ಅಧಿವೇಶನದ ಮೊದಲ ದಿನ ರಾಷ್ಟ್ರಗೀತೆಯನ್ನೇ ನಿರಾಕರಿಸಿದ ತಮಿಳುನಾಡು ವಿಧಾನಸಭೆ: ವಿವಾದ

| Published : Jan 07 2025, 07:01 AM IST

cm stalin

ಸಾರಾಂಶ

: ವಿಧಾನಸಭೆ ಅಧಿವೇಶನದ ಮೊದಲ ದಿನ ರಾಜ್ಯಪಾಲರ ಭಾಷಣಕ್ಕೂ ಮುನ್ನ ರಾಷ್ಟ್ರಗೀತೆ ಗಾಯನಕ್ಕೆ ತಮಿಳುನಾಡು ರಾಜ್ಯ ಸರ್ಕಾರ ನಿರಾಕರಿಸಿದ ಘಟನೆ ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ನಡೆದಿದೆ.

ಚೆನ್ನೈ : ವಿಧಾನಸಭೆ ಅಧಿವೇಶನದ ಮೊದಲ ದಿನ ರಾಜ್ಯಪಾಲರ ಭಾಷಣಕ್ಕೂ ಮುನ್ನ ರಾಷ್ಟ್ರಗೀತೆ ಗಾಯನಕ್ಕೆ ತಮಿಳುನಾಡು ರಾಜ್ಯ ಸರ್ಕಾರ ನಿರಾಕರಿಸಿದ ಘಟನೆ ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ನಡೆದಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ರಾಜ್ಯಪಾಲ ಎನ್.ರವಿ, ಭಾಷಣ ಮಾಡದೆಯೇ ವಿಧಾನಸಭೆಯಿಂದ ಹೊರನಡೆದಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಗೌರ್ನರ್ ಮತ್ತು ಡಿಎಂಕೆ ಸರ್ಕಾರದ ನಡುವಣ ಜಟಾಪಟಿ ಮತ್ತೊಂದು ಹಂತ ತಲುಪಿದೆ. ತಮಿಳುನಾಡು ಸರ್ಕಾರದ ಈ ವರ್ತನೆ ರಾಷ್ಟ್ರೀಯತೆ, ದೇಶದ ಸಮಗ್ರತೆಗೆ ಹಾಕಿದ ಸವಾಲು ಎಂದೇ ಟೀಕೆ ಕೇಳಿಬಂದಿದೆ.

ಆದರೆ ರಾಜ್ಯಪಾಲರ ವರ್ತನೆ ಬಾಲಿಶ ಎಂದು ಕಿಡಿಕಾರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, 'ರಾಜ್ಯಪಾಲರು ಕಳೆದ ವರ್ಷ ಭಾಷಣದ ಕೆಲ ಭಾಗ ಓದಲು ನಿರಾಕರಿಸಿ ಅಪಚಾರಎಸಗಿದ್ದರು.ಈವರ್ಷ ಭಾಷಣವನ್ನೇ ಮಾಡದೇ ಹೊರ ನಡೆದಿದ್ದಾರೆ. ಇದೊಂದು ಬಾಲಿಶ ವರ್ತನೆ' ಎಂದು ಟೀಕಿಸಿದ್ದಾರೆ.

ಅವಮಾನ:

ಸೋಮವಾರ ವಿಧಾನಸಭೆಯಲ್ಲಿ ರವಿ ಭಾಷಣ ಮಾಡಲು ಆಗಮಿಸಿದ್ದರು. ಆದರೆ ಅವರ ಭಾಷಣಕ್ಕೆ ಮೊದಲು ನಾಡಗೀತೆ ಹಾಕಲಾಗಿದೆ. ಆಗ ರಾಷ್ಟ್ರಗೀತೆ ಹಾಕದ್ದಕ್ಕೆ ರವಿ ಆಕ್ಷೇಪಿಸಿದ್ದಾರೆ. ಅವರ ವಿರುದ್ದ ಆಗ ಡಿಎಂಕೆ, ಕಾಂಗ್ರೆಸ್ ಶಾಸಕರು ಸುತ್ತುವರಿದು ಧಿಕ್ಕಾರ ಕೂಗಿದ್ದಾರೆ. ಬೇಸರಗೊಂಡ ರವಿ ಸದನದಿಂದ ಹೊರನಡೆದಿದ್ದಾರೆ.

ನಡೆದ ಘಟನೆ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪ್ರತಿಕ್ರಿಯೆ ನೀಡಿರುವ ರಾಜ್ಯಪಾಲರ ಕಚೇರಿ, 'ಭಾರತದ ಸಂವಿಧಾನ ಮತ್ತು ರಾಷ್ಟ್ರಗೀತೆಗೆ ತಮಿಳುನಾಡು ವಿಧಾನಸಭೆಯಲ್ಲಿ ಮತ್ತೊಮ್ಮೆ ಅವಮಾನ ಮಾಡಲಾಗಿದೆ. ರಾಷ್ಟ್ರಗೀತೆ ಗೌರವಿಸುವುದು ನಮ್ಮ ಮೂಲಭೂತ ಕರ್ತವ್ಯ ಎಂದು ಸಂವಿಧಾನ ಹೇಳುತ್ತದೆ. ಎಲ್ಲಾ ರಾಜ್ಯಗಳ ವಿಧಾನಸಭೆಯಲ್ಲೂ ರಾಜ್ಯಪಾಲರ ಭಾಷಣ ಆರಂಭಕ್ಕೆ ಮತ್ತು ಅಂತ್ಯದ ಬಳಿಕ ರಾಷ್ಟ್ರಗೀತೆ ಹಾಡಲಾಗುತ್ತದೆ. ಆದರೆ ಇಂದು ರಾಜ್ಯಪಾಲರು ಸದನಕ್ಕೆ ಆಗಮಿಸಿದ ಬಳಿಕ ಕೇವಲ 'ತಾಯ್ ವಾಝಥು' ಮಾತ್ರ ಹಾಡಲಾಯಿತು. ಈ ವೇಳೆ ರಾಷ್ಟ್ರಗೀತೆ ಗಾಯನದ ಸಾಂವಿಧಾನಿಕ ಕರ್ತವ್ಯದ ಬಗ್ಗೆ ಸದನದ ಗಮನಕ್ಕೆ ತಂದು ಮುಖ್ಯಮಂತ್ರಿ ಸ್ಟಾಲಿನ್ ಮತ್ತು ವಿಧಾನಸಭೆಯ ಸ್ಪೀಕರ್ ಎಂ.ಅಪ್ಪಾವು ಅವರಿಗೆ ಮನವಿ ಮಾಡಲಾಯಿತಾದರೂ ಅವರು ಅದನ್ನು ತಿರಸ್ಕರಿಸಿದ್ದಾರೆ. ಇದೊಂದು ಕಳವಳದ ವಿಷಯ. ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಮಾಡಿದ ಈ ಅವಮಾನ ದಿಂದ ನೊಂದು ರಾಜ್ಯಪಾಲರು ಸದನದಿಂದ ಹೊರನಡೆದರು' ಎಂದು ತಿಳಿಸಿದೆ.

ವಿಧಾನಸಭೇಲಿ ಏನಾಯ್ತು?

* ವಿಧಾನಸಭೆ ಅಧಿವೇಶನದ ಮೊದಲ ದಿನದ ಕಲಾಪಕ್ಕೆ ತಮಿಳುನಾಡು ರಾಜ್ಯಪಾಲ ಎನ್.ರವಿ ಆಗಮನ

* ರಾಜ್ಯಪಾಲರ ಭಾಷಣಕ್ಕೆ ಮುನ್ನ ವಿಧಾನಸಭೆಯಲ್ಲಿ ನಾಡಗೀತೆ 'ತಾಯ್ ವಾಝಥು' ಗಾಯನ

* ರಾಷ್ಟ್ರಗೀತೆ ಹಾಡುವಂತೆ ಮುಖ್ಯಮಂತ್ರಿ ಹಾಗೂ ಸ್ಪೀಕರ್‌ಗೆ ರಾಜ್ಯಪಾಲ ಎನ್.ರವಿ ಸೂಚನೆ

* ಗೌರ್ನರ್ ನೀಡಿದ ಸೂಚನೆ ಪಾಲಿಸಲು ಮುಖ್ಯ ಮಂತ್ರಿ ಸ್ಟಾಲಿನ್, ಸ್ಪೀಕರ್ ಎಂ.ಅಪ್ಪಾವು ನಕಾರ

* ಸರ್ಕಾರದ ವರ್ತನೆ ಖಂಡಿಸಿ ವಿಧಾನಸಭೆಯಿಂದ ಸಭಾತ್ಯಾಗ ಮಾಡಿದ ರಾಜ್ಯಪಾಲ ಎನ್.ರವಿ