು ನವೋದ್ಯಮಿಗಳು ಹೇಳಿದ್ದಾರೆ.