ಕೇರಳದಿಂದ ಕೊಲ್ಲಿ ರಾಷ್ಟ್ರಗಳಿಗೆ ವಿಮಾನ ಸೇವೆ ಯೋಜನೆ ವಿಫಲ, ಹಡುಗು ಸೇವೆಗೆ ಕೇರಳ ಚಿಂತನೆ

| Published : Oct 29 2024, 01:06 AM IST / Updated: Oct 29 2024, 07:00 AM IST

ಸಾರಾಂಶ

ಕೇರಳದಿಂದ ಕೊಲ್ಲಿ ರಾಷ್ಟ್ರಗಳಿಗೆ ವಿಮಾನ ಸೇವೆ ಆರಂಭಿಸುವ ಯೋಜನೆ ವಿಫಲವಾದ ಬೆನ್ನಲ್ಲೇ ಅದೇ ಮಾರ್ಗವಾಗಿ ಹಡಗು ಸೇವೆ ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ.

ತಿರುವನಂತಪುರ: ಕೇರಳದಿಂದ ಕೊಲ್ಲಿ ರಾಷ್ಟ್ರಗಳಿಗೆ ವಿಮಾನ ಸೇವೆ ಆರಂಭಿಸುವ ಯೋಜನೆ ವಿಫಲವಾದ ಬೆನ್ನಲ್ಲೇ ಅದೇ ಮಾರ್ಗವಾಗಿ ಹಡಗು ಸೇವೆ ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ.

ಈ ಯೋಜನೆಯಲ್ಲಿ 4 ಹಡಗು ಕಂಪನಿಗಳು ಆಸಕ್ತಿ ತೋರಿವೆ. ಈ ಸಂಬಂಧ ಹಡಗುಗಳ ಮಾಹಿತಿಯನ್ನು ಒಳಗೊಂಡಂತೆ ಒದಗಿಸಲಾಗುವ ಸೇವೆಗಳ ಕುರಿತು ಮಾಹಿತಿ ನೀಡಿ ಶಿಪ್ಪಿಂಗ್ ನಿರ್ದೇಶನಾಲಯದಿಂದ ಒಪ್ಪಿಗೆ ಪಡೆಯಲು ಸರ್ಕಾರ ಸೂಚಿಸಿದ್ದು, ಇದಕ್ಕಾಗಿ ಕಂಪನಿಗಳು ಸಮಯಾವಕಾಶ ಕೇಳಿವೆ.

ಈ ಮೊದಲು ಕೇರಳದಿಂದ ಕೊಲ್ಲಿ ರಾಷ್ಟ್ರಗಳಿಗೆ ಹೋಗುವ ವಿಮಾನಗಳ ದರ ಅಧಿಕವಾದ ಕಾರಣ, ಬಾಡಿಗೆ (ಚಾರ್ಟೆಡ್‌) ವಿಮಾನ ಸೇವೆ ಪ್ರಾರಂಭಿಸುವ ಬಗ್ಗೆ ಅನಿವಾಸಿ ಕೇರಳ ಜನರಿಗೆ ಸಂಬಂಧಿಸಿದ ರಾಜ್ಯ ಸರ್ಕಾರದ ಸಂಸ್ಥೆ ಕೇಂದ್ರ ವಿಮಾನಯಾನ ಸಚಿವಾಲಯದೊಂದಿಗೆ ಮಾತುಕತೆ ನಡೆಸಿತ್ತು. 2023-24ರ ರಾಜ್ಯ ಬಜೆಟ್‌ನಲ್ಲಿ ಇದಕ್ಕಾಗಿ 15 ಕೋಟಿ ರು. ಮೀಸಲಿಡಲಾಗಿತ್ತು. ಆದರೆ ಇದಕ್ಕೆ ಕೇಂದ್ರದ ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ ಬಾಡಿಗೆ ವಿಮಾನದ ಯೋಜನೆಯನ್ನು ಕೈಬಿಡಲಾಗಿತ್ತು.