ಸಾರಾಂಶ
ಜಿನೆವಾ: ಭಾರತೀಯ ಮೂಲದ ಮನೆ ಕೆಲಸದಾಳುಗಳನ್ನು ಜೀತ ಕಾರ್ಮಿಕರಂತೆ ಬಳಸಿಕೊಂಡು ಶೋಷಣೆ ಮಾಡಿದ ಪ್ರಕರಣದಲ್ಲಿ ಸಾವಿರಾರು ಕೋಟಿ ರು. ಆಸ್ತಿ ಹೊಂದಿರುವ ಅನಿವಾಸಿ ಭಾರತೀಯ ಉದ್ಯಮಿ ಪ್ರಕಾಶ್ ಹಿಂದೂಜಾ ಮತ್ತು ಅವರ ಕುಟುಂಬದ ನಾಲ್ವರನ್ನು ದೋಷಿಗಳು ಎಂದು ಸ್ಥಳೀಯ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
ಪ್ರಕಾಶ್ ಹಿಂದೂಜಾ, ಅವರ ಪತ್ನಿ ಕಮಲಾ, ಪುತ್ರ ಮತ್ತು ಸೊಸೆಯನ್ನು ದೋಷಿ ಎಂದು ಪ್ರಕಟಿಸಲಾಗಿದೆ. ಎಲ್ಲಾ ದೋಷಿಗಳಿಗೂ ತಲಾ 4 ರಿಂದ ನಾಲ್ಕೂವರೆ ವರ್ಷ ಶಿಕ್ಷೆ ಪ್ರಕಟಿಸಲಾಗಿದೆ. ಆದರೆ ತೀರ್ಪು ಪ್ರಕಟ ಬೆನ್ನಲ್ಲೇ ಮೇಲ್ಮನವಿಗೆ ಅನುವು ಮಾಡಿಕೊಡಲು ಶಿಕ್ಷೆ ಜಾರಿಯನ್ನು 18 ತಿಂಗಳು ಅಮಾನತಿನಲ್ಲಿ ಇಡಲಾಗಿದೆ.
ತೀರ್ಪಲ್ಲಿ ಏನಿದೆ?:
ಹಿಂದೂಜಾ ಕುಟುಂಬ ಭಾರತೀಯ ಮೂಲದ ಕೆಲಸದಾಳುಗಳನ್ನು ದಿನಕ್ಕೆ 18 ಗಂಟೆಗಳ ಕಾಲ ದುಡಿಸಿಕೊಂಡಿದೆ. ಅವರಿಗೆ ಸೂಕ್ತ ವಿರಾಮ, ರಜೆ ನೀಡಿಲ್ಲ. ಮಲಗಲು ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಮನೆಯಿಂದ ಹೊರಗೆ ಹೋಗದಂತೆ ತಡೆದು ಅಸಯನೀಯ ಪರಿಸ್ಥಿತಿಯಲ್ಲಿ ಕೆಲಸ ಮಾಡಿಸಿಕೊಳ್ಳಲಾಗಿದೆ. ಕಾರ್ಮಿಕರ ಪಾಸ್ಪೋರ್ಟ್ ವಶಪಡಿಸಿಕೊಂಡು ಅವರನ್ನು ಶೋಷಣೆ ಮಾಡಿದೆ. ಅವರಿಗೆ ಸ್ವಿಸ್ ಫ್ರಾಂಕ್ ಬದಲು ರುಪಾಯಿ ಲೆಕ್ಕದಲ್ಲಿ ವೇತನ ನೀಡಿದೆ ಎಂದು ನ್ಯಾಯಾಲಯ ಹೇಳಿದೆ.
ಆದರೆ ಕುಟುಂಬದ ವಿರುದ್ಧ ಹೊರಿಸಿದ್ದ ಕಾರ್ಮಿಕರ ಕಳ್ಳಸಾಗಣೆ ಆರೋಪವನ್ನು ಕೋರ್ಟ್ ಕೈಬಿಟ್ಟಿದೆ. ಹೀಗಾಗಿ ದೊಡ್ಡ ಮಟ್ಟದ ಶಿಕ್ಷೆಯಿಂದ ಕುಟುಂಬ ಪಾರಾಗಿದೆ.