50 ವರ್ಷಗಳ ಅಸಾದ್‌ ಸರ್ವಾಧಿಕಾರಿ ಆಳ್ವಿಕೆ ಅಂತ್ಯ : ಅಂತರ್ಯುದ್ಧ ತಾರ್ಕಿಕ ಅಂತ್ಯದ ಘಟ್ಟಕ್ಕೆ

| Published : Dec 09 2024, 12:46 AM IST / Updated: Dec 09 2024, 06:06 AM IST

ಸಾರಾಂಶ

 ಸಿರಿಯಾದಲ್ಲಿ 14 ವರ್ಷಗಳಿಂದ ನಡೆಯುತ್ತಿದ್ದ ಹಾಗೂ 5 ಲಕ್ಷ ಜನರ ಮಾರಣಹೋಮಕ್ಕೆ ಕಾರಣವಾಗಿದ್ದ ಅಂತರ್ಯುದ್ಧ ತಾರ್ಕಿಕ ಅಂತ್ಯದ ಘಟ್ಟಕ್ಕೆ ತಲುಪಿದ್ದು, ದೇಶದ ಅಧ್ಯಕ್ಷರಾಗಿದ್ದ ಸರ್ವಾಧಿಕಾರಿ ಬಷರ್ ಅಲ್‌ ಅಸಾದ್‌ ದೇಶ ಬಿಟ್ಟು ಭಾನುವಾರ ನಸುಕಿನಲ್ಲಿ ಅಜ್ಞಾತ ಸ್ಥಳಕ್ಕೆ ಪರಾರಿಯಾಗಿದ್ದಾರೆ 

ಡಮಾಸ್ಕಸ್: ಮಧ್ಯಪ್ರಾಚ್ಯ ಇಸ್ಲಾಮಿಕ್‌ ದೇಶ ಸಿರಿಯಾದಲ್ಲಿ 14 ವರ್ಷಗಳಿಂದ ನಡೆಯುತ್ತಿದ್ದ ಹಾಗೂ 5 ಲಕ್ಷ ಜನರ ಮಾರಣಹೋಮಕ್ಕೆ ಕಾರಣವಾಗಿದ್ದ ಅಂತರ್ಯುದ್ಧ ತಾರ್ಕಿಕ ಅಂತ್ಯದ ಘಟ್ಟಕ್ಕೆ ತಲುಪಿದ್ದು, ದೇಶದ ಅಧ್ಯಕ್ಷರಾಗಿದ್ದ ಸರ್ವಾಧಿಕಾರಿ ಬಷರ್ ಅಲ್‌ ಅಸಾದ್‌ ದೇಶ ಬಿಟ್ಟು ಭಾನುವಾರ ನಸುಕಿನಲ್ಲಿ ಅಜ್ಞಾತ ಸ್ಥಳಕ್ಕೆ ಪರಾರಿಯಾಗಿದ್ದಾರೆ. ಈ ಮೂಲಕ ಅಸಾದ್‌ ಅವರ 24 ವರ್ಷದ ಆಳ್ವಿಕೆ ಹಾಗೂ ಅವರ ಕುಟುಂಬದ 50 ವರ್ಷದ ಆಳ್ವಿಕೆ ಅಂತ್ಯಗೊಂಡಿದೆ.

ಅಲ್‌ಖೈದಾ ಬೆಂಬಲಿತ ಹಯಾತ್ ತಹ್ರೀರ್ ಅಲ್-ಶಾಮ್ (ಎಚ್‌ಟಿಎಸ್) ಎಂಬ ಉಗ್ರ ಸಂಘಟನೆಯ ನಾಯಕ ಅಬು ಮೊಹಮ್ಮದ್ ಅಲ್-ಗೋಲಾನಿ ಕಳೆದ 2011ರಿಂದ ಅಸಾದ್‌ ಸರ್ವಾಧಿಕಾರದ ವಿರುದ್ಧದ ದಂಗೆಯ ನೇತೃತ್ವ ವಹಿಸಿದ್ದ. ಈ ದಂಗೆ ಸುಮಾರು ಒಂದೂವರೆ ದಶಕಗಳ ಬಳಿಕ ಫಲ ನೀಡಿದ್ದು, ರಾಜಧಾನಿ ಡಮಾಸ್ಕಸ್‌ ಬಂಡುಕೋರರ ವಶಕ್ಕೆ ಬಂದಿದೆ. ಅಧ್ಯಕ್ಷೀಯ ಅರಮನೆಯನ್ನೂ ಬಂಡುಕೋರರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ದೇಶದ ಹಾಲಿ ಪ್ರಧಾನಿ ಮೊಹಮ್ಮದ್ ಅಲ್-ಜಲಾಲಿ ಅವರನ್ನು ಸದ್ಯದ ಮಟ್ಟಿಗೆ ಅಧಿಕಾರ ಹಸ್ತಾಂತರ ಪೂರ್ಣಗೊಳ್ಳುವ ಪ್ರಕ್ರಿಯೆವರೆಗೆ ಮುಂದುವರಿಯಲು ಉಗ್ರ ನಾಯಕ ಗೋಲಾನಿ ಸೂಚಿಸಿದ್ದಾನೆ ಹಾಗೂ ಅಧಿಕಾರ ಹಸ್ತಾಂತರಕ್ಕೆ ಪ್ರಾಧಿಕಾರ ರಚಿಸಲು ತಾಕೀತು ಮಾಡಿದ್ದಾನೆ. ಇದರ ಬೆನ್ನಲ್ಲೇ ಮಾತನಾಡಿರುವ ಗೋಲಾನಿ, ‘ಬಂಡುಕೋರರಿಗೆ ನಾನು ಅಧಿಕಾರ ಹಸ್ತಾಂತರಿಸಲು ಸಿದ್ಧ’ ಎಂದಿದ್ದು, ಮುಂದೆ ಚುನಾವಣೆ ನಡೆಯಲಿ ಎಂಬ ಮನವಿಯನ್ನೂ ಮಾಡಿದ್ದಾರೆ.

ರಾಜಧಾನಿ ಉಗ್ರರ ತೆಕ್ಕೆಗೆ:

2011ರಿಂದ ಅಸಾದ್‌ ಸರ್ವಾಧಿಕಾರದ ವಿರುದ್ಧ ದಂಗೆ ಆರಂಭವಾಗಿತ್ತು. ಅಲ್‌ ಖೈದಾ ಬೆಂಬಲಿತ ಹಯಾತ್ ತಹ್ರೀರ್ ಅಲ್-ಶಾಮ್ (ಎಚ್‌ಟಿಎಸ್) ಬಂಡುಕೋರರು ಇದರ ನೇತೃತ್ವ ವಹಿಸಿದ್ದರು. 2018ರವರೆಗೆ ಜೋರಾಗಿ ನಡೆದಿದ್ದ ದಂಗೆಯನ್ನು ಆ ಬಳಿಕ ಇರಾನ್‌, ಹಿಜ್ಬುಲ್ಲಾ ಉಗ್ರರು ಹಾಗೂ ರಷ್ಯಾ ಬೆಂಬಲದೊಂದಿಗೆ ಅಸಾದ್‌ ಯಶಸ್ವಿಯಾಗಿ ಹತ್ತಿಕ್ಕಿದ್ದರು.

ಆದರೆ ಇತ್ತೀಚೆಗೆ ಎಚ್‌ಟಿಎಸ್‌ ಉಗ್ರರ ಮೇಲೆ ಅಸಾದ್‌ ಸ್ನೇಹಿ ದೇಶ ರಷ್ಯಾ ವಾಯುದಾಳಿ ಆರಂಭಿಸಿತ್ತು. ಇದರಿಂದ ವ್ಯಗ್ರರಾದ ಎಚ್‌ಟಿಎಸ್‌ ಉಗ್ರರು ಕಳೆದ 1 ವಾರದಿಂದ ಮತ್ತೆ ದಂಗೆ ಆರಂಭಿಸಿ ಶನಿವಾರದವರೆಗೆ 4 ಪ್ರಮುಖ ನಗರಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಕೊನೆಗೆ ಶನಿವಾರ ತಡರಾತ್ರಿ ಅಥವಾ ಭಾನುವಾರ ನಸುಕಿನಲ್ಲಿ ರಾಜಧಾನಿ ಡಮಾಸ್ಕಸ್‌ ಅನ್ನೂ ತನ್ನ ವಶಕ್ಕೆ ತೆಗೆದುಕೊಂಡಿದ್ದಾರೆ. ಉಗ್ರರ ಆರ್ಭಟಕ್ಕೆ ಬೆಚ್ಚಿ ಸೇನೆಯು ಶಸ್ತ್ರಾಸ್ತ್ರ ಬಿಟ್ಟು ಪರಾರಿ ಆಗಿದೆ. ಹಿಜ್ಬುಲ್ಲಾ ಸಂಘಟನೆ ಕೂಡ ಸೇನೆಗೆ ತಣ್ಣಗಾಗುವಂತೆ ಸೂಚಿಸಿದೆ.

ಇದರ ಬೆನ್ನಲ್ಲೇ ಅಸಾದ್‌ ದೇಶ ಬಿಟ್ಟು ಅಜ್ಞಾತ ಸ್ಥಳಕ್ಕೆ ವಿಮಾನವೊಂದನ್ನು ಹತ್ತಿ ಶನಿವಾರ ತಡರಾತ್ರಿ ಪರಾರಿಯಾಗಿದ್ದಾರೆ. ಅವರ ವಿಮಾನ ಎತ್ತ ಹೋಯಿತು ಎಂಬ ಸುಳಿವು ರಾಡಾರ್‌ಗೂ ಸಿಕ್ಕಿಲ್ಲ ಎನ್ನಲಾಗಿದ್ದು, ವಿಮಾನ ಪತನದ ವದಂತಿಯೂ ಹರಡಿದೆ.

ನಂತರ ಡಮಾಸ್ಕಸ್‌ ಅಧ್ಯಕ್ಷೀಯ ಅರಮನೆಗೆ ನುಗ್ಗಿದ ಉಗ್ರರು ಅಧ್ಯಕ್ಷೀಯ ಅರಮನೆ ತಮ್ಮ ವಶಕ್ಕೆ ಬಂದಿದೆ ಎಂಬ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ದೇಶದ ಜೈಲುಗಳ ಎಲ್ಲ ಕೈದಿಗಳ ಬಿಡುಗಡೆಗೆ ಸೂಚಿದ್ದಾರೆ. ಅಲ್ಲದೆ, ‘ಸಿರಿಯಾ ದೇಶ ಸ್ವತಂತ್ರವಾಗಿದೆ’ ಎಂದು ಘೋಷಿಸಿದ್ದಾರೆ.

ಇರಾನ್‌ ದೂತಾವಾಸ ಮೇಲೆ ದಾಳಿ:

ಈ ನಡುವೆ, ಬಂಡುಕೋರರು ಇರಾನ್‌ ದೂತಾವಾಸಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂದು ವರದಿಗಳು ಹೇಳಿವೆ.

ಜನರ ಸಂಭ್ರಮ, ಅಧ್ಯಕ್ಷ ಅರಮನೆ ವಸ್ತು ಲೂಟಿ:

ಅಸಾದ್ ಸರ್ಕಾರ ಪತನಗೊಳ್ಳುತ್ತಿದ್ದಂತೆಯೇ ಸಿರಿಯಾ ಬೀದಿಗಳಲ್ಲಿ ಜನರು ಸಂಭ್ರಮಾಚರಣೆ ನಡೆಸಿದರು ಹಾಗೂ ಉಗ್ರ ನಾಯಕ ಗೋಲಾನಿ ಇತಿಹಾಸ ಸೃಷ್ಟಿಸಿದ ಎಂದು ಕೊಂಡಾಡಿದರು. ಕೆಲವರು ಅಧ್ಯಕ್ಷೀಯ ಅರಮನೆಗೆ ನುಗ್ಗಿ ಸಿಕ್ಕ ಸಿಕ್ಕ ವಸ್ತು ಲೂಟಿ ಮಾಡಿದರು.

5 ಲಕ್ಷ ಜನರ ಸಾವಿಗೆ ಕಾರಣವಾದ ಸಿರಿಯಾ ದಂಗೆ

ಡಮಾಸ್ಕಸ್‌: ಬಷರ್‌ ಅಲ್‌ ಅಸಾದ್‌ ಸರ್ವಾಧಿಕಾರಿ ಹಾಗೂ ದಮನಕಾರಿ ನೀತಿಗಳ ವಿರುದ್ಧ ಬಂಡೆದ್ದ ಜನರು 2011ರಲ್ಲಿ ದಂಗೆ ಆರಂಭಿಸಿದರು. ಈ ದಂಗೆಗೆ ಅಲ್‌ ಖೈದಾ ಬೆಂಬಲಿತ ಉಗ್ರ ಸಂಘಟನೆ ಹಯಾತ್ ತಹ್ರೀರ್ ಅಲ್-ಶಾಮ್ (ಎಚ್‌ಟಿಎಸ್) ಬೆಂಬಲವಿತ್ತು.

ಆದರೆ ಈ ದಂಗೆಯ ವಿರುದ್ಧವೂ ಕ್ರೂರತೆ ಮೆರೆದ ಅಸಾದ್, ದಂಗೆಕೋರರನ್ನು ನಿರ್ದಯವಾಗಿ ಕೊಲ್ಲಿಸಿದರು. ಸುಮಾರು 5 ಲಕ್ಷ ಜನರು ಸುಮಾರು 14 ವರ್ಷ ಕಾಲ ನಡೆದ ದಂಗೆಯಲ್ಲಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಸುಮಾರು 1 ಲಕ್ಷ ಜನರನ್ನು ನೇಣುಗಂಬಕ್ಕೇರಿಸಲಾಗಿತ್ತು ಎಂದು ಮಾನವ ಹಕ್ಕು ಸಂಘಟನೆಗಳು ಹೇಳಿವೆ. ಅಂತರ್ಯುದ್ಧದಿಂದ 60 ಲಕ್ಷ ನಿರಾಶ್ರಿತರಾಗಿದ್ದಾರೆ ಮತ್ತು ಲೆಕ್ಕವಿಲ್ಲದಷ್ಟು ಜನರು ಸ್ಥಳಾಂತರಗೊಂಡಿದ್ದಾರೆ.

ಅಸಾದ್‌ ಅರಮನೆಗೆ ನುಗ್ಗಿದ ಜನ; ವಸ್ತುಗಳ ಲೂಟಿ!

ಡಮಾಸ್ಕಸ್‌: ಸಿರಿಯಾ ಅಧ್ಯಕ್ಷ ಬಷರ್‌ ಅಲ್‌ ಅಸಾದ್‌, ದಂಗೆಗೆ ಬೆಚ್ಚಿ ದೇಶ ಬಿಟ್ಟು ಓಡಿ ಹೋದ ಕಾರಣ ಅವರ ಅರಮನೆಗೆ ನುಗ್ಗಿದ ಜನರು, ಅವರ ಮನೆಯಲ್ಲಿನ ಸಿಕ್ಕ ಸಿಕ್ಕ ವಸ್ತುಗಳನ್ನು ಲೂಟಿ ಮಾಡಿದ್ದಾರೆ.

ಇದೇ ವೇಳೆ, ಆತನ ಆಡಳಿತಕ್ಕೆ ಬೇಸತ್ತಿದ್ದ ಜನರು ಸಿರಿಯಾ ಬೀದಿ ಬೀದಿಗಳಲ್ಲಿ ಸಂಭ್ರಮಾಚರಣೆ ನಡೆಸುತ್ತಿದ್ದು, ‘ಆತ ಓಡಿ ಹೋದ ಎಂದರೆ ನಂಬೋಕೇ ಆಗ್ತಿಲ್ಲ. ಇದೊಂದು ಅಭೂತಪೂರ್ವ ದಿನ’ ಎಂದಿದ್ದಾರೆ. ಅಲ್ಲದೆ, ಬಂಡುಕೋರರಿಗೆ ಬೆಚ್ಚಿ ಸಿರಿಯಾ ಸೇನೆ ಬಿಟ್ಟು ಹೋದ ಗನ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ.ಡಮಾಸ್ಕಸ್‌ನಲ್ಲಿ ಗಲಾಟೆ ಮಾಡಬೇಡಿ ಎಂದು ಬಂಡುಕೋರ ನಾಯಕ ಗೋಲಾನಿ ಸೂಚನೆ ನೀಡಿದ್ದರೂ ಕೇಳದ ಜನರು, ಅಸಾದ್ ಓಡಿಹೋದ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಅಧ್ಯಕ್ಷರ ಅರಮನೆಗೆ ನುಗ್ಗಿದರು ಹಾಗೂ ಅಸಾದ್ ಅವರ ವೈಯಕ್ತಿಕ ವಸ್ತುಗಳನ್ನು ಲೂಟಿ ಮಾಡಿದರು. ಲೂಟಿಗೊಳಗಾದ ವಸ್ತುಗಳಲ್ಲಿ ತಟ್ಟೆ, ಲೋಟ, ಪ್ಲೇಟ್‌ಗಳು, ಹೂಜಿಗಳು ಇತ್ಯಾದಿ ಸೇರಿವೆ. ಇನ್ನೂ ಅನೇಕರ ಅರಮನೆ ಒಳಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು. ಅದರಲ್ಲಿನ ಕೋಣೆಗಳಿಗೆ ಹೊಕ್ಕು ಕುರ್ಚಿ, ಹಾಸಿಕೆಯ ಮೇಲೆ ಆರಾಮವಾಗಿ ಕುಳಿತು ಸಂಭ್ರಮಿಸಿದರು.

ಇದೇ ರೀತಿಯ ದೃಶ್ಯ ಇತ್ತೀಚೆಗೆ ಬಾಂಗ್ಲಾ ಹಾಗೂ ಶ್ರೀಲಂಕಾ ದಂಗೆ ಬಳಿಕ ಅಲ್ಲಿನ ಅಧ್ಯಕ್ಷ/ಪ್ರಧಾನಿಗಳು ಓಡಿಹೋದಾಗಲೂ ಕಂಡುಬಂದಿತ್ತು.

ಅಸಾದ್‌ ಪತನಕ್ಕೆ ಕಾರಣವಾದ ಉಗ್ರ ನಾಯಕ ಗೋಲಾನಿ

ಡಮಾಸ್ಕಸ್‌: ಸಿರಿಯಾ ಪದಚ್ಯುತ ಅಧ್ಯಕ್ಷ ಬಷರ್‌ ಅಲ್‌ ಅಸಾದ್‌ ಅವರ ವಿರುದ್ಧ ಸಮರ ಸಾರಿರುವುದು ಹಯಾತ್ ತಹ್ರೀರ್ ಅಲ್-ಶಾಮ್ (ಎಚ್‌ಟಿಎಸ್) ಎಂಬ ಇಸ್ಲಾಮಿಕ್‌ ಮೈತ್ರಿಕೂಟದ ಸಂಘಟನೆ. ಅಬು ಮೊಹಮ್ಮದ್ ಅಲ್-ಗೋಲಾನಿ, ಎಚ್‌ಟಿಎಸ್ ಕೂಟದ ನಾಯಕ. ಎಚ್‌ಟಿಎಸ್‌ ಅಲ್-ಖೈದಾ ಬೆಂಬಲಿತ ಸಂಘಟನೆಯಾಗಿದೆ ಮತ್ತು ಪಾಶ್ಚಿಮಾತ್ಯ ಸರ್ಕಾರಗಳಿಂದ ಉಗ್ರ ಸಂಘಟನೆ ಎಂದು ಪರಿಗಣಿತವಾಗಿದೆ.2018ರಲ್ಲೂ ಎಚ್‌ಟಿಎಸ್‌ ಬಂಡುಕೋರು ಡಮಾಸ್ಕಸ್‌ಗೆ ನುಗ್ಗಿದ್ದರು. ಆದರೆ ಇರಾನ್‌ ಸಹಾಯದಿಂದ ಅಸಾದ್‌ ಅವರು ಬಂಡುಕೋರರನ್ನು ಹಿಮ್ಮೆಟ್ಟಿಸಿದ್ದರು ಹಾಗೂ ಬಂಡುಕೋರರ ವಶದಲ್ಲಿದ್ದ ಪ್ರದೇಶಗಳನ್ನು ಮರುವಶ ಮಾಡಿಕೊಂಡಿದ್ದರು.

ಆದರೆ ಈಗ ಬಂಡುಕೋರರ ಮೇಲೆ ರಷ್ಯಾ ದಾಳಿ ಆರಂಭಿಸಿತ್ತು. ಇದರಿಂದಾಗಿ, 6 ವರ್ಷ ತಣ್ಣಗಿದ್ದ ಉಗ್ರರು ಪ್ರತಿದಾಳಿ ಆರಂಭಿಸಿ ಯಶಕಂಡಿದ್ದಾರೆ. ಒಂದೇ ವಾರದಲ್ಲಿ 4 ಸಿರಿಯಾ ನಗರಗಳನ್ನು ವಶಕ್ಕೆ ತೆಗೆದುಕೊಂಡ ಬಂಡುಕೋರರು ಈಗ ಡಮಾಸ್ಕಸ್‌ಗೂ ನುಗ್ಗಿದ್ದಾರೆ.ಇತ್ತೀಚೆಗೆ ಎಚ್‌ಟಿಎಸ್‌ ನಾಯಕ ಗೋಲಾನಿ ಸಂದರ್ಶನವೊಂದರಲ್ಲಿ ಮಾತನಾಡಿ, ‘ಅಸಾದ್‌ನನ್ನು ಪದಚ್ಯುತಗೊಳಿಸುವುದು ನಮ್ಮ ಮುಖ್ಯ ಗುರಿ’ ಎಂದಿದ್ದ.