ಸಾರಾಂಶ
ನವದೆಹಲಿ: ಬಿಜೆಪಿ, ಎನ್‌ಡಿಎ ಕೂಟದ ಜೊತೆಗೂಡಿ ಮೂರನೇ ಬಾರಿಗೆ ಸರ್ಕಾರ ರಚಿಸುವ ತಯಾರಿಯಲ್ಲಿದೆ. ಈ ನಡುವೆ ಇಂಡಿಯಾ ಕೂಟ ಟಿಡಿಪಿಯನ್ನು ಸೆಳೆಯುವುದಕ್ಕೆ ಮುಂದಾಗಿದ್ದು, ಈ ಕುರಿತು ಮಾತುಕತೆ ನಡೆಸಲಾಗುತ್ತಿದೆ ಎನ್ನುವ ಮಾತುಗಳು ಹರಿದಾಡಿತ್ತು. ಇದಕ್ಕೆ ತೆಲುಗು ದೇಶಂ ಪಕ್ಷ(ಟಿಡಿಪಿ) ಪ್ರತಿಕ್ರಿಯಿಸಿದ್ದು, ಎನ್‌ಡಿಎ ಜೊತೆಯಲ್ಲಿಯೇ ಇರುತ್ತೇವೆ. ಇದೆಲ್ಲ ಊಹಾಪೋಹದ ಸುದ್ದಿ ಎಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಟಿಡಿಪಿ ಹಿರಿಯ ನಾಯಕ ಕನಕಮೇಡಲ ರವಿಕುಮಾರ್,‘ಒಕ್ಕೂಟಗಳ ಮೇಲೆ ಚಂದ್ರಬಾಬು ನಾಯ್ಡು ಅವರ ಛಾಪು ಅಳಿಸಲಾಗದು. ನಮ್ಮ ಮತ್ತು ಎನ್‌ಡಿಎ ಮೈತ್ರಿ ರಾಜ್ಯದ ಅಭಿವೃದ್ಧಿಗೆ ಪೂರಕ. ನಮ್ಮ ಬಾಂಧವ್ಯ ವಹಿವಾಟು ಅಲ್ಲ. ಅದು ಭಾರತದ ದೃಷ್ಟಿಕೋನ. ನಾವು ಎನ್‌ಡಿಎ ಭಾಗವಾಗಿಯೇ ಉಳಿಯುತ್ತೇವೆ. ಇಂಡಿಯಾ ಮಹಾಮೈತ್ರಿ ಕೂಟವನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ.’ ಎಂದಿದ್ದಾರೆ.
ಚಂದ್ರಬಾಬು ನಾಯ್ಡುಗೆ ಎನ್‌ಡಿಎ ಸಂಚಾಲಕ ಪಟ್ಟ?
ನವದೆಹಲಿ: ಲೋಕಸಭೆ ಚುನಾವಣೆ ಮತ ಎಣಿಕೆಗಳು ಒಂದು ಹಂತಕ್ಕೆ ಬರುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದಲ್ಲಿ ದಿಗ್ವಿಜಯ ಸಾಧಿಸಿರುವ ಟಿಡಿಪಿ ನಾಯಕ ಜಹನ್ಮೋಹನ ರೆಡ್ಡಿ ಅವರಿಗೆ ಫೋನ್ ಮಾಡಿ ಎನ್‌ಡಿಎಗೆ ಸಂಚಾಲಕ ಪಟ್ಟದ ಆಫರ್ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಬಿಜೆಪಿ ಏಕಾಂಗಿಯಾಗಿ ಬಹುಮತ ಗಳಿಸಲು ವಿಫಲವಾಗಿದೆ. ಹೀಗಾಗಿ ಮಿತ್ರಪಕ್ಷಗಳು ಈಗ ಬಿಜೆಪಿಗೆ ಅನಿವಾರ್ಯವಾಗಿವೆ. ಹೀಗಾಗಿ ಮಿತ್ರಪಕ್ಷಗಳನ್ನು ಚೆನ್ನಾಗಿ ನೋಡಿಕೊಳ್ಳುವ ಉದ್ದೇಶದಿಂದ ನಾಯ್ಡುಗೆ ಸಂಚಾಲಕ ಹುದ್ದೆ ಆಫರ್ ನೀಡಲಾಗಿದೆ. ಗೆಲುವಿನ ನಂತರ ಬಿಜೆಪಿ ನಂ.2 ನಾಯಕ ಅಮಿತ್ ಶಾ ಕೂಡ ನಾಯ್ಡುಗೆ ಕರೆ ಮಾಡಿ ಈ ಆಫರ್ ನೀಡಿದ್ದಾರೆ ಎಂದು ತಿಳಿದುಬಂದಿದೆ.ಇದೇ ವೇಳೆ, ಮೋದಿ ಅವರು ಜ.9ರಂದು ನಡೆಯಲಿರುವ ನಾಯ್ಡು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಲಿದ್ದಾರೆ ಎಂದು ಗೊತ್ತಾಗಿದೆ.