ಸಾರಾಂಶ
ಇಂದೋರ್: ನಗರದ ಖಾಸಗಿ ಶಾಲೆಯೊಂದರ 4ನೇ ತರಗತಿ ಸಹಪಾಠಿಗಳ ನಡುವೆ ಭೀಕರ ಮಾರಾಮಾರಿ ನಡೆದಿದ್ದು, ಈ ವೇಳೆ ಬಾಲಕನೊಬ್ಬನಿಗೆ 3 ವಿದ್ಯಾರ್ಥಿಗಳು ತ್ರಿಜ್ಯದಿಂದ 108 ಬಾರಿ ಇರಿದಿದ್ದಾರೆ.
ಇಂದೋರ್ ಶಾಲೆಯಲ್ಲಿ ಆಘಾತಕಾರಿ ಕೃತ್ಯ
ಇಂದೋರ್: ನಗರದ ಖಾಸಗಿ ಶಾಲೆಯೊಂದರ 4ನೇ ತರಗತಿ ಸಹಪಾಠಿಗಳ ನಡುವೆ ಭೀಕರ ಮಾರಾಮಾರಿ ನಡೆದಿದ್ದು, ಈ ವೇಳೆ ಬಾಲಕನೊಬ್ಬನಿಗೆ 3 ವಿದ್ಯಾರ್ಥಿಗಳು ತ್ರಿಜ್ಯದಿಂದ 108 ಬಾರಿ ಇರಿದಿದ್ದಾರೆ.ಕೃತ್ಯ ಎಸಗಿದ ಎಲ್ಲ ಮಕ್ಕಳೂ 10 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಗಾಯಾಳು ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಂಘರ್ಷಕ್ಕೆ ಕಾರಣವಾದ ಅಂಶ ಇದುವರೆಗೂ ತಿಳಿದು ಬಂದಿಲ್ಲ. ಮಕ್ಕಳು ಹಿಂಸಾತ್ಮಕ ವಿಡಿಯೋ ಗೇಮ್‌ಗಳಿಂದ ಪ್ರಭಾವಿತರಾಗಿ ಈ ಕೃತ್ಯ ಎಸಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಈ ಕುರಿತು ಸಂತ್ರಸ್ತ ಬಾಲಕನ ತಂದೆ ಏರೋಡ್ರೋಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆಯ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಮಕ್ಕಳ ರಕ್ಷಣಾ ಸಮಿತಿ ಪೊಲೀಸರಿಗೆ ತನಿಖೆಯ ವರದಿಯನ್ನು ನೀಡುವಂತೆ ಸೂಚಿಸಿದೆ. ಈ ಬಗ್ಗೆ ಮಾತನಾಡಿದ ಮಕ್ಕಳಾ ಹಿತರಕಕ್ಷಣಾ ಸಮಿತಿ ಅಧ್ಯಕ್ಷೆ, ‘ನ.24 ರಂದು ಈ ಆಘಾತಕಾರಿ ಘಟನೆ ನಡೆದಿದ್ದು, ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಈ ಮಟ್ಟದ ಹಿಂಸಾ ಪ್ರವೃತ್ತಿ ಬೆಳೆಯಲು ಕಾರಣವಾದ ಅಂಶದ ಕುರಿತು ಪರಾಮರ್ಶಿಸಿ ಸೂಕ್ತ ಸಮಾಲೋಚನೆ ನಡೆಸಲಿದ್ದೇವೆ. ಬಹುಶಃ ಮಕ್ಕಳ ಈ ಪ್ರವೃತ್ತಿಗೆ ವಿಡಿಯೋ ಗೇಮ್ ಪ್ರೇರಣೆಯಾಗಿರಬಹುದು’ ಎಂದು ತಿಳಿಸಿದ್ದಾರೆ.ಪೊಲೀಸರು ಸೂಕ್ತ ತನಿಖೆ ನಡೆಸಿ ಕಾನೂನಿನ ಅನುಸಾರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.