ಉಗ್ರರ ದಾಳಿಯಲ್ಲಿ ತಂದೆ, ಚಿಕ್ಕಪ್ಪನನ್ನು ಕಳೆದಕೊಂಡ ಶಗುನ್‌ಗೆ ಗೆಲುವು

| Published : Oct 09 2024, 01:32 AM IST

ಸಾರಾಂಶ

ಜಮ್ಮು ಮತ್ತು ಕಾಶ್ಮೀರದ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಿಶ್ತ್ವಾರ್ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ಹಾಗೂ ಪಿಎಚ್‌ಡಿ ವಿದ್ಯಾರ್ಥಿನಿ ಶಗುನ್‌ ಪರಿಹಾರ್‌ ಗೆಲುವು ಸಾಧಿಸಿದ್ದಾರೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಿಶ್ತ್ವಾರ್ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ಹಾಗೂ ಪಿಎಚ್‌ಡಿ ವಿದ್ಯಾರ್ಥಿನಿ ಶಗುನ್‌ ಪರಿಹಾರ್‌ ಗೆಲುವು ಸಾಧಿಸಿದ್ದಾರೆ.

ಚುನಾವಣೆಯಲ್ಲಿ ಒಟ್ಟು 29053 ಮತಗಳನ್ನು ಪಡೆಯುವ ಮೂಲಕ ಎನ್‌ಸಿ ಅಭ್ಯರ್ಥಿ ಸಜ್ಜದ್ ಅಹಮದ್ ಕಿಚ್ಲು ಅವರನ್ನು ಸೊಲಿಸಿದ್ದಾರೆ.

2018ರಲ್ಲಿ ಶಗುನ್‌ ಅವರ ತಂದೆ ಮತ್ತು ಚಿಕ್ಕಪ್ಪ ಇಬ್ಬರನ್ನೂ ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಸಂತೋಷ್‌ ಹರ್ಷ:

ಈ ಬಗ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ತಮ್ಮ ಎಕ್ಸ್‌ ಖಾತೆಯನ್ನು ಶುಗನ್‌ ಅವರ ಫೋಟೊವನ್ನು ಹಂಚಿಕೊಂಡು ಶುಭ ಕೋರಿದ್ದಾರೆ.

==

27000 ಮತಗಳಿಂದ ಅಂತರದಿಂದ ಸೋತ ಅಫ್ಜಲ್‌ ಗರು ಸೋದರ

ಶ್ರೀನಗರ: ಕಾಶ್ಮೀರ ಚುನಾವಣೆಯಲ್ಲಿ ಸಂಸತ್‌ ದಾಳಿ ಅಪರಾಧಿ ಅಫ್ಜಲ್‌ ಗುರು ಸೋದರ ಐಜಾಜ್ ಅಹ್ಮದ್ ಗುರುಗೆ ಕೇವಲ 129 ಮತಗಳು ಲಭಿಸಿದ್ದು, 26,846 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.ಅಹ್ಮದ್‌ ಗುರು ಉತ್ತರ ಕಾಶ್ಮೀರದ ಸೋಪೋರ್‌ ಕ್ಷೇತ್ರದಿಂದ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.

ಪ್ರಚಾರದ ವೇಳೆ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಹಿಂದುಳಿದವರ ಅಗತ್ಯಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು.

==

ಕಾಶ್ಮೀರದಲ್ಲಿ ಮತ್ತೆ ಎನ್‌ಸಿ- ಕಾಂಗ್ರೆಸ್‌ ಸರ್ಕಾರ

ಶ್ರೀನಗರ/ಜಮ್ಮು: ಜಮ್ಮು- ಕಾಶ್ಮೀರ ವಿಧಾನಸಭೆಗೆ ಇತ್ತೀಚೆಗೆ 3 ಹಂತದಲ್ಲಿ ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ನಿರೀಕ್ಷೆಗೂ ಮೀರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಏರುವಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ಮೈತ್ರಿಕೂಟ ಯಶಸ್ವಿಯಾಗಿದೆ. ಮತ್ತೊಂದೆಡೆ ಬಿಜೆಪಿ 29 ಸ್ಥಾನ ಗೆಲ್ಲುವುದರೊಂದಿಗೆ 2ನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಮೆಹಬೂಬಾ ಮುಫ್ತಿ ಅವರ ಪಿಡಿಪಿ ದಯನೀಯ ಸೋಲು ಕಂಡಿದೆ.ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಒಮರ್‌ ಅಬ್ದುಲ್ಲಾ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪಕ್ಷದ ಅಧ್ಯಕ್ಷ ಫಾರೂಖ್‌ ಅಬ್ದುಲ್ಲಾ ಘೋಷಣೆ ಮಾಡುವುದರೊಂದಿಗೆ ಒಮರ್‌ 2ನೇ ಬಾರಿ ಸಿಎಂ ಗಾದಿ ಏರಲು ಕ್ಷಣಗಣನೆ ಆರಂಭವಾಗಿದೆ.90 ಸ್ಥಾನ ಬಲದ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಎನ್‌ಸಿ 42. ಕಾಂಗ್ರೆಸ್‌ 6, ಬಿಜೆಪಿ 29, ಪಿಡಿಪಿ 3 ಮತ್ತು ಇತರರು 10 ಸ್ಥಾನ ಗೆದ್ದಿದ್ದಾರೆ.

ದಶಕದ ಬಳಿಕ ಚುನಾವಣೆ:ಕಣಿವೆ ರಾಜ್ಯದಲ್ಲಿ 2014ರಲ್ಲಿ ಕಡೆಯ ಬಾರಿಗೆ ವಿಧಾನಸಭಾ ಚುನಾವಣೆ ನಡೆದಿದ್ದು ಪಿಡಿಪಿ-ಬಿಜೆಪಿ ಮೈತ್ರಿಕೂಟ ಸರ್ಕಾರ ನಡೆಸಿತ್ತು. ಆದರೆ 2019ರಲ್ಲಿ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದು ಮಾಡಿ, ಅದನ್ನು ಕೇಂದ್ರಾಡಳಿತ ಪ್ರದೇಶವಾಗಿ ಬದಲಾಯಿಸಿತ್ತು.

ನಿರೀಕ್ಷೆ ಮೀರಿ ಗೆಲುವು:ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಎನ್‌ಸಿ-ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಮುನ್ನಡೆ ಸುಳಿವು ನೀಡಿದ್ದರೆ, ಕೆಲ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಸಾಧ್ಯತೆ ಊಹಿಸಿದ್ದವು. ಆದರೆ ಎಲ್ಲರ ನಿರೀಕ್ಷೆ ಮೀರಿ ಎನ್‌ಸಿ- ಕಾಂಗ್ರೆಸ್‌ ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ಬಂದಿವೆ. ಈ ಹಿಂದೆ 2009-14ರ ಅವಧಿಯಲ್ಲೂ ರಾಜ್ಯವನ್ನು ಇದೇ ಮೈತ್ರಿಕೂಟ ಆಳಿತ್ತು.

ಬಿಜೆಪಿ ಸರ್ವಾಧಿಕ ಸಾಧನೆ:ಬಿಜೆಪಿ ಕಳೆದ ಬಾರಿ 25 ಸ್ಥಾನ ಗೆದ್ದಿದ್ದು, ಈ ಬಾರಿ ದಾಖಲೆಯ 29 ಸ್ಥಾನ ಗೆದ್ದು ಸಾಧನೆ ಉತ್ತಮ ಪಡಿಸಿಕೊಂಡಿದೆ. ಇನ್ನು ಜಮ್ಮು ಭಾಗದಲ್ಲಿ ಕಾಂಗ್ರೆಸ್‌ ಕೇವಲ 1 ಸ್ಥಾನ ಗೆದ್ದಿದೆ.

ಮೆಹಬೂಬಾ ಪಕ್ಷ ಕಳಪೆ ಸಾಧನೆ:ವಿಶೇಷವೆಂದರೆ 2009ರ ಚುನಾವಣೆಯಲ್ಲಿ 28 ಸ್ಥಾನ ಗೆದ್ದು ಬಿಜೆಪಿ ಜೊತೆಗೂಡಿ ಅಧಿಕಾರ ನಡೆಸಿದ್ದ ಮೆಹಬೂಬಾ ಮುಫ್ತಿ ಅವರ ಪಿಡಿಪಿ ದಯನೀಯ ಸೋಲು ಕಂಡಿದೆ. ಇನ್ನು ಭಯೋತ್ಪಾದನಾ ಕಾಯ್ದೆಯಡಿ ಬಂಧಿತರಾಗಿದ್ದರೂ, ಲೋಕಸಭಾ ಚುನಾವಣೆಯಲ್ಲಿ ಒಮರ್‌ ಅಬ್ದುಲ್ಲಾ ಅವರನ್ನೇ ಸೋಲಿಸಿ ಸಂಚಲನ ಉಂಟು ಮಾಡಿದ್ದ ಎಂಜಿನಿಯರ್‌ ರಶೀದ್‌ ಅವರ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ವಿಫಲವಾಗಿದೆ. ಯಾವುದೇ ಕ್ಷೇತ್ರದಲ್ಲೂ ಅವರ ಅಭ್ಯರ್ಥಿಗಳು ಮುನ್ನಡೆ ಪಡೆಯುವಲ್ಲಿ ಸಫಲರಾಗಿಲ್ಲ. ರಶೀದ್‌, ಬಿಜೆಪಿಯ ಮುಖವಾಡ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಬಹಿರಂಗವಾಗಿಯೇ ಪ್ರಚಾರ ಮಾಡಿದ್ದು ಫಲ ಕೊಟ್ಟಂತೆ ಕಂಡುಬಂದಿದೆ. ಇನ್ನೊಂದಡೆ ಗುಲಾಂ ನಬಿ ಆಜಾದ್‌ ಅವರ ಪಕ್ಷವೂ ವಿಫಲವಾಗಿದೆ.

==

ಕಾಶ್ಮೀರ ಚುನಾವಣೆ: ರಶೀದ್, ಗುಲಾಂ ನಬಿ ಕಳಪೆ ಪ್ರದರ್ಶನ

ಶ್ರೀನಗರ: ಕಾಶ್ಮೀರ ಚುನಾವಣೆಯಲ್ಲಿ ಛಾಪು ಮೂಡಿಸುವಲ್ಲಿ ಮಾಜಿ ಕಾಂಗ್ರೆಸ್ಸಿಗ ಗುಲಾಂ ನಬಿ ಆಜಾದ್ ಹಾಗೂ ಇತ್ತೀಚೆಗಷ್ಟೇ ಜೈಲಿನಿಂದ ಜಾಮೀನು ಮೇಲೆ ಬಿಡುಗಡೆ ಆಗಿದ್ದ ಭಯೋತ್ಪಾದನೆ ಪ್ರಕರಣ ಆರೋಪಿ ಎಂಜಿನಿಯರ್‌ ರಶೀದ್ ಛಾಪು ಮೂಡಿಸಲು ವಿಫಲರಾಗಿದ್ದಾರೆ.ರಶೀದ್ ಅವರ ಅವಾಮಿ ಇತ್ತೆಹಾದ್ ಪಕ್ಷವು ಜಮಾತ್‌ ಎ ಇಸ್ಲಾಮಿ ಜತೆ ಮೈತ್ರಿ ಮಾಡಿಕೊಂಡು 10 ಅಭ್ಯರ್ಥಿಗಳ ಕಣಕ್ಕಿಳಿಸಿದ್ದರು. ಬಹುತೇಕ ಎಲ್ಲ ಕಡೆ ಅಭ್ಯರ್ಥಿಗಳು ಸೋತಿದ್ದಾರೆ. ಇನ್ನು ಆಜಾದ್ ಅವರು ಕಾಂಗ್ರೆಸ್‌ನಿಂದ ಬೇರ್ಪಟ್ಟ ನಂತರ 2022ರಲ್ಲಿ ಸ್ಥಾಪಿಸಿದ್ದ ಡೆಮಾಕ್ರಟಿಕ್ ಪ್ರೋಗ್ರೆಸ್ಸಿವ್ ಆಜಾದ್ (ಡಿಪಿಎ) ಪಕ್ಷವು ಸ್ಪರ್ಧಿಸಿದ್ದ ಎಲ್ಲ ಸ್ಥಾನಗಳಲ್ಲಿ ಸೋತಿದೆ.

==

ಎನ್‌ಸಿ-ಕಾಂಗ್ರೆಸ್‌ನಿಂದ ಕೇವಲ ಇಬ್ಬರು ಹಿಂದೂಗಳಿಗೆ ಜಯ

ಜಮ್ಮು: ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ 48 ಸ್ಥಾನ ಗಳಿಸಿರುವ ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ಮೈತ್ರಿಯಲ್ಲಿ ಕೇವಲ ಇಬ್ಬರು ಹಿಂದೂ ಅಭ್ಯರ್ಥಿಗಳಿಗೆ ಜಯವಾಗಿದೆ. ಎನ್‌ಸಿ ಪಕ್ಷದ ಸುರಿಂದರ್‌ ಚೌಧರಿ ಮತ್ತು ಅರ್ಜುನ್‌ ಸಿಂಗ್‌ ರಾಜು ಅವರು ಗೆದ್ದಿದ್ದಾರೆ. ಚುನಾವಣೆ ಅಖಾಡಕ್ಕೆ ಎನ್‌ಸಿ 9 ಮತ್ತು ಕಾಂಗ್ರೆಸ್‌ 19 ಹಿಂದೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಬಿಜೆಪಿ 25 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.