₹400ಕ್ಕೆ ಎಲ್ಪಿಜಿ ಸೇರಿದಂತೆ ಕೆಸಿಆರ್ ಬಂಪರ್ ಕೊಡುಗೆಗಳ ಪ್ರಣಾಳಿಕೆ
KannadaprabhaNewsNetwork | Published : Oct 16 2023, 01:45 AM IST / Updated: Oct 16 2023, 11:40 AM IST
₹400ಕ್ಕೆ ಎಲ್ಪಿಜಿ ಸೇರಿದಂತೆ ಕೆಸಿಆರ್ ಬಂಪರ್ ಕೊಡುಗೆಗಳ ಪ್ರಣಾಳಿಕೆ
ಸಾರಾಂಶ
ಉಚಿತ ಕೊಡುಗೆಗಳನ್ನು ಪ್ರಕಟಿಸಿದ ಕಾಂಗ್ರೆಸ್‌ಗೆ ಸಡ್ಡು, ರೈತರಿಗೆ ಪ್ರತಿ ಎಕರೆಗೆ ವರ್ಷಕ್ಕೆ 16000 ರು. ನೆರವು, ಎಲ್ಲರಿಗೂ 5 ಲಕ್ಷ ರು. ಜೀವ ವಿಮೆ, 15 ಲಕ್ಷ ರು. ಆರೋಗ್ಯ ವಿಮೆ, ಅಂಗವಿಕಲರಿಗೆ 6016 ರು. ಮಾಸಾಶನ, ಜನರಿಗೆ 5000 ರು. ಸಾಮಾಜಿಕ ಪಿಂಚಣಿ
ಹೈದರಾಬಾದ್: ಮುಂದಿನ ತಿಂಗಳು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ ಪಕ್ಷ ಪ್ರಕಟಿಸಿರುವ ಭರ್ಜರಿ ಉಚಿತ ಕೊಡುಗೆಗಳಿಗೆ ಸಡ್ಡು ಹೊಡೆದಿರುವ ಬಿಆರ್‌ಎಸ್ ನಾಯಕ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್, ತಾವು ಮತ್ತೆ ಅಧಿಕಾರಕ್ಕೆ ಬಂದರೆ 400 ರು.ಗೆ ಎಲ್ಪಿಜಿ ಸಿಲಿಂಡರ್ ಸೇರಿದಂತೆ ಹಲವು ಬಂಪರ್ ಕೊಡುಗೆಗಳನ್ನು ನೀಡುವುದಾಗಿ ಪ್ರಕಟಿಸಿದ್ದಾರೆ. ಭಾನುವಾರ ಬಿಆರ್‌ಎಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಅವರು, ನ.30ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ತಾವು ಮೂರನೇ ಬಾರಿ ಗೆದ್ದು ಸರ್ಕಾರ ರಚಿಸಿದರೆ ಮುಂದಿನ 5 ವರ್ಷದೊಳಗೆ ಈ ಕೆಳಗಿನ ಕೊಡುಗೆಗಳನ್ನು ನೀಡುವುದಾಗಿ ಪ್ರಕಟಿಸಿದರು. 1. ಅರ್ಹ ಫಲಾನುಭವಿಗಳಿಗೆ (ಬಡವರಿಗೆ) 400 ರು.ಗೆ ಎಲ್ಪಿಜಿ ಸಿಲಿಂಡರ್ 2. ಬಡತನ ರೇಖೆಗಿಂತ ಕೆಳಗಿರುವ 93 ಲಕ್ಷ ಕುಟುಂಬಗಳಿಗೆ 5 ಲಕ್ಷ ರು. ಉಚಿತ ಜೀವ ವಿಮೆ 3. ಸಾಮಾಜಿಕ ಭದ್ರತಾ ಪಿಂಚಣಿಯ ಮೊತ್ತ ಈಗಿರುವ 2016 ರು.ನಿಂದ ಮಾಸಿಕ 5000 ರು.ಗೆ ಏರಿಕೆ 4. ಅಂಗವಿಕಲರಿಗೆ ನೀಡುವ ಮಾಸಾಶನ ಈಗಿರುವ 4016 ರು.ನಿಂದ 6016 ರು.ಗೆ ಏರಿಕೆ 5. ‘ರೈತು ಬಂಧು’ ಯೋಜನೆಯಡಿ ರೈತರಿಗೆ ಪ್ರತಿ ಎಕರೆಗೆ ವರ್ಷಕ್ಕೆ ನೀಡುತ್ತಿರುವ 10000 ರು. ಮೊತ್ತ 16000 ರು.ಗೆ ಏರಿಕೆ 6. ‘ಆರೋಗ್ಯ ಶ್ರೀ’ ಯೋಜನೆ ಅಡಿ ಎಲ್ಲಾ ಅರ್ಹ ಫಲಾನುಭವಿಗಳಿಗೆ 15 ಲಕ್ಷ ರು. ಉಚಿತ ಆರೋಗ್ಯ ವಿಮೆ ತಮ್ಮ ಸರ್ಕಾರ ಪುನಃ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಭರವಸೆಗಳನ್ನೂ ಗಳಲ್ಲಿ ಈಡೇರಿಸುವುದಾಗಿ ಕೆಸಿಆರ್ ಹೇಳಿದರು. ಪಿಂಚಣಿ ಹಾಗೂ ರೈತು ಬಂಧು ಯೋಜನೆಯ ಮೊತ್ತವನ್ನು ಪ್ರತಿ ವರ್ಷ ಅಷ್ಟಷ್ಟಾಗಿ ಏರಿಸಿ ಐದು ವರ್ಷದಲ್ಲಿ ತಾವು ಹೇಳಿದ ಮೊತ್ತಕ್ಕೆ ತಲುಪಿಸುವುದಾಗಿ ತಿಳಿಸಿದರು.