ಸಾರಾಂಶ
ಚೆನ್ನೈ: ನಟ ಆರ್ಯ ಅಭಿನಯದ ಸಿನಿಮಾವೊಂದರ ಸಾಹಸ ದೃಶ್ಯದ ಚಿತ್ರೀಕರಣ ವೇಳೆ ಕಾರು ಸ್ಟಂಟ್ ಮಾಡುವಾಗ ದುರಂತ ಸಂಭವಿಸಿ ಖ್ಯಾತ ಸ್ಟಂಟ್ ಮಾಸ್ಟರ್ ಮೋಹನ ರಾಜು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.ಜು.13ರಂದು ನಾಗಪಟ್ಟಿಣಂನಲ್ಲಿ ನಿರ್ದೇಶಕ ಪಾ ರಜನೀತ್ ಅಭಿನಯದ ವೆಟ್ಟುವ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಕಾರನ್ನು ರ್‍ಯಾಂಪ್ ಮೇಲೆ ಹತ್ತಿಸಿ ಗಾಳಿಯಲ್ಲಿ ತೇಲಿಸಿ ಜಂಪ್ ಮಾಡಿಸುವ ದೃಶ್ಯ ಅದಾಗಿದ್ದು, ಎಸ್‌ಯುವಿ ಕಾರನ್ನು ರಾಜು ಚಲಾಯಿಸುತ್ತಿದ್ದರು.
ಆಗ ವೇಗವಾಗಿ ಬಂದ ಎಸ್‌ಯುವಿ, ರ‍್ಯಾಂಪ್‌ಗೆ ಡಿಕ್ಕಿ ಹೊಡೆಯುತ್ತಿದ್ದಂತೆ, ಅದು ಗಾಳಿಯಲ್ಲಿ ನಿಯಂತ್ರಣ ತಪ್ಪಿ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ ಹಾಗೂ ರಭಸವಾಗಿ ಉರುಳಿ ಬಿದ್ದಿದೆ. ಚಿತ್ರೀಕರಣ ವೀಕ್ಷಿಸುತ್ತಿದ್ದವರು ಓಡಿ ಹೋಗಿ ಧ್ವಂಸಗೊಂಡ ಕಾರನ್ನು ತಲುಪಿದಾಗ, ರಾಜು ತೀವ್ರವಾಗಿ ಗಾಯಗೊಂಡಿದ್ದು ಕಂಡುಬಂದಿದೆ ಹಾಗೂ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.
ಅವರು ಕಾರು ಪಲ್ಟಿ ಹೊಡೆಯುವ ವಿಡಿಯೋಗಳು ವೈರಲ್ ಆಗಿದ್ದು ಅದರಲ್ಲಿ ಸೆಟ್‌ನಲ್ಲಿದವರು ರಾಜುವನ್ನು ರಕ್ಷಿಸಲು ಓಡುತ್ತಿರುವುದು, ಅವರನ್ನು ಕಾರಿನಿಂದ ಹೊರ ತೆಗೆಯಲು ಪ್ರಯತ್ನಿಸುತ್ತಿರುವುದು ಸೆರೆಯಾಗಿದೆ. ನಟ ವಿಶಾಲ್ ಸೇರಿ ಸಿನಿರಂಗದ ಹಲವರು ಸಂತಾಪ ಸೂಚಿಸಿದ್ದಾರೆ.