ಸಾರಾಂಶ
ನವದೆಹಲಿ : ಹವಾಮಾನ ಬದಲಾವಣೆಗಳ ಪರಿಣಾಮದಿಂದಾಗಿ ಕರ್ನಾಟಕದ ಚಿಕ್ಕಬಳ್ಳಾಪುರ, ಹಾವೇರಿ, ಚಿತ್ರದುರ್ಗ ಜಿಲ್ಲೆಗಳು ಸೇರಿದಂತೆ ಗುಜರಾತ್, ರಾಜಸ್ಥಾನ, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ವಿಷಕಾರಿ ಹಾವಿನ ಪ್ರಮಾಣ ಮತ್ತು ಹಾವು ಕಡಿತದ ಪ್ರಮಾಣ ಹೆಚ್ಚಲಿದೆ ಎಂದು ಅಧ್ಯಯನವೊಂದು ಎಚ್ಚರಿಸಿದೆ.
ವಾತಾವರಣದಲ್ಲಿ ಉಷ್ಣತೆ ಮತ್ತು ಆರ್ದ್ರತೆ ಏರಿಕೆಯಿಂದಾಗಿ, ಹಾವುಗಳ ವಾಸಕ್ಕೆ ಅನುಕೂಲಕರಲ್ಲ ಎನ್ನುವ ಪ್ರದೇಶಗಳು ಕೂಡಾ ಮುಂದಿನ ದಿನಗಳಲ್ಲಿ ಅವುಗಳ ವಾತಾವರಣಕ್ಕೆ ಸೂಕ್ತವಾಗುವ ಹವಾಮಾನ ಸೃಷ್ಟಿಸಲಿದೆ. ಹೀಗಾಗಿ ಈಗಿರುವ ಹಾವುಗಳ ಪ್ರಮುಖ ಆವಾಸ ಸ್ಥಾನದ ಪೈಕಿ ಇನ್ನಷ್ಟು ಪ್ರದೇಶಗಳಿಗೂ ಅವು ವಿಸ್ತರಣೆಯಾಗಬಹುದು. ಅನುಕೂಲಕರ ವಾತಾವರಣ ಕಾರಣ ಅವುಗಳ ಸಂತತಿಯೂ ಹೆಚ್ಚಬಹುದು. ಇದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮುಖಾಮುಖಿ ಸಾಧ್ಯತೆ ಹೆಚ್ಚಳಕ್ಕೆ, ಹಾವುಗಳ ಕಡಿತ ಪ್ರಮಾಣ ಹೆಚ್ಚಳ ಆಗಬಹುದು ಎಂದು ತಜ್ಞರು ಹೇಳಿದ್ದಾರೆ.
ದಿಬ್ರು-ಸೈಖೋವಾ ಕನ್ಸರ್ವೇಶನ್ ಸೊಸೈಟಿ, ಅಸ್ಸಾಂ ಕೃಷಿ ವಿವಿ ಮತ್ತು ದಕ್ಷಿಣ ಕೊರಿಯಾದ ಪುಕ್ಯೋಂಗ್ ವಿವಿಗಳು ಜಂಟಿಯಾಗಿ ನಡೆಸಿದ ಅಧ್ಯಯನ ವರದಿ ಎಚ್ಚರಿಸಿದೆ.
ವರದಿಯಲ್ಲಿ ಏನಿದೆ?:
ಹಾವುಗಳ ವಾಸಕ್ಕೆ ಹೆಚ್ಚು ಪ್ರಶಸ್ತವಲ್ಲ ಎನ್ನಲಾಗುವ ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಅರುಣಾಚಲಪ್ರದೇಶದಲ್ಲಿ ಹಾವುಗಳ ಸಂಖ್ಯೆಯಲ್ಲಿ ಶೇ.100ರಷ್ಟು ಏರಿಕೆಯಾಗಬಹುದು. ಇನ್ನು ಹರ್ಯಾಣ, ರಾಜಸ್ಥಾನ, ಅಸ್ಸಾಂ ಮೊದಲಾದ ರಾಜ್ಯಗಳಲ್ಲಿ ಇವುಗಳ ಪ್ರದೇಶ ವ್ಯಾಪ್ತಿ ವಿಸ್ತರಣೆಯಾಗಬಹುದು. ಇದರ ಜೊತೆಗೆ ಕರ್ನಾಟಕದ ಚಿಕ್ಕಬಳ್ಳಾಪುರ, ಹಾವೇರಿ, ಚಿತ್ರದುರ್ಗ ಜಿಲ್ಲೆ, ಗುಜರಾತ್‌ನ ದ್ವಾರಕಾ, ಜಾಮ್‌ನಗರ ಜಿಲ್ಲೆಗಳಲ್ಲಿ ಹಾವುಗಳ ಪ್ರಮಾಣ ಮತ್ತು ಕಡಿತ ಹೆಚ್ಚಾಗಬಹದು ಎಂದು ವರದಿ ಹೇಳಿದೆ.
ಯಾವ ಹಾವುಗಳ ಸಂಖ್ಯೆ ಏರಿಕೆ?:
‘ಬಿಗ್ 4’ ಎಂದು ಕರೆಯಲ್ಪಡುವ ಕಾಮನ್ ಕ್ರೈಟ್, ರಸೆಲ್ಸ್ ವೈಪರ್, ಈಚಿಸ್ ಕಾರಿನೇಟಸ್, ಇಂಡಿಯನ್ ಕೋಬ್ರಾ ಜಾತಿಯ ಹಾವುಗಳ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಭಾರತದಲ್ಲಿ ಈಗಾಗಲೇ ಜಗತ್ತಿನಲ್ಲೇ ಅತಿ ಹೆಚ್ಚು ಹಾವು ಕಡಿತ ಮತ್ತು ಹಾವು ಕಡಿತದಿಂದ ಸಾವಾಗುವ ದಾಖಲೆ ಹೊಂದಿದೆ. ಹವಾಮಾನ ವೈಪರೀತ್ಯದಿಂದ ಈ ಆತಂಕ ಇನ್ನಷ್ಟು ಹೆಚ್ಚಿದೆ.