ಸಾರಾಂಶ
ಲಖನೌ: ಇತ್ತೀಚಿನ ದಿನಗಳಲ್ಲಿ ಹಲವು ಹಿಂದೂ- ಮುಸ್ಲಿಂ ಸಂಘರ್ಷಗಳಿಗೆ ಸಾಕ್ಷಿಯಾಗಿದ್ದ ಉತ್ತರಪ್ರದೇಶದಲ್ಲಿ ಹೋಳಿ ಹಬ್ಬದಂದು ನಡೆಯಬಹುದಾದ ಯಾವುದೇ ಅಹಿತಕರ ತಡೆಯಲು ಹಲವು ನಗರಗಳಲ್ಲಿ ಮಸೀದಿಗಳಿಗೆ ಟಾರ್ಪಾಲಿನ್ ಹೊದಿಸಲಾಗಿದೆ. ಬಣ್ಣಗಳಿಂದ ರಕ್ಷಣೆ ಒದಗಿಸುವ ಸಲುವಾಗಿ ಸಂಭಲ್‌ನ ಜಾಮಾ ಮಸೀದಿ ಸೇರಿ ಎಲ್ಲಾ ಪ್ರಮುಖ ಮಸೀದಿಗಳನ್ನು ಟಾರ್ಪಾಲಿನ್‌ನಿಂದ ಮುಚ್ಚಿ ರಕ್ಷಣೆ ನೀಡಲಾಗಿದೆ.
ಮುಸ್ಲಿಮರ ಪಾಲಿಗೆ ಪವಿತ್ರವಾದ ಶುಕ್ರವಾರದಂದೇ ಬಣ್ಣಗಳ ಹಬ್ಬವೂ ಇರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಮಸೀದಿಗಳಿಗೆ ಬಣ್ಣ ಎರಚುವ ಘಟನೆಗಳನ್ನು ತಡೆಯಲು ಸ್ಥಳೀಯ ಆಡಳಿತ ಹೊರಡಿಸಿದ ಆದೇಶದ ಮೇರೆಗೆ ಶಹಜಹಾನ್‌ಪುರ ಜಿಲ್ಲೆಯ 67 ಹಾಗೂ ಅಲೀಗಢದ ಎಲ್ಲಾ ಮಸೀದಿಗಳಿಗೆ ಹೀಗೆ ಮಾಡಲಾಗಿದೆ.
ಈಗಾಗಲೇ ಹಲವು ಕಡೆಗಳಲ್ಲಿ ಹೋಳಿ ಆಚರಣೆ ಹಾಗೂ ಮುಸ್ಲಿಮರ ಪ್ರಾರ್ಥನೆಗೆ ಪ್ರತ್ಯೇಕ ಸಮಯ ನಿಗದಿಪಡಿಸಲಾಗಿದೆ. ಜೊತೆಗೆ, ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸರು ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಸಂಘರ್ಷ ತಡೆಗೆ ಗಸ್ತು, ಡ್ರೋನ್ ನಿಯೋಜನೆ ಸೇರಿದಂತೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಜೊತೆಗೆ, ಸಾಮಾಜಿಕ ಮಾಧ್ಯಮಗಳ ಮೇಲೂ ಕಣ್ಣಿರಿಸಿದ್ದಾರೆ.