ವಿದೇಶಾಂಗ ವ್ಯವಹಾರಕ್ಕೆ ವಿದೇಶಾಂಗ ಕಾರ್ಯದರ್ಶಿ ನೇಮಿಸಿದ ಕೇರಳದ ಬಗ್ಗೆ ಕೇಂದ್ರ ಸರ್ಕಾರ ಆಕ್ರೋಶ

| Published : Jul 26 2024, 01:31 AM IST / Updated: Jul 26 2024, 04:56 AM IST

ಸಾರಾಂಶ

ವಿದೇಶಾಂಗ ವ್ಯವಹಾರ ಎಂಬುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದ್ದರೂ, ಐಎಎಸ್‌ ಅಧಿಕಾರಿಯೊಬ್ಬರನ್ನು ವಿದೇಶಾಂಗ ಸಹಕಾರ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿದ್ದ ಕೇರಳ ಸರ್ಕಾರದ ನಡೆಗೆ ಕೇಂದ್ರ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ.

ನವದೆಹಲಿ: ವಿದೇಶಾಂಗ ವ್ಯವಹಾರ ಎಂಬುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದ್ದರೂ, ಐಎಎಸ್‌ ಅಧಿಕಾರಿಯೊಬ್ಬರನ್ನು ವಿದೇಶಾಂಗ ಸಹಕಾರ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿದ್ದ ಕೇರಳ ಸರ್ಕಾರದ ನಡೆಗೆ ಕೇಂದ್ರ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರಗಳು ತಮ್ಮ ಸಾಂವಿಧಾನಿಕ ವ್ಯಾಪ್ತಿಯನ್ನು ಮೀರಿ ಅತಿಕ್ರಮ ಪ್ರವೇಶ ಮಾಡಬಾರದು. ವಿದೇಶಾಂಗ ವ್ಯವಹಾರ ಎಂಬುದು ಸಂವಿಧಾನದ ಪ್ರಕಾರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಇದು ಸಹವರ್ತಿ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ಕೇರಳ ಸರ್ಕಾರ ತನ್ನ ಸಾಂವಿಧಾನಿಕ ಮಿತಿಯನ್ನು ಮೀರಿ ಅತಿಕ್ರಮವಾಗಿ ವರ್ತಿಸಬಾರದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಅವರು ಹೇಳಿದ್ದಾರೆ.

ಬಾಂಗ್ಲಾ ಹಿಂಸೆ: 6,700 ಭಾರತೀಯ ವಿದ್ಯಾರ್ಥಿಗಳು ವಾಪಸ್‌

ನವದೆಹಲಿ: ಭಾರತದ ನೆರೆಯ ದೇಶವಾದ ಬಾಂಗ್ಲಾದೇಶದಲ್ಲಿ ಮೀಸಲು ವಿರೋಧಿ ವಿದ್ಯಾರ್ಥಿ ಹಿಂಸೆ ಭುಗಿಲೆದ್ದ ಕಾರಣ, ವಿದ್ಯಾಭ್ಯಾಸಕ್ಕೆಂದು ತೆರಳಿದ ಭಾರತೀಯ ವಿದ್ಯಾರ್ಥಿಗಳಲ್ಲಿ 6,700 ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.ಬಾಂಗ್ಲಾದೇಶದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳೊಂದಿಗೆ ರಾಯಭಾರಿ ಕಚೇರಿ ನಿರಂತರ ಸಂಪರ್ಕದಲ್ಲಿದೆ. ರಾಜಧಾನಿ ಢಾಕಾ ಸೇರಿದಂತೆ ಇನ್ನಿತರೆ ನಗರಗಳಲ್ಲಿ ಸುಮಾರು 15 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಪೈಕಿ 6,700 ವಿದ್ಯಾರ್ಥಿಗಳು ವಾಪಸಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.ಈ ಸಂಘರ್ಷದಲ್ಲಿ ಇದುವರೆಗೂ ಸುಮಾರು 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.