ಯುದ್ಧದ ಪ್ರತಿ ದಿನವೂ ಮಾನವೀಯತೆಯನ್ನು ಹಿಂದಕ್ಕೆ ತಳ್ಳುತ್ತದೆ. ನಾವು ಹಗೆತನವನ್ನು ಕೊನೆಗೊಳಿಸುವತ್ತ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರಿಗೆ ಮನವಿ ಮಾಡಿದ್ದಾರೆ.

- ಮಾನವೀಯತೆಗೆ ಸಮರ ಮಾರಕ, ಹಗೆತನ ನಿಲ್ಲಲಿ

- ಬಿಷ್ಕೇಕ್‌ನಲ್ಲಿ ಪುಟಿನ್‌ ಭೇಟಿ ವೇಳೆ ಪ್ರಧಾನಿ ಕಳವಳಬಿಷ್ಕೇಕ್‌: ಯುದ್ಧದ ಪ್ರತಿ ದಿನವೂ ಮಾನವೀಯತೆಯನ್ನು ಹಿಂದಕ್ಕೆ ತಳ್ಳುತ್ತದೆ. ನಾವು ಹಗೆತನವನ್ನು ಕೊನೆಗೊಳಿಸುವತ್ತ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರಿಗೆ ಮನವಿ ಮಾಡಿದ್ದಾರೆ.

ಕಿರ್ಗಿಸ್ತಾನದ ಬಿಷ್ಕೇಕ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಶೃಂಗಸಭೆ ಪಾರ್ಶ್ವದಲ್ಲಿ ಪುಟಿನ್‌ ಹಾಗೂ ಮೋದಿ ಭೇಟಿ ನಡೆಯಿತು. ಈ ವೇಳೆ ಉಕ್ರೇನ್ ಸಂಘರ್ಷವನ್ನು ಪರಿಹರಿಸಲು ಎಲ್ಲಾ ಶಾಂತಿಯುತ ಪ್ರಯತ್ನಗಳಿಗೆ ಭಾರತದ ಬೆಂಬಲ ನೀಡಲಿದೆ ಎಂದು ಮೋದಿ ಪುನರುಚ್ಚರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪುಟಿನ್‌, ‘ಮೋದಿ ಅವರ ವೈಯಕ್ತಿಕ ಗಮನದಿಂದ ರಷ್ಯಾ-ಭಾರತ ಸಂಬಂಧಗಳು ಬಲಗೊಳ್ಳುತ್ತಿವೆ ’ ಎಂದರು.

ಈ ನಡುವೆ ಟ್ವೀಟ್‌ ಮಾಡಿರುವ ಮೋದಿ, ‘ಪುಟಿನ್‌ ಜತೆ ಭಾರತ-ರಷ್ಯಾ ನಂಟಿನ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿದೆ. ಇತ್ತೀಚಿನ ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಂಬಂಧವು ಗಮನಾರ್ಹ ಪ್ರಗತಿ ಕಾಣುತ್ತಿರುವುದು ಸಂತಸ ತಂದಿದೆ. ಭಾರತ-ರಷ್ಯಾ ಸ್ನೇಹಕ್ಕೆ ಇಂಧನ, ನಾವೀನ್ಯತೆ, ಬಾಹ್ಯಾಕಾಶ, ರಸಗೊಬ್ಬರಗಳು ಸಂಪರ್ಕಗಳಾಗಿ ಉಳಿದಿವೆ’ ಎಂದು ಹರ್ಷಿಸಿದ್ದಾರೆ.

ಸ್ಪುಟ್ನಿಕ್ ಪ್ರಕಾರ, 2025 ರಲ್ಲಿ ಎರಡೂ ದೇಶಗಳ ನಡುವಿನ ಪ್ರವಾಸಿ ವಿನಿಮಯವು ಶೇ.16ರಷ್ಟು ಹೆಚ್ಚಾಗಿದೆ.

==

ಇರಾನ್‌-ಅಮೆರಿಕ ಮಧ್ಯೆ ಶಾಂತಿ ಸ್ಥಾಪನೆ: ಮೋದಿ ಕರೆ

- ಇರಾನ್‌ ಅಧ್ಯಕ್ಷ ಪೆಜೆಶ್ಕಿಯಾನ್‌ ಜತೆ ಪ್ರಧಾನಿ ಮೋದಿ ಭೇಟಿಬಿಷ್ಕೇಕ್: ಶಾಂಘೈ ಶೃಂಗಸಭೆಗೆಂದು ಕಿರ್ಗಿಸ್ತಾನ್‌ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿ ಇರಾನ್‌ ಅಧ್ಯಕ್ಷ ಮಸೌದ್‌ ಪೆಜೆಶ್ಕಿಯಾನ್‌ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಅಮೆರಿಕದೊಂದಿಗೆ ಇರಾನ್‌ ಫೆಬ್ರವರಿಯಲ್ಲಿ ಯುದ್ಧಕ್ಕಿಳಿದ ಬಳಿಕ ನಡೆದ ಉಭಯ ನಾಯಕರ ಮೊದಲ ಭೇಟಿ ಇದಾಗಿದ್ದು, ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಗೆ ಮನವಿ ಮಾಡಿದ್ದಾರೆ.

ಇದಲ್ಲದೆ, ಇರಾನ್‌ ದಾಳಿಯಲ್ಲಿ ಭಾರತೀಯ ನಾವಿಕರು ಮೃತರಾದ ಬಗ್ಗೆಯೂ ಮೋಇ ಕಳವಳ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ.ಈ ಭೇಟಿ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೋದಿ, ‘ಅಧ್ಯಕ್ಷ ಪೆಜೆಶ್ಕಿಯಾನ್‌ ಅವರನ್ನು ಭೇಟಿಯಾಗಿ, ಮಧ್ಯಪ್ರಾಚ್ಯದ ಪ್ರಸ್ತುತ ಸ್ಥಿತಿಗತಿಯ ಕುರಿತು ಚರ್ಚೆ ನಡೆಸಿದೆ. ವಿವಿಧ ಕ್ಷೇತ್ರಗಳಲ್ಲಿ ಇರಾನ್‌ನೊಂದಿಗಿನ ಭಾರತದ ದೀರ್ಘಕಾಲೀನ ಸ್ನೇಹವನ್ನು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದೆ. ಮುಂದಿನ ದಿನಗಳಲ್ಲಿ ವ್ಯಾಪಾರ ವಿಸ್ತರಿಸಲು ಮತ್ತು ವೈವಿಧ್ಯಮಯವಾಗಿಸಲು ನಾವು ಬಯಸುತ್ತೇವೆ’ ಎಂದು ಬರೆದಿದ್ದಾರೆ. ಮುಂದುವರಿದು, ‘ಶಾಶ್ವತ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ನಡೆಯುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುವುದನ್ನು ಭಾರತ ಮುಂದುವರಿಸಲಿದೆ’ ಎಂಬ ಭರವಸೆ ನೀಡಿದರು.