ಸಾರಾಂಶ
ನವದೆಹಲಿ: ಆ್ಯಪಲ್ ಸಂಸ್ಥೆಯ ಸಹಸಂಸ್ಥಾಪಕ ದಿ.ಸ್ಟೀವ್ ಜಾಬ್ಸ್ ಅವರ ಮಡದಿ ಲಾರೆನ್ ಪೊವೆಲ್ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಹಾಕುಂಭಮೇಳದಲ್ಲಿ ಭಾಗಿಯಾಗಲು ಆಗಮಿಸಿದ್ದಾರೆ. ಶನಿವಾರ ಭಾರತಕ್ಕೆ ಆಗಮಿಸಿದ ಅವರು ವಾರಾಣಸಿಗೆ ತೆರಳಿ ಕಾಶಿ ವಿಶ್ವನಾಥನ ದರ್ಶನ ಪಡೆದರು.
ಈ ವೇಳೆ ಭಾರತೀಯ ಪೋಷಾಕು ಧರಿಸಿದ ಲಾರೆನ್, ನಿರಂಜನಿ ಅಖಾಡದ ಕೈಲಾಸನಂದ್ ಗಿರಿ ಸ್ವಾಮಿಗಳೊಂದಿಗೆ ದೇವಸ್ಥಾನದ ಗರ್ಭಗುಡಿಯ ಹೊರಗಿನಿಂದಲೇ ವಿಶ್ವನಾಥನ ದರ್ಶನ ಪಡೆದರು. ದರ್ಶನದ ಬಳಿಕ ಮಾತನಾಡಿದ ಸ್ವಾಮಿಗಳು, ‘ಸಂಪ್ರದಾಯದ ಪ್ರಕಾರ ಹಿಂದೂಯೇತರರಿಗೆ ಶಿವಲಿಂಗ ಸ್ಪರ್ಶಿಸುವ ಅವಕಾಶವಿಲ್ಲ.
ಆದ್ದರಿಂದಲೇ ಆಕೆ ಹೊರಗಿಂದ ದರ್ಶನ ಪಡೆದು ನಿಯಮವನ್ನು ಪಾಲಿಸಿದರು. ಮಹಾಕುಂಭಮೇಳದಲ್ಲಿ ಭಾಗವಹಿಸಲು ಆಗಮಿಸಿರುವ ಲಾರೆನ್, ಈ ವೇಳೆ ಕಲ್ಪವಾಸ್ ವ್ರತವನ್ನೂ ಕೈಗೊಳ್ಳಲಿದ್ದಾರೆ.
ಸ್ಟೀವ್ ಜಾಬ್ಸ್ ಪತ್ನಿ ಹೊಸ ಹೆಸರು ಕಮಲಾ!
ವ್ರತಾಚರಣೆಗೆ ಆಗಮಿಸಿರುವ ಲಾರೆನ್‌ಗೆ ಸ್ವಾಮಿ ಕೈಲಾಸನಂದ ಸ್ವಾಮಿಗಳು ಕಮಲಾ ಎಂದು ನಾಮಕರಣ ಮಾಡಿದ್ದಾರೆ. ಲಾರೆನ್ ತಮ್ಮ ಮಗಳಿದ್ದಂತೆ. ಹಿಂದೂ ಆಚರಣೆಗಾಗಿ ಬಂದಿರುವ ಆಕೆಗೆ ‘ಕಮಲಾ’ ಎಂದು ಮರುನಾಮಕರಣ ಮಾಡಿದ್ದೇವೆ. ಆಕೆಯನ್ನು ತಮ್ಮ ಅಖಾಡಕ್ಕೆ ಸೆರಿಸಿಕೊಳ್ಳುವ ಬಗ್ಗೆಯೂ ಯೋಚಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.