ಸಾರಾಂಶ
ದೇಶದ 13 ರಾಜ್ಯಗಳ ಒಟ್ಟು 63 ಜಿಲ್ಲೆಗಳ ಅಂಗನವಾಡಿಯಲ್ಲಿ ಶೇ.50ರಷ್ಟು ಮಕ್ಕಳಲ್ಲಿ ಕುಂಠಿತ ಬೆಳವಣಿಗೆಯಿದೆ ಎಂದು ಕೇಂದ್ರ ಸರ್ಕಾರದ ವರದಿಯೊಂದು ಹೇಳಿದೆ
ನವದೆಹಲಿ: ದೇಶದ 13 ರಾಜ್ಯಗಳ ಒಟ್ಟು 63 ಜಿಲ್ಲೆಗಳ ಅಂಗನವಾಡಿಯಲ್ಲಿ ಶೇ.50ರಷ್ಟು ಮಕ್ಕಳಲ್ಲಿ ಕುಂಠಿತ ಬೆಳವಣಿಗೆಯಿದೆ ಎಂದು ಕೇಂದ್ರ ಸರ್ಕಾರದ ವರದಿಯೊಂದು ಹೇಳಿದೆ. ಈ ವರದಿಯಲ್ಲಿ ಕರ್ನಾಟಕದ ರಾಯಚೂರು (ಶೇ.52.76ರಷ್ಟು) ಮತ್ತು ಬಾಗಲಕೋಟೆ (ಶೇ.51.61ರಷ್ಟು) ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ ಎಂದು ಅದು ಹೇಳಿದೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಹಿತಿಯ ಪ್ರಕಾರ, ಒಟ್ಟು 63 ಜಿಲ್ಲೆಗಳಲ್ಲಿ ಉತ್ತರ ಪ್ರದೇಶದ ಪಾಲು ಅರ್ಧದಷ್ಟಿದೆ. ಅಲ್ಲಿನ 34 ಜಿಲ್ಲೆಗಳಲ್ಲಿನ ಅಂಗನವಾಡಿ ಮಕ್ಕಳಲ್ಲಿ ಶೇ.50ಕ್ಕಿಂತ ಹೆಚ್ಚು ಕುಂಠಿತ ಬೆಳವಣಿಗೆ ಸಮಸ್ಯೆಯಿದೆ.
ಮಕ್ಕಳಿಗೆ ಸರಿಯಾದ ಪೌಷ್ಟಿಕ ಆಹಾರದ ಕೊರತೆ, ಶುದ್ಧ ಕುಡಿಯುವ ನೀರು, ಶೌಚ ವ್ಯವಸ್ಥೆಯು ಇದಕ್ಕೆ ಕಾರಣವಾಗಿದೆ ಎಂದು ವರದಿ ಹೇಳಿದೆ.
ಮಿಕ್ಕಂತೆ ಮಧ್ಯ ಪ್ರದೇಶ, ಜಾರ್ಖಂಡ್ ಮತ್ತು ಅಸ್ಸಾಂನ ಜಿಲ್ಲೆಗಳಲ್ಲಿ ಈ ಸಮಸ್ಯೆ ಅಧಿಕವಾಗಿದೆ. ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯಲ್ಲಿ ಈ ಸಮಸ್ಯೆ ಹೆಚ್ಚಿದ್ದು, ಶೇ.68.12ರಷ್ಟು ಮಕ್ಕಳಲ್ಲಿ ಈ ಸಮಸ್ಯೆ ಅಧಿಕವಾಗಿದೆ ಎಂದು ಅದು ಹೇಳಿದೆ.
ಮಿಕ್ಕಂತೆ ದೇಶದ 199 ಜಿಲ್ಲೆಗಳಲ್ಲಿ ಕುಂಠಿತ ಬೆಳವಣಿಗೆಯ ಪ್ರಮಾಣವು ಶೇ.30-40ರಷ್ಟಿದೆ ಎಂದು ಅದು ಹೇಳಿದೆ.
- ರಾಯಚೂರು, ಬಾಗಲಕೋಟೆಯಲ್ಲಿ ಕುಂಠಿತ ಬೆಳವಣಿಗೆ
- ಕೇಂದ್ರ ಸರ್ಕಾರದ ವರದಿಯಲ್ಲಿ ಆಘಾತಕಾರಿ ಸಂಗತಿ
- ದೇಶದ 13 ರಾಜ್ಯಗಳ 63 ಜಿಲ್ಲೆಗಳಲ್ಲಿ ಈ ಸಮಸ್ಯೆ