ನೀಟ್‌ ರದ್ದು ಮಾಡಿ: ತ.ನಾಡು ಸರ್ಕಾರಕ್ಕೆ ಆಯೋಗದ ವರದಿ

| Published : Jun 11 2024, 01:36 AM IST / Updated: Jun 11 2024, 08:26 AM IST

ಸಾರಾಂಶ

ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕಾಗಿ ನಡೆಸಲಾಗುವ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (ನೀಟ್‌)ಯನ್ನು ಕಾನೂನು ಅಥವಾ ಶಾಸನ ರಚನೆ ಪ್ರಕ್ರಿಯೆಗಳ ಮೂಲಕ ರದ್ದುಪಡಿಸುವಂತೆ ತಮಿಳುನಾಡು ಸರ್ಕಾರಕ್ಕೆ ಆಯೋಗವೊಂದು ಶಿಫಾರಸು ಮಾಡಿದೆ.

 ಚೆನ್ನೈ :  ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕಾಗಿ ನಡೆಸಲಾಗುವ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (ನೀಟ್‌)ಯನ್ನು ಕಾನೂನು ಅಥವಾ ಶಾಸನ ರಚನೆ ಪ್ರಕ್ರಿಯೆಗಳ ಮೂಲಕ ರದ್ದುಪಡಿಸುವಂತೆ ತಮಿಳುನಾಡು ಸರ್ಕಾರಕ್ಕೆ ಆಯೋಗವೊಂದು ಶಿಫಾರಸು ಮಾಡಿದೆ. ಮೊದಲ ವರ್ಷದ ವೈದ್ಯಕೀಯ ಕೋರ್ಸ್‌ಗಳಿಗೆ 12ನೇ ತರಗತಿಯ ಅಂಕಗಳನ್ನೇ ಆಧರಿಸಿ ಪ್ರವೇಶಾವಕಾಶ ಕಲ್ಪಿಸುವಂತೆಯೂ ಸಲಹೆ ಮಾಡಿದೆ.

ವಿವಿಧ ಬೋರ್ಡ್‌ಗಳಡಿ ಶಿಕ್ಷಣ ಪಡೆದಿರುವ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳು ಸಿಗುವಂತೆ ಸರ್ಕಾರ ಮಾಡಬೇಕು ಎಂದು ಮದ್ರಾಸ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾ। ಎ.ಕೆ. ರಾಜನ್‌ ನೇತೃತ್ವದ ಅತ್ಯುನ್ನತ ಸಮಿತಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

ತಮಿಳುನಾಡು ಸರ್ಕಾರ ಈ ವರದಿಯನ್ನು ಕನ್ನಡ, ತೆಲುಗು, ಮಲಯಾಳ ಸೇರಿದಂತೆ ಪ್ರಾದೇಶಿಕ ಭಾಷೆಗಳಿಗೂ ತರ್ಜುಮೆಗೊಳಿಸಿದೆ. ಅಲ್ಲದೆ ಹಲವು ರಾಜ್ಯ ಸರ್ಕಾರಗಳ ಜತೆಗೆ ವರದಿಯನ್ನು ಹಂಚಿಕೊಂಡಿದ್ದು, ನೀಟ್‌ ಬಡ ವಿದ್ಯಾರ್ಥಿಗಳ ವಿರೋಧಿ ಹಾಗೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದಾಗಿದೆ ಎಂಬ ತನ್ನ ವಾದ ಸತ್ಯ ಎಂದು ಸಾಬೀತುಪಡಿಸಲು ಯತ್ನಿಸಿದೆ.

ತಮಿಳುನಾಡಿನಲ್ಲಿ 2021ರಲ್ಲಿ ಅಧಿಕಾರಕ್ಕೆ ಬಂದ ಎಂ.ಕೆ. ಸ್ಟಾಲಿನ್‌ ನೇತೃತ್ವದ ಡಿಎಂಕೆ ಸರ್ಕಾರ, ನೀಟ್‌ ಆಧರಿತ ಪ್ರವೇಶ ಪರೀಕ್ಷೆಯ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ನ್ಯಾ। ಎ.ಕೆ. ರಾಜನ್ ನೇತೃತ್ವದಲ್ಲಿ ತಜ್ಞರ ಆಯೋಗವನ್ನು ರಚನೆ ಮಾಡಿತ್ತು. ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರ ಅಭಿಪ್ರಾಯದ ಜತೆಗೆ ವಿಸ್ತೃತ ದತ್ತಾಂಶಗಳನ್ನು ವಿಶ್ಲೇಷಣೆಗೊಳಪಡಿಸಿ ಆಯೋಗ ವರದಿ ಸಿದ್ಧಪಡಿಸಿದೆ. ಈ ಕನ್ನಡ ಸೇರಿ ವಿವಿಧ ಭಾಷೆಯಲ್ಲಿರುವ ವರದಿಯನ್ನು ಸ್ಟಾಲಿನ್‌ ಅವರು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.