ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ತೆಲಂಗಾಣದ ಎಲ್ಲಾ ಶಾಲೇಲೂ ಇನ್ನು ತೆಲುಗು ಭಾಷೆ ಕಡ್ಡಾಯ

| N/A | Published : Feb 27 2025, 12:33 AM IST / Updated: Feb 27 2025, 04:23 AM IST

ಸಾರಾಂಶ

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸಿಬಿಎಸ್‌ಇ, ಐಸಿಎಸ್‌ಇ, ಐಬಿ ಮತ್ತು ಇತರ ಮಂಡಳಿಗಳ ಸಂಯೋಜಿತ ಶಾಲೆ ಸೇರಿದಂತೆ ರಾಜ್ಯದ ಎಲ್ಲಾ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ತೆಲುಗು ಭಾಷೆಯನ್ನು ಕಡ್ಡಾಯ ವಿಷಯವಾಗಿ ಕಲಿಸಲು ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ.

ಹೈದರಾಬಾದ್: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸಿಬಿಎಸ್‌ಇ, ಐಸಿಎಸ್‌ಇ, ಐಬಿ ಮತ್ತು ಇತರ ಮಂಡಳಿಗಳ ಸಂಯೋಜಿತ ಶಾಲೆ ಸೇರಿದಂತೆ ರಾಜ್ಯದ ಎಲ್ಲಾ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ತೆಲುಗು ಭಾಷೆಯನ್ನು ಕಡ್ಡಾಯ ವಿಷಯವಾಗಿ ಕಲಿಸಲು ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರಿ ಜಿಲ್ಲಾ ಪರಿಷತ್, ಮಂಡಲ ಪರಿಷತ್, ಅನುದಾನಿತ ಶಾಲೆಗಳು ಹಾಗೂ ಸಿಬಿಎಸ್‌ಇ, ಐಸಿಎಸ್‌ಇ, ಐಬಿ ಮತ್ತು ಇತರ ಮಂಡಳಿಯ ಸಂಯೋಜಿತ ಶಾಲೆಗಳಲ್ಲಿ ತೆಲುಗು ಬೋಧನೆಯನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರವು 2018ರಲ್ಲಿ ತೆಲಂಗಾಣ (ಶಾಲೆಗಳಲ್ಲಿ ತೆಲುಗು ಕಡ್ಡಾಯ ಬೋಧನೆ ಮತ್ತು ಕಲಿಕೆ) ಕಾಯ್ದೆಯನ್ನು ತಂದಿದೆ.

ಪ್ರಸ್ತುತ ಕಾಂಗ್ರೆಸ್ ಸರ್ಕಾರವು ರಾಜ್ಯದ ಶಾಲೆಗಳಲ್ಲಿ ಇದರ ಅನುಷ್ಠಾನಕ್ಕೆ ಕ್ರಮಗಳನ್ನು ಕೈಗೊಂಡಿದೆ. ಈ ಉದ್ದೇಶಕ್ಕಾಗಿ ಆಡಳಿತ ಮಂಡಳಿಗಳೊಂದಿಗೆ ಸಭೆ ನಡೆಸಲಾಗಿದೆ. ತೆಲುಗು ಮಾತೃಭಾಷೆಯಲ್ಲದ ವಿದ್ಯಾರ್ಥಿಗಳಿಗೆ ಸುಲಭವಾಗಿ ತೆಲುಗು ಕಲಿಯಲು ಅನುಕೂಲವಾಗುವಂತೆ ‘ವೆನ್ನೆಲಾ’ ಪಠ್ಯಪುಸ್ತಕಗಳನ್ನು ಒದಗಿಸಲು ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ನಿರ್ಧರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.