ಸಾರಾಂಶ
ಚೆನ್ನೈ: ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ರಜನೀಕಾಂತ್ ಅವರು ಸೋಮವಾರ ರಾತ್ರಿ ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ದಿಢೀರ್ ಅಸ್ವಸ್ಥರಾಗಿದ್ದು, ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಕೆಳಹೊಟ್ಟೆಯ ಭಾಗದಲ್ಲಿ ಅವರಿಗೆ ಸ್ಟಂಟ್ ಅಳವಡಿಕೆ ಮಾಡಿದ್ದಾರೆ. ಸದ್ಯ ರಜನೀಕಾಂತ್ ಅವರ ಆರೋಗ್ಯ ಸ್ಥಿರವಾಗಿದ್ದು, ಅವರನ್ನು ನಿಗಾದಲ್ಲಿ ಇಡಲಾಗಿದೆ. ಮುಂದಿನ 2-3 ದಿನಗಳ ಕಾಲ ಅವರು ಆಸ್ಪತ್ರೆಯಲ್ಲೇ ಚೇತರಿಸಿಕೊಳ್ಳಲಿದ್ದು, ಬಳಿಕ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
73 ವರ್ಷದ ರಜನೀಕಾಂತ್ ಅವರು ದಿಢೀರ್ ಆಸ್ಪತ್ರೆಗೆ ದಾಖಲಾದ ಸುದ್ದಿ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ, ರಜನಿ ಅವರ ಪತ್ನಿ ಲತಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಏನೂ ಸಮಸ್ಯೆ ಇಲ್ಲ ಎಂದು ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ.ಈ ನಡುವೆ ರಜನೀ ಅವರು ಬೇಗನೆ ಚೇತರಿಸಿಕೊಳ್ಳಲಿ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಟ್ವೀಟ್ ಮಾಡಿದ್ದಾರೆ. ಏತನ್ಮಧ್ಯೆ, ರಜನೀಕಾಂತ್ ಅವರು ಕಾಲಕಾಲಕ್ಕೆ ಮಾಡಿಸಿಕೊಳ್ಳಬೇಕಿರುವ ಆರೋಗ್ಯ ತಪಾಸಣೆ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಜನಿ ಅವರು ಮಂಗಳವಾರ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆರಳಬೇಕಿತ್ತು. ಆದರೆ ಸೋಮವಾರ ರಾತ್ರಿಯೇ ಆಸ್ಪತ್ರೆಗೆ ತೆರಳಿದ್ದರಿಂದ ಅವರನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ. ಸುಬ್ರಮಣಿಯನ್ ತಿಳಿಸಿದ್ದಾರೆ.