ತಮಿಳ್ನಾಡು ಗೌರ್ನರ್‌ ಆರ್‌.ಎನ್. ರವಿಗೆ ಸುಪ್ರೀಂ ಪ್ರಹಾರ

| Published : Mar 22 2024, 01:00 AM IST / Updated: Mar 22 2024, 09:02 AM IST

ತಮಿಳ್ನಾಡು ಗೌರ್ನರ್‌ ಆರ್‌.ಎನ್. ರವಿಗೆ ಸುಪ್ರೀಂ ಪ್ರಹಾರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸಚಿವ ಸಂಪುಟದಲ್ಲಿ ಡಿಎಂಕೆ ಹಿರಿಯ ನಾಯಕ ಕೆ. ಪೊನ್ಮುಡಿ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಲು ನಿರಾಕರಿಸಿದ್ದಕ್ಕಾಗಿ ತಮಿಳುನಾಡು ರಾಜ್ಯಪಾಲ ಆರ್‌.ಎನ್. ರವಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ

ಪಿಟಿಐ ನವದೆಹಲಿ: ರಾಜ್ಯ ಸಚಿವ ಸಂಪುಟದಲ್ಲಿ ಡಿಎಂಕೆ ಹಿರಿಯ ನಾಯಕ ಕೆ. ಪೊನ್ಮುಡಿ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಲು ನಿರಾಕರಿಸಿದ್ದಕ್ಕಾಗಿ ತಮಿಳುನಾಡು ರಾಜ್ಯಪಾಲ ಆರ್‌.ಎನ್. ರವಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್‌, ತನ್ನ ಆದೇಶವನ್ನೇ ರವಿ ಉಲ್ಲಂಘಿಸುತ್ತಿದ್ದಾರೆ ಎಂದು ಕಿಡಿಕಾರಿದೆ.

ಇನ್ನು 24 ತಾಸಿನಲ್ಲಿ ಪೊನ್ಮುಡಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ನಿರ್ಧರಿಸಬೇಕು ಎಂದು ಖಡಕ್‌ ಸೂಚನೆ ನೀಡಿದೆ.ಅಕ್ರಮ ಆಸ್ತಿ ಕೇಸಿನಲ್ಲಿ ಈ ಹಿಂದೆ ಪೊನ್ಮುಡಿ ಅವರಿಗೆ 3 ವರ್ಷ ಜೈಲು ಶಿಕ್ಷೆ ಆಗಿತ್ತು. ಹೀಗಾಗಿ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಆದರೆ ಇತ್ತೀಚೆಗೆ ಅವರ ಶಿಕ್ಷೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿತ್ತು. 

ಹೀಗಾಗಿ ಪೊನ್ಮುಡಿ ಅವರನ್ನು ಸಂಪುಟಕ್ಕೆ ಪುನಃ ಸೇರಿಸಿಕೊಳ್ಳಲು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರಾಜ್ಯಪಾಲ ರವಿ ಅವರಿಂದ ಅನುಮತಿ ಕೋರಿದ್ದರು. ಆದರೆ ಇದಕ್ಕೆ ರವಿ ನಿರಾಕರಿಸಿದ್ದರು.

ಇದನ್ನು ಪ್ರಶ್ನಿಸಿ ಡಿಎಂಕೆ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ। ಡಿ.ವೈ. ಚಂದ್ರಚೂಡ್‌ ಅವರಿದ್ದ ಪೀಠ ರವಿ ನಡೆಗೆ ಅಚ್ಚರಿ ವ್ಯಕ್ತಪಡಿಸಿ, ‘ರಾಜ್ಯಪಾಲರ ನಡವಳಿಕೆಯೇ ಸರಿಯಿಲ್ಲ. 

ನಮ್ಮ ಆದೇಶವನ್ನೂ ಅವರು ಪಾಲಿಸುತ್ತಿಲ್ಲ. ಪೊನ್ಮುಡಿ ಅವರ ನೇಮಕ ನೈತಿಕವಾಗಿ ಸರಿಯಲ್ಲ ಎಂಬುದು ರವಿ ಅಂಬೋಣ. ಇದನ್ನು ರಾಜ್ಯಪಾಲರು ಹೇಗೆ ಹೇಳಲು ಸಾಧ್ಯ? ಸಂವಿಧಾನದ ಪ್ರಕಾರ ನಡೆದುಕೊಳ್ಳಬೇಕಾಗಿದ್ದು ರಾಜ್ಯಪಾಲರ ಕರ್ತವ್ಯ’ ಎಂದು ಚಾಟಿ ಬೀಸಿತು.

ಈ ಹಿಂದೆ, ಕೂಡ ಮಸೂದೆಗಳಿಗೆ ಸಹಿ ಹಾಕದ ರವಿ ಅವರ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ತಪರಾಕಿ ಹಾಕಿ, ಸಚಿವ ಸಂಪುಟದ ಸಲಹೆಯಂತೆ ರಾಜ್ಯಪಾಲರು ನಡೆದುಕೊಳ್ಳಬೇಕು ಎಂದಿತ್ತು.