25 ವರ್ಷಗಳಲ್ಲೇ ಬಲಿಷ್ಠವಾದ ಭೂಕಂಪಕ್ಕೆ ತೈವಾನ್‌ ತತ್ತರ

| Published : Apr 04 2024, 01:03 AM IST / Updated: Apr 04 2024, 05:50 AM IST

ಸಾರಾಂಶ

25 ವರ್ಷಗಳಲ್ಲೇ ಅತ್ಯಂತ ಬಲಿಷ್ಠವಾದ ಭೂಕಂಪನ ದ್ವೀಪರಾಷ್ಟ್ರ ತೈವಾನ್‌ನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ್ದು, ಕಟ್ಟಡಗಳು ಹಾಗೂ ಹೆದ್ದಾರಿಗಳಿಗೆ ಅಪಾರ ಹಾನಿಯಾಗಿದೆ.

ತೈಪೆ: 25 ವರ್ಷಗಳಲ್ಲೇ ಅತ್ಯಂತ ಬಲಿಷ್ಠವಾದ ಭೂಕಂಪನ ದ್ವೀಪರಾಷ್ಟ್ರ ತೈವಾನ್‌ನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ್ದು, ಕಟ್ಟಡಗಳು ಹಾಗೂ ಹೆದ್ದಾರಿಗಳಿಗೆ ಅಪಾರ ಹಾನಿಯಾಗಿದೆ. 7 ಮಂದಿ ಸಾವಿಗೀಡಾಗಿದ್ದಾರೆ. 7.2 ತೀವ್ರತೆಯ ಕಂಪನ ಇದಾಗಿದ್ದು, ಸಮುದ್ರದಾಳದಲ್ಲಿ ಘಟಿಸಿದೆ. ಹೀಗಾಗಿ ಆರಂಭದಲ್ಲಿ ಸುನಾಮಿ ಮುನ್ಸೂಚನೆ ನೀಡಿದ್ದ ತೈವಾನ್‌ ಬಳಿಕ ಹಿಂಪಡೆದುಕೊಂಡಿದೆ. 

ತೈವಾನ್‌ನಿಂದ ಕೇವಲ 160 ಕಿ.ಮೀ. ದೂರದಲ್ಲಿರುವ ಚೀನಾದ ವಿವಿಧೆಡೆ ಹಾಗೂ ಶಾಂಘೈನಲ್ಲೂ ಭೂಕಂಪನದ ಅನುಭವವಾಗಿದೆ.ಬೆಳಗ್ಗೆ 8ರ ವೇಳೆಗೆ ಕಂಪನ ಸಂಭವಿಸಿದ್ದು, ಇದು 7.2ರ ತೀವ್ರತೆ ಹೊಂದಿತ್ತು ಎಂದು ತೈವಾನ್‌ ಭೂಕಂಪ ಮಾಪನ ಸಂಸ್ಥೆ ತಿಳಿಸಿದೆ. 1999ರ ಸೆ.21ರಂದು ತೈವಾನ್‌ನಲ್ಲಿ 7.7 ತೀವ್ರತೆಯ ಕಂಪನ ಸಂಭವಿಸಿ 2400 ಮಂದಿ ಸಾವಿಗೀಡಾಗಿದ್ದರು. 1 ಲಕ್ಷ ಮಂದಿ ಗಾಯಗೊಂಡು, ಸಾವಿರಾರು ಕಟ್ಟಡಗಳು ಧರೆಗೆ ಉರುಳಿದ್ದವು.

ಬುಧವಾರದ ಕಂಪನದಿಂದಾಗಿ ತೈವಾನ್‌ ರಾಜಧಾನಿ ತೈಪೆಯಲ್ಲಿನ ಹಳೆಯ ಕಟ್ಟಡಗಳಿಂದ ಟೈಲ್ಸ್‌ಗಳು ಕಳಚಿಬಿದ್ದಿವೆ. ಶಾಲೆಗಳಿಂದ ಮಕ್ಕಳನ್ನು ಮೈದಾನಕ್ಕೆ ತೆರವುಗೊಳಿಸಲಾಯಿತು. ಹಳದಿ ಬಣ್ಣದ ಹೆಲ್ಮೆಟ್‌ ತೊಡಿಸಲಾಯಿತು. ಕೆಲವು ವಿದ್ಯಾರ್ಥಿಗಳು ಆತಂಕದಿಂದ ಪುಸ್ತಕಗಳನ್ನು ತಲೆ ಮೇಲೆ ಹಿಡಿದು ಹೆದರಿ ನಿಂತಿದ್ದ ದೃಶ್ಯಗಳು ಕಂಡುಬಂದಿವೆ.

ಭೂಕಂಪನ ಕೇಂದ್ರ ಬಿಂದುವಿಗೆ ಸಮೀಪದಲ್ಲಿರುವ ಹುವಾಲಿಯೆನ್‌ ಪಟ್ಟಣದಲ್ಲಿ ಐದು ಅಂತಸ್ತಿನ ಕಟ್ಟಡವೊಂದು 45 ಡಿಗ್ರಿಯಷ್ಟು ವಾಲಿದೆ. ಅದರ ಮೊದಲ ಮಹಡಿ ಸಂಪೂರ್ಣ ಧ್ವಂಸಗೊಂಡಿದೆ. ಭೂಕಂಪನದ ಬಳಿಕ ಹಲವು ಪಶ್ಚಾತ್‌ ಕಂಪನಗಳು ಸಂಭವಿಸಿ, ಭೂಕುಸಿತ ಸೇರಿ ಸಾಕಷ್ಟು ಹಾನಿಯುಂಟು ಮಾಡಿವೆ. ಹಾನಿಯ ನಿಖರ ಅಂದಾಜು ಇನ್ನಷ್ಟೇ ಗೊತ್ತಾಗಬೇಕಿದೆ.

ತೈವಾನ್‌ಗೆ ಭೂಕಂಪ ಹೊಸತಲ್ಲವಾದರೂ, 25 ವರ್ಷಗಳಲ್ಲೇ ಬಲಿಷ್ಠವಾದ ಕಂಪನ ಸಂಭವಿಸಿದ್ದರಿಂದ ಜನರು ಆತಂತಕ್ಕೆ ಒಳಗಾಗಿದ್ದಾರೆ.